Thursday, August 28, 2025
HomeUncategorized'ಪೈಲ್ವಾನ್​'ಗೇ ನಿಲ್ಲಲ್ಲ ಸ್ಟಾರ್​ ನಟರ ಸಿನಿಮಾಗಳ ಅಬ್ಬರ..!

‘ಪೈಲ್ವಾನ್​’ಗೇ ನಿಲ್ಲಲ್ಲ ಸ್ಟಾರ್​ ನಟರ ಸಿನಿಮಾಗಳ ಅಬ್ಬರ..!

ಈ ವರ್ಷ ಸ್ಟಾರ್ ನಟರ ಸಿನಿಮಾಗಳದ್ದೇ ಅಬ್ಬರ..! ವರ್ಷದ ಆರಂಭದಿಂದಲೂ ದರ್ಶನ್, ಶಿವಣ್ಣ, ಪುನೀತ್, ಸುದೀಪ್ ಹೀಗೆ ಸ್ಟಾರ್ ನಟರದ್ದೇ ದರ್ಬಾರು..! ಇಷ್ಟಕ್ಕೇ ಸ್ಟಾರ್​​ಗಳ ಸಿನಿಮಾ ಕಾರುಬಾರು ನಿಂತಿಲ್ಲ.. ಈ ವರ್ಷದ ಕೊನೆಯವರೆಗೂ ಸ್ಟಾರ್ ನಟರ ಸಿನಿಮಾಗಳು ಸೌಂಡು ಮಾಡಲಿವೆ.
ಹೌದು ಈ ವರ್ಷ ಭಾರಿ ಮಟ್ಟದ ನಿರೀಕ್ಷೆ ಹುಟ್ಟು ಹಾಕಿದ್ದ ಸಿನಿಮಾಗಳು ಸಾಕಷ್ಟಿದ್ದು, ಭರ್ಜರಿ ಸದ್ದು ಮಾಡಿವೆ. ವರ್ಷದ ಶುರುವಿನಲ್ಲಿಯೇ ಪವರ್ ಸ್ಟಾರ್ ಪುನಿತ್ ರಾಜ್​​ಕುಮಾರ್ ಅಭಿನಯದ ನಟಸಾರ್ವಭೌಮ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸೌಂಡ್​​ ಮಾಡಿತ್ತು. ಇದೀಗ ಪುನೀತ್ ಅವರ ಮೊತ್ತೊಂದು ಸಿನಿಮಾ ‘ಯುವರತ್ನ’ ಸೆಟ್ಟೇರಿದಾಗಿನಿಂದ್ಲೂ ದೊಡ್ಡ ಮಟ್ಟದಲ್ಲೇ ಸದ್ದು ಮಾಡ್ತಾಯಿದ್ದು ವರ್ಷದ ಕೊನೆಯಲ್ಲಿ ಚಿತ್ರ ರಿಲೀಸ್ ಆಗಬಹುದೆಂಬ ನಿರೀಕ್ಷೆಯಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಒಂದರ ಹಿಂದೆ ಒಂದು ತೆರೆ ಕಂಡಿದ್ದು ವರ್ಷದ ಆರಂಭದಲ್ಲೇ ‘ಯಜಮಾನ’ನಾಗಿ ತೆರೆ ಮೇಲೆ ಮಿಂಚಿದ್ದಾರೆ. ಇದಾದ ಬಳಿಕ ಕುರುಕ್ಷೇತ್ರದ ದುರ್ಯೋಧನನಾಗಿ ಅಬ್ಬರಿಸುತ್ತಿದ್ದಾರೆ. ಇದೀಗ ಡಿ ಬಾಸ್ ಅವರ ಮತ್ತೊಂದು ಸಿನಿಮಾ ಒಡೆಯ ಈ ವರ್ಷಾಂತ್ಯದಲ್ಲಿ ರಿಲೀಸ್ ಆಗಲಿದೆ.
