ಶಿವಮೊಗ್ಗ: ಸೆಲ್ಫಿ ತೆಗೆಯುವ ಗೀಳಿಗೆ ಶಿವಮೊಗ್ಗದ ಯುವಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಗಾಜನೂರು ಡ್ಯಾಂ ನಲ್ಲಿಯೇ ಈ ದುರ್ಘಟನೆ ನಡೆದಿದ್ದು, ಈತ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ, ಡ್ಯಾಂ ವೀಕ್ಷಣೆಗೆ ಬಂದಿದ್ದ ಎಂದು ಹೇಳಲಾಗಿದೆ. ವಿನಾಯಕ (22) ಯುವಕನೇ ಸೆಲ್ಫಿ ಗೀಳಿಗೆ ಬಲಿಯಾದ ದುರ್ದೈವಿಯಾಗಿದ್ದಾನೆ.
ಈತ ಗಾಜನೂರಿನ ಪಂಪ್ ಹೌಸ್ ಬಳಿ ನಿಂತು ಸೆಲ್ಫಿ ತೆಗೆಯುವ ವೇಳೆ ಆಯಾ ತಪ್ಪಿ ಡ್ಯಾಂ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಅಗ್ನಿಶಾಮಕದಳದ ಸಿಬ್ಭಂಧಿ ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ.
ಸುಮಾರು ಮೂರು ಗಂಟೆ ಬಳಿಕ ವಿನಾಯಕನ ಮೃತ ದೇಹ ಪತ್ತೆಯಾಗಿದೆ. ಪಂಪ್ ಹೌಸ್ ಬಳಿ ನೀರನ್ನ ಹರಿಯುವುದನ್ನು ನಿಲ್ಲಿಸಿದ ಬಳಿಕ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಿಂದ 200 ಮೀಟರ್ ದೂರದಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.
ನಗರದ ಸವಳಂಗ ರಸ್ತೆಯ ವಿನಾಯಕ ನಗರದ ನಿವಾಸಿ ಸುಕುಮಾರ್ ಅವರ ಪುತ್ರನಾಗಿರುವ ವಿನಾಯಕ, ಇಂದು ಮಧ್ಯಾಹ್ನ ತನ್ನ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಡ್ಯಾಂ ಗೆ ಆಗಮಿಸಿದ್ದ.
ಇನ್ನೂ ವಿನಾಯಕನ ಮೃತದೇಹ ಶೋಧ ಕಾರ್ಯದ ವೇಳೆ ಎಫ್.ಎಸ್.ಓ ಹುಲಿಯಪ್ಪ, ಲೀಡಿಂಗ್ ಫೈರ್ ಮ್ಯಾನ್ ಸುನೀಲ್, ಚಾಲಕ ಸತೀಶ್, ಫೈರ್ ಮ್ಯಾನ್ ಅರುಣ್, ಶಿವಕುಮಾರ್, ಪ್ರಭು ಹಾಗೂ ತುಂಗ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳೀಯರು ಭಾಗಿಯಾಗಿದ್ದರು. ನಗರದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.