ಕೋಲಾರ : ಕೋಲಾರದಲ್ಲಿ ಯುವತಿಯನ್ನ ಅಪಹರಿಸಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ನಗರದಲ್ಲಿ ಹಾಡುಹಗಲೇ ಸಿನಿಮೀಯ ರೀತಿಯಲ್ಲಿ ಆಗಸ್ಟ್ 13 ರಂದು ಯುವತಿಯನ್ನ ಇನ್ನೋವಾ ಕಾರಿನಲ್ಲಿ ಅಪಹರಿಸಲಾಗಿತ್ತು. ಯುವತಿಯನ್ನ ಪ್ರೀತಿಸುತ್ತಿದ್ದ ಭಗ್ನ ಪ್ರೇಮಿ ಶಿವು ಸೇರಿ ಆತನ ಸ್ನೇಹಿತರಾದ ಬಾಲಾಜಿ, ದೀಪಕ್ ಪೊಲೀಸರ ಅತಿಥಿಗಳಾಗಿದ್ದಾರೆ.
ಕೋಲಾರ ನಗರದಲ್ಲಿ ಆಗಸ್ಟ್ 13ರ ಮಧ್ಯಾಹ್ನ ಯುವತಿಯೋರ್ವಳನ್ನ ಇನ್ನೋವಾ ಕಾರಿನಲ್ಲಿ ಅಪಹರಿಸಲಾಗಿತ್ತು. ಯುವತಿಯ ಕಿಡ್ನಾಪ್ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಪುಲ್ ವೈರಲ್ ಆಗಿತ್ತು. ಯುವತಿಯ ತಂಗಿಯ ಜೊತೆ ಎಂಬಿ ರಸ್ತೆಯ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಆಗ ಯುವತಿಯನ್ನ ಪ್ರೀತಿಸುತ್ತಿದ್ದ ಶಿವು, ಆತನ ಸ್ನೇಹಿತರಾದ ಬಾಲಾಜಿ, ದೀಪಕ್ ಇನ್ನೋವಾ ಕಾರಿನಲ್ಲಿ ಬಂದು ಸಿನಿಮೀಯ ರೀತಿಯಲ್ಲಿ ಯುವತಿಯನ್ನ ಅಪಹರಿಸಿದ್ದರು. ತದನಂತ್ರ ಕಾರಿನಲ್ಲಿ ತುಮಕೂರಿಗೆ ಎಳೆದೊಯ್ದು ಲಾಡ್ಜ್ ನ ಕೊಠಡಿಯಲ್ಲಿ ಕೂಡಿ ಹಾಕಿದ್ದರು.
ಆದ್ರೆ, ಆಗಸ್ಟ್ 14ರ ನಸುಕಿನಲ್ಲಿ ಆರೋಪಿಗಳು ನಿದ್ದೆಯಲ್ಲಿದ್ದಾಗ ಯುವತಿ ತಪ್ಪಿಸಿಕೊಂಡು ಬಂದು ಪೋಷಕರಿಗೆ ಮೊಬೈಲ್ ಮೂಲಕ ತುಮಕೂರಿನಲ್ಲಿ ಇರೋದಾಗಿ ತಿಳಿಸಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಕೋಲಾರದ ಪೊಲೀಸ್ರು ತುಮಕೂರು ಪೊಲೀಸರ ಸಹಾಯದಿಂದ ಯುವತಿಯನ್ನ ವಶಕ್ಕೆ ಪಡೆದುಕೊಂಡರು. ಕಿಡ್ನಾಪ್ ಆರೋಪಿಗಳನ್ನ ಬಂಧಿಸಲು ಲಾಡ್ಜ್ ಬಳಿ ಪೊಲೀಸ್ರು ಹೋದಾಗ ಕಾರು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಇದೀಗ ಆರೋಪಿಗಳ ಬಳಿಯಿದ್ದ ಪೂರ್ತಿ ಹಣ ಖಾಲಿಯಾಗಿದ್ದರಿಂದ ಜಿಲ್ಲೆಗೆ ಬಂದು ಆಜ್ಞಾತ ಸ್ಥಳದಲ್ಲಿ ಅವಿತುಕೊಂಡಿದ್ದರು.
ಪೊಲೀಸ್ರು ಖಚಿತ ಮಾಹಿತಿ ಮೇರೆಗೆ ಭಗ್ನ ಪ್ರೇಮಿ ಶಿವು, ಸ್ನೇಹಿತರಾದ ಬಾಲಾಜಿ, ದೀಪಕ್ ಅವ್ರನ್ನ ಬುಧವಾರ ರಾತ್ರಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರು ಸೇರಿ ಇನ್ನಿತರ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ದೇವಾಂಗಪೇಟೆಯ ಶಿವು ಕಿಡ್ನಾಪ್ ಮಾಡಿದ್ದ ಯುವತಿಯನ್ನ ಪ್ರೀತಿಸುತ್ತಿದ್ದ, ಮದುವೆಯಾಗುವುದಾಗಿ ಯುವತಿಗೆ ತಿಳಿಸಿದ್ದ. ಆದ್ರೆ, ಯುವತಿ ಮತ್ತು ಮನೆಯವ್ರು ಮದುವೆಗೆ ಒಪ್ಪಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಶಿವು ಸ್ನೇಹಿತರ ಜೊತೆಗೂಡಿ ಅಪಹರಿಸಿದ್ದ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.