ಮಂಡ್ಯ : ಗೌರಿ ಹಬ್ಬದಲ್ಲಿ ಸಿಎಂ ಯಡಿಯೂರಪ್ಪ ಕಾವೇರಿಗೆ ಬಾಗಿನ ಸಲ್ಲಿಸಿದರು. ಸಿಎಂಗೆ ಸಚಿವರು, ಜನಪ್ರತಿನಿಧಿಗಳು ಸಾಥ್ ನೀಡಿದರು.
ಬಾಗಿನ ಸಲ್ಲಿಸಿದ ನಂತರ ಕಾವೇರಿ ಮಾತೆಗೆ ಪೂಜೆ ಸಲ್ಲಿಕೆ ಮಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಜೊತೆ ಸಚಿವರಾದ ರಮೇಶ್ ಜಾರಕಿ ಹೊಳಿ, ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮಶೇಖರ್, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ ಸಾಥ್ ನೀಡಿದರು.
ನಂತರ ಮಾತನಾಡಿದ ಸಿಎಂ, ಅತ್ಯಂತ ಸಂತಸ ತಂದ ಗಳಿಗೆ ಇದು. 5ನೇ ಬಾರಿ ಕಾವೇರಿಗೆ ಬಾಗಿನ ಸಲ್ಲಿಸುವ ಸೌಭಾಗ್ಯ ನನ್ನದು. ಬೃಂದಾವನ ವಿಶ್ವದರ್ಜೆಗೇರಿಸಲು ಸರ್ಕಾರದ ಚಿಂತನೆ ಇದೆ. ಕೇಂದ್ರದ ಅನುಮತಿ ಪಡೆದು ಮೇಕೆಧಾಟು ಯೋಜನೆ ಜಾರಿ ಮಾಡಲಾಗುವುದು ಎಂದರು.
ನೀರಾವರಿಗೆ ನಮ್ಮ ಸರ್ಕಾರದ ಪ್ರಥಮ ಆದ್ಯತೆ. ಇದುವರೆಗೂ ನೀರಾವರಿ ಯೋಜನೆಗಳಿಗೆ 74ಸಾವಿರ ಕೋಟಿ ಮಂಜೂರು ಮಾಡಲಾಗಿದೆ. ರೈತರ ಜಮೀನಿಗೆ ನೀರೊದಗಿಸುವ ಯೋಜನೆ ಆರಂಭವಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು, ಕೆರೆ-ಕಟ್ಟೆಗಳು ತುಂಬಿವೆ. ಇದು ಅತ್ಯಂತ ಸಂತಸದ ವಿಚಾರ ಎಂದರು.
8.48ಕೋಟಿ ವೆಚ್ಚದಲ್ಲಿ ಹೊಸದಾಗಿ 16 ಗೇಟ್ ಗಳ ಅಳವಡಿಕೆ ಮಾಡಲಾಗಿದೆ. ಸರ್ಕಾರ ರೈತಪರವಾಗಿದೆ ಎಂದ ಸಿಎಂ, ನಂತರ ಕಬಿನಿ ಕಡೆ ಪ್ರಯಾಣ ಬೆಳೆಸಿದರು.
ಸಿಎಂ ವಿರುದ್ಧ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದವರ ಬಂಧನ: ಕೆಆರ್ಎಸ್ ಅಣೆಕಟ್ಟೆ ಸುತ್ತ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ಸಿಎಂ ಯಡಿಯೂರಪ್ಪಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ಹೋರಾಟಗಾರರನ್ನು ಜಿಲ್ಲಾ ಪೊಲೀಸರು ಅವರವರ ಮನೆಯಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಸಿಎಂ ಯಡಿಯೂರಪ್ಪ ಕೆಆರ್ಎಸ್ನಲ್ಲಿ ಕಾವೇರಿಗೆ ಬಾಗೀನ ಅರ್ಪಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಹೋರಾಟಗಾರರಾದ ಕೆ.ಆರ್. ರವೀಂದ್ರ, ಗುರುಪ್ರಸಾದ್ ಕೆರಗೋಡು, ಮಂಚೇಗೌಡ, ಕೆಂಪೂಗೌಡ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ.
ಅಣೆಕಟ್ಟೆಯ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಕ್ಕೆ ಆಗ್ರಹ ಮಾಡಿದ್ದರು. ಆದರೆ ಇನ್ನೂ ಸರ್ಕಾರ ಯಾವುದೇ ನಿರ್ಧಾರ ಪ್ರಕಟ ಮಾಡಿಲ್ಲ. ಹೀಗಾಗಿ ಕಪ್ಪು ಬಾವುಟ ಹಾರಿಸಲು ಹೋರಾಟಗಾರರು ನಿರ್ಧಾರ ಮಾಡಿದ್ದರು.
-ಡಿ.ಶಶಿಕುಮಾರ್