ಹ್ಯಾಟ್ರಿಕ್ ಹೀರೊ ಶಿವರಾಜ್​ಕುಮಾರ್​ ಅಭಿಮಾನಿಗಳಿಗೆ ಒಮ್ಮೆಯೂ ನಿರಾಸೆ ಮಾಡಿಲ್ಲ..ಯಾಕಂದ್ರೆ ಶಿವಣ್ಣ ಅವರ ಒಂದಲ್ಲಾ ಒಂದು ಚಿತ್ರ ಪ್ರತಿ ವರ್ಷವೂ ತೆರೆ ಮೇಲೆ ಅಬ್ಬರಿಸುತ್ತಾನೇ ಇರುತ್ತೆ.. ಈ ವರ್ಷ ಕೂಡ ಕರುನಾಡ ಚಕ್ರವರ್ತಿಯ ಚಿತ್ರಗಳು ರಿಲೀಸ್ ಆಗಿವೆ. ಮೊದಲಿಗೆ ‘ಕವಚ’ ಚಿತ್ರದಲ್ಲಿ ಅಂದನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಅದಾದ ನಂತ್ರ ಪೊಲೀಸ್​ ಅಧಿಕಾರಿಯಾಗಿ ‘ರುಸ್ತುಂ’ ಸಿನಿಮಾದಲ್ಲಿ ಶಿವಣ್ಣ ಎಲ್ಲರ ಗಮನ ಸೆಳೆದ್ರು. ಇದೀಗ ಸೆಂಚುರಿ ಸ್ಟಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಯಾಗಿದ್ದು, ವರ್ಷದ ಕೊನೆಯಲ್ಲಿ ದ್ರೋಣನಾಗಿ ಮಿಂಚಲಿದ್ದಾರೆ.
ಇನ್ನು ಗೋಲ್ಡನ್​ ಸ್ಟಾರ್ ಗಣೇಶ್, ಪ್ರತಿ ಸಿನಿಮಾದಲ್ಲೂ ವಿಭಿನ್ನ ಲುಕ್ ಮೂಲಕ ಪ್ರೇಕ್ಷಕರ ಮನ ಸೆಳೀತಾರೆ. 99 ಚಿತ್ರದ ಮೂಲಕ ಹೊಸ ವರ್ಷಕ್ಕೆ ಎಂಟ್ರಿ ಕೊಟ್ಟ ಗಣಿ ಆಮೇಲೆ ಗಿಮಿಕ್ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡಿದ್ರು. ಸದ್ಯಕ್ಕೆ ಗಾಳಿಪಟ 2 ಹಾರಿಸುತ್ತಾ ಮಳೆ ಹುಡುಗ ಬ್ಯುಸಿಯಾಗಿದ್ದು, ವರ್ಷದ ಕೊನೆಯಲ್ಲಿ ಗೀತಾ ಸಿನಿಮಾದ ಗೀತೆ ಹಾಡುತ್ತಾ ಸೈಲೆಂಟ್ ಆಗಿ ತೆರೆ ಮೇಲೆ ಬಂದು ಮಿಂಚೋಕೆ ಹೊರ್ಟಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಹೇಳದಿದ್ರೆ ಹೇಗೆ. ಉಪ್ಪಿ ಅಂದ್ರೆನೇ ಡಿಫ್ರೆಂಟ್. ಅದೇ ರೀತಿ ಮಾಡೋ ಸಿನಿಮಾಗಳು ಕೂಡ ವಿಭಿನ್ನ ವಿಶೇಷ. ಜಗತ್ತಿನಲ್ಲಿ ನಡೆಯುತ್ತಿರೋ ರಿಯಾಲಿಟಿಯನ್ನೇ ಸಿನಿಮಾಗಳಲ್ಲೂ ರಿಯಲ್​​ ಆಗಿಯೇ ತೋರಿಸ್ತಾರೆ. ಅದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ತೆರೆ ಕಂಡ ಐ ಲವ್ ಯೂ ಸಿನಿಮಾ. ಇದೀಗ ಉಪ್ಪಿ ಬುದ್ಧಿವಂತ-2 ಚಿತ್ರದ ಶೂಟಿಂಗ್​​ನಲ್ಲಿ ತೊಡಗಿಸಿಕೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಇದೇ ವರ್ಷ ಬಿಡುಗಡೆಯಾಗುತ್ತದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. 3000 ಸಾವಿರ ಸ್ಕ್ರೀನ್​ಗಳಲ್ಲಿ ತೆರೆ ಕಂಡ ಚಿತ್ರ ಪ್ರೇಕ್ಷಕರ ಮನ ಗೆಲ್ಲೋದ್ರಲ್ಲಿ ಯಶಸ್ವಿಯಾಗಿದೆ. ಜೊತೆಗೆ ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಲುಕ್ ಹಾಗೂ ಆ್ಯಕ್ಟಿಂಗ್​ ನೋಡಿ ಇನ್ನೂ ಅದೇ ಗುಂಗಿನಲ್ಲಿದ್ದಾರೆ. ಕಿಚ್ಚ ಪರ ಭಾಷೆಗಳಲ್ಲೂ ತಮ್ಮದೇ ಆದಂಥಾ ಛಾಪು ಮೂಡಿಸಿದ್ದಾರೆ.
