ಮಂಡ್ಯ: ಡ್ರೋಣ್ ಪ್ರತಾಪ ಹಾರಿಸಿದ್ದು ಡ್ರೋಣ್ ಅಲ್ಲ, ಕಾಗೆ ಅನ್ನೋ ಸುದ್ದಿ ಭಾರೀ ಚರ್ಚೆಯಲ್ಲಿದೆ. ಈ ನಡುವೆಯೇ ಮತ್ತೊಬ್ಬ ಸಾಧಕ, ಕೆರೆ ಕಾಮೇಗೌಡರ ಸಾಧನೆ ಬಗ್ಗೆ ಬಿಸಿ ಬಿಸಿ ಚರ್ಚೆಯಾಗ್ತಿದೆ.
ಹೌದು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮ ಕಲ್ಮನೆ ಕಾಮೇಗೌಡರು ತಾನು ಸಾಕಿದ ಕುರಿಗಳನ್ನ ಮಾರಾಟ ಮಾಡಿ, 16 ಕೆರೆ-ಕಟ್ಟೆಗಳನ್ನ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಆ ಮೂಲಕ ಕಾಡು ಪ್ರಾಣಿಗಳ ದಾಹ ನೀಗಿಸಿದ್ದಾರೆ. ಇವರೊಬ್ಬ ಆಧುನಿಕ ಭಗೀರಥ ಅಂತೆಲ್ಲಾ ಸಾಕಷ್ಟು ಬಿರುದುಗಳು, ಪ್ರಶಸ್ತಿಗಳು, ಸನ್ಮಾನಗಳು ಕಾಮೇಗೌಡರಿಗೆ ಸಂದಿದ್ದವು.
ಅಷ್ಟೇ ಅಲ್ಲದೇ, ಸ್ವತಃ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ಮನ್ ಕೀ ಬಾತ್ ನಲ್ಲಿ ಕಾಮೇಗೌಡರ ಕಾರ್ಯಯವನ್ನ ಪ್ರಶಂಸಿಸಿದ್ದರು.
ಪ್ರಧಾನಿ ಶ್ಲಾಘನೆ ಬಳಿಕ ರಾಜ್ಯ ಸರ್ಕಾರ ಜೀವಿತಾವಧಿವರೆಗೆ ಉಚಿತ ಬಸ್ ಪಾಸ್ ನೀಡಿ, ಮಗನಿಗೆ ಉದ್ಯೋಗ, ಮನೆ ಕಟ್ಟಿಕೊಡುವ ಹಾಗೂ ಪಿಂಚಣಿ ವ್ಯವಸ್ಥೆ ಮಾಡುವ ಭರವಸೆ ನೀಡಿತ್ತು.
ಈ ನಡುವೆಯೇ ಇಡೀ ದಾಸನದೊಡ್ಡಿ ಗ್ರಾಮದ ಜನ ಕಾಮೇಗೌಡರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಕಾಮೇಗೌಡರ ವಿರುದ್ಧ ಡಿಸಿಗೆ ದೂರು:
ಕಾಮೇಗೌಡ ಸ್ವತಃ ಕೆರೆ-ಕಟ್ಟೆಗಳನ್ನ ಕಟ್ಟಿಸಿದ್ದು, ಗಿಡಗಳನ್ನ ನೆಟ್ಟು ಪೋಷಿಸಿದ್ದೆಲ್ಲಾ ಸುಳ್ಳು. ಯಾರೋ ಕಟ್ಟಿದ ಕೆರೆ-ಕಟ್ಟೆಗಳನ್ನ ನಾನು ಕಟ್ಟಿದ್ದು ಅಂತಾರೆ. 2 ಸಾವಿರ ಗಿಡಗಳನ್ನ ನೆಟ್ಟಿರೋದೂ ಸುಳ್ಳು. ಸರ್ಕಾರಿ ಜಾಗವನ್ನ ತನ್ನದೇ ಜಾಗ ಅಂತಾ ಹೇಳ್ತಾನೆ. ಊರಿನ ಇತರರಿಗೆ ಅಲ್ಲಿಗೆ ಪ್ರವೇಶ ಕೊಡಲ್ಲ. ಆತ ಒಬ್ಬ ದೊಡ್ಡ ಕಳ್ಳ. ಕಳ್ಳತನದಿಂದ ಬೆಟ್ಟದ ತಪ್ಪಲಿನಲ್ಲಿರುವ ಮರಳನ್ನ ಕದ್ದು ಮಾರಾಟ ಮಾಡ್ತಾನೆ. ರೈತರು ಬೆಳೆದಿದ್ದ ಬೆಳೆಗಳನ್ನು ಕದ್ದಿರುವ ಬಗ್ಗೆ ಈ ಹಿಂದೆಯೂ ಸಾಕಷ್ಟು ದೂರುಗಳಿದ್ದವು. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಕಾಮೇಗೌಡನ ವಿರುದ್ಧ ಪ್ರಕರಣಗಳಿವೆ.
ಕಾಮೇಗೌಡ ಒಬ್ಬ ಡೋಂಗಿ ಪರಿಸರ ಪ್ರೇಮಿ.
ಆತನಿಗೆ ಸರ್ಕಾರ ಮತ್ತು ಸಂಘಟನೆಗಳು ನೀಡಿರುವ ಬಿರುದು, ಪ್ರಶಸ್ತಿ, ಸನ್ಮಾನಗಳ ಮರು ಪರಿಶೀಲಿಸಿ ಅಂತಾ ದಾಸನದೊಡ್ಡಿ ಗ್ರಾಮಸ್ಥರು ಮಂಡ್ಯ ಡಿಸಿಗೆ ಮನವಿ ಕೊಟ್ಟಿದ್ದಾರೆ.
ಕಾಮೇಗೌಡ ಒಬ್ಬ ಅನಾಗರಿಕ, ಕ್ರಿಮಿನಲ್ ಹಿನ್ನೆಲೆ ಉಳ್ಳ ವ್ಯಕ್ತಿ.
ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಕಾಮೇಗೌಡರ ವಿರುದ್ಧ ಕೇಸುಗಳಿವೆ. ಮಹಿಳೆಯರು, ಮಕ್ಕಳಿಗೆ ಮರ್ಯಾದೆ ಕೊಡಲ್ಲ. ಅನಾಗರಿಕನಂತೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ. ಮೃತ ತಾಯಿ ಮುಖ ನೋಡಲೂ ಬಾರದವನು ಜನರಿಗೆ ಉಪಯೋಗ ಮಾಡ್ತಾನ?
ಸರ್ಕಾರ ಇವನ ಪರ ಇದೆ ಅಂತಾ ಗ್ರಾಮಸ್ಥರಿಗೆ ನಿತ್ಯ ಕಿರುಕುಳ ನೀಡ್ತಾನೆ. ನಿತ್ಯ ಒಂದಲ್ಲ, ಒಂದು ಆರೋಪ ಮಾಡಿ ಮೇಲಾಧಿಕಾರಿಗೆ ದೂರು ಕೊಡ್ತಾನೆ.
ಸರ್ಕಾರದ ಅಧಿಕಾರಿಗಳೇ ಖುದ್ದು ಸ್ಥಳ ಪರಿಶೀಲನೆ ಮಾಡಬೇಕು, ಇಡೀ ಗ್ರಾಮಸ್ಥರನ್ನ ವೈಯಕ್ತಿಕವಾಗಿ ಅಭಿಪ್ರಾಯ ಪಡೆಯಿರಿ. ಆ ಬಳಿಕ ಆತ ನಿಜವಾಗಿಯೂ ಸಮಾಜ ಸೇವಕನ ಎಂಬುದನ್ನ ಮನಗಾಣುವಂತೆ ಡಿಸಿಗೆ ಕೊಟ್ಟಿರುವ ದೂರಿನಲ್ಲಿ ಮನವಿ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ
ಇನ್ನು ಕಾಮೇಗೌಡರ ಅಸಲಿತನದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲೂ ವ್ಯಾಪಕ ಚರ್ಚೆಯಾಗ್ತಿದೆ.
ಕಾಮೇಗೌಡರು ಸಾರ್ವಜನಿಕರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ, ಅಕ್ರಮವಾಗಿ ಕದ್ದು ಮರಳು ಮಾರುವ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಆ ಮೂಲಕ ಕಾಮೇಗೌಡರ ನಿಜ ಬಣ್ಣ ಬಯಲಿಗೆಳೆಯಲು ಯುವಕರು ಕರೆ ನೀಡಿದ್ದಾರೆ.
ಆ ಮೂಲಕ ಸಾಮಾಜಿಕ ಜಾಲ ತಾಣದಲ್ಲೂ ಕಾಮೇಗೌಡರ ಸಾಧನೆ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ.
….
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.
ಕಾಮೇಗೌಡರ ಸಾಧನೆ ಶೂನ್ಯನ…? ಡ್ರೋಣ್ ಪ್ರತಾಪ್ ಆಯ್ತು.. ಇದೀಗ ಕೆರೆ ಕಾಮೇಗೌಡರ ಸರದಿ..!
RELATED ARTICLES