ಕಾರವಾರ : ನಮ್ಮ ಮಂತ್ರಿಗಳು ರಾಜೀನಾಮೆ ನೀಡಿದರೆ ಸರ್ಕಾರ ದುರ್ಬಲವಾಗುತ್ತದೆ ಎಂದು ಯಡಿಯೂರಪ್ಪನವರನ್ನ ಗೊಂದಲಕ್ಕೀಡು ಮಾಡಿ ನಿದ್ರೆ ಬರದಂತೆ ಮಾಡಿದ್ದಾರೆ ಅಂತಾ ಉಜಿರೆ ಶ್ರೀರಾಮ ಪೀಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಂಚಮಸಾಲಿ ವಿರುದ್ಧ ಗುಡುಗಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದ ಹಿಂದುಳಿದ ವರ್ಗಗಳ ರಕ್ಷಣಾ ವೇದಿಕೆಯ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಬಲ ಸಮುದಾಯದವರ ನಡೆ ಬೇಸರ ತರಿಸುವಂತಿದೆ ಎಂದರು. ಬ್ರಹ್ಮಾನಂದ ಯಾವುದೇ ಒಂದು ಜಾತಿಯ ಪರ ಮಾತನಾಡಲು ಬಂದಿಲ್ಲ. 360 ಜಾತಿಗಳ ಕಣ್ಣೀರನ್ನ ಒರೆಸಲು ಬಂದು ಕೂತಿದ್ದೇನೆ. ಆಳುತ್ತಿರುವ ಸರ್ಕಾರ ಜಾತಿಯ ಸಂಖ್ಯಾಬಲ ಇದೆ ಎಂದು ಧುಮುಕಿದರೆ ಕುರುಕ್ಷೇತ್ರದಲ್ಲಿ ಕೌರವರ ವಿರುದ್ಧ ಕಡಿಮೆ ಸಂಖ್ಯಾಬಲವಿದ್ದ ಪಾಂಡವರು ಗೆದ್ದಿದ್ದನ್ನ ನೆನಪಿಟ್ಟುಕೊಳ್ಳಲಿ ಎಂದು ಎಚ್ಚರಿಸಿದರು.
ಇನ್ನು ಹಿಂದುಳಿದ ವರ್ಗ, ದುರ್ಬಲ ವರ್ಗ ಎಂದು ಹೇಳಲ್ಪಟ್ಟವರು ಓಟಿನ ಮುಖಾಂತರ ಮೇಲ್ವರ್ಗಕ್ಕೆ ಲಾಟಿಯನ್ನ ಕೊಟ್ಟು ಹೊಡೆಸಿಕೊಳ್ಳುತ್ತಿದ್ದೀರಿ. ಇದು ಖೇದಕರವಾದ ವಿಷಯವಾಗಿದ್ದು, ನಿಮ್ಮ ಓಟನ್ನ ಆಯುಧವಾಗಿ ಅವರಿಗೆ ಕೊಟ್ಟರೇ ಲಾಟಿ ಹಿಡಿದು ನಿಮ್ಮ ಬೆನ್ನ ಮೇಲೇ ಸವಾರಿ ಮಾಡುತ್ತಾರೆ ಎಚ್ಚರ ಅಂತಾ ಸಮಾವೇಶದಲ್ಲಿ ಸೇರಿದವರಿಗೆ ಕಿವಿಮಾತು ಹೇಳಿದರು. ಪ್ರಬಲ ಸಮುದಾಯವರು ನೂರಾರು ಕಿಲೋ ಮೀಟರ್ ಪಾದಯಾತ್ರೆ ಮಾಡುತ್ತಾರೆ, ಅದಕ್ಕೆ ಮಂತ್ರಿಗಳು ಬೆಂಬಲವಾಗಿ ನಿಂತುಕೊಂಡಿದ್ದಾರೆ ಅಂದ ಮಾತ್ರಕ್ಕೆ ಅವರ ಪರ ಮೃದು ಧೋರಣೆ ತೋರಲು ಸರ್ಕಾರಕ್ಕೆ ಯಾರು ಅಧಿಕಾರ ಕೊಟ್ಟಿದ್ದಾರೆ. ಅದು ನಮ್ಮ ಯಜಮಾನಿಕೆಯಿಂದ ಬಂದ ಆಸ್ತಿಯಲ್ಲ ಪಾಲು ಮಾಡಿ ಕೊಡೋದಕ್ಕೆ ಅಂತಾ ಬ್ರಹ್ಮಾನಂದ ಸ್ವಾಮೀಜಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
– ಉದಯ ಬರ್ಗಿ ಕಾರವಾರ