ಕರ್ನಾಟಕದ ಬಾದ್ ಷಾ ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಜೊತೆ ನಟಿಸಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಕ್ಟೋಬರ್ 2 ರಂದು ತೆಲುಗು ಹಾಗೂ ಕನ್ನಡದಲ್ಲಿ ರಿಲೀಸ್ ಆಗ್ತಾ ಇದೆ. ಜೊತೆಗೆ ಸಲ್ಲು ಭಾಯ್ ಅವರ ದಬಾಂಗ್ 3 ಚಿತ್ರದಲ್ಲೂ ಕಿಚ್ಚ ನಟಿಸಿರೋ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ಕ್ರಿಸ್ಮಸ್ ವೇಳೆಯಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ.
ಇನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ‘ಮಫ್ತಿ’ ಚಿತ್ರದಲ್ಲಿ ಶಿವಣ್ಣನ ಜೊತೆ ನಟಿಸಿದ್ರು. ಅದಾದ ನಂತ್ರ 2 ವರ್ಷಗಳ ಕಾಲ ಶ್ರೀ ಮುರಳಿಯವರ ಸಿನಿಮಾಗಳು ತೆರೆ ಕಂಡಿಲ್ಲ. ಇದೀಗ ಭರಾಟೆ ಚಿತ್ರ ಭರದಿಂದ ಸಾಗುತ್ತಿದ್ದು ಭರ್ಜರಿ ಚೇತನ್ ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರ ಇದೇ ಅಕ್ಟೋಬರ್​ 2ನೇ ವಾರ ತೆರೆ ಕಾಣಲಿದೆ. ಹಾಡು ಹಾಗೂ ಟ್ರೈಲರ್​​ನಿಂದ ಭರಾಟೆ ಚಿತ್ರ ಈಗಾಗಲೇ ಭಾರಿ ಸೌಂಡ್ ಮಾಡ್ತಾಯಿದೆ.
ಭರ್ಜರಿ ಸಿನಿಮಾ ಬಳಿಕ ಮತ್ತೆ ಗ್ಯಾಪ್ ಪಡೆದುಕೊಂಡಿರುವ ಧ್ರುವ ಸರ್ಜಾ ‘ಪೊಗರು’ ಚಿತ್ರದ ಮೂಲಕ ಬರಲಿದ್ದಾರೆ. ಆದರೆ ಪೊಗರು ಚಿತ್ರೀಕರಣ ನಡೀತಾನೇ ಇದೆ. ಸದ್ಯಕ್ಕೆ ಈ ಸಿನಿಮಾ ರಿಲೀಸ್​​ ಡೇಟ್​​ ಫಿಕ್ಸ್​ ಆಗಿಲ್ಲ..ಆದರೆ ನಿರೀಕ್ಷೆಯ ಚಿತ್ರಗಳ ಪೈಕಿ ಪೊಗರು ಮೊದಲ ಸಾಲಿನಲ್ಲಿದೆ.
ಕಿರಿಕ್ ಪಾರ್ಟಿ ಬಳಿಕ ಯಾವ ಚಿತ್ರದಲ್ಲೂ ನಟಿಸದ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ನಾಗಿ ಬರುತ್ತಿದ್ದಾರೆ. ಐದು ಭಾಷೆಯಲ್ಲಿ ಬರಲು ಸಜ್ಜಾಗಿರುವ ಈ ಚಿತ್ರ ರಿಲೀಸ್​​ಗೆ ರೆಡಿಯಾಗಿದೆ. ಆದರೆ ಯಾವಾಗ ಎಂಬುದರ ಸುಳಿವು ಬಿಟ್ಟುಕೊಟ್ಟಿಲ್ಲ. ಸಚಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿದ್ದಾರೆ.
ಒಟ್ನಲ್ಲಿ ಈ ವರ್ಷದ ಅಂತ್ಯದಲ್ಲಿ ಸಿನಿ ಪ್ರಿಯರಿಗೆ ಹಬ್ಬದೂಟ ಸಿಗೋದ್ರದಲ್ಲಿ ಯಾವುದೇ ಡೌಟ್ ಇಲ್ಲ..ವಿಶೇಷ ಹಾಗೂ ವಿಭಿನ್ನ ಕಥೆಗಳ ಸಿನಿಮಾಗಳು ನಿಮ್ಮನ್ನು ರಂಜಿಸೋದಂತೂ 100 ಪರ್ಸೆಂಟ್​ ಪಕ್ಕಾ!
-ಚರಿತ ಪಟೇಲ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments