ಮಂಡ್ಯ: ಮಂಡ್ಯದ ಮೈಶುಗರ್ (ಮೈಸೂರು ಸಕ್ಕರೆ ಕಾರ್ಖಾನೆ) ಪರ ಮೈಸೂರು ರಾಜವಂಶಸ್ಥ ಯಧುವೀರ್ ಒಡೆಯರ್ ದನಿ ಎತ್ತಿದ್ದಾರೆ.
ಮೈಶುಗರ್ ಕಾರ್ಖಾನೆ ಆರಂಭ ಸಂಬಂಧ ಇತ್ತೀಚೆಗೆ ಭಾರೀ ಚರ್ಚೆಯಾಗ್ತಿದೆ. ಜೊತೆಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳೂ ಜೋರಾಗಿವೆ.
ಈ ನಡುವೆಯೇ ಮೈಸೂರು ರಾಜಮನೆತನದ ಯಧುವೀರ್ ಒಡೆಯರ್ ಮೈಶುಗರ್ ಸಕ್ಕರೆ ಕಾರ್ಖಾನೆಯ ಬಗ್ಗೆ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ಓ ಅಂಡ್ ಎಂ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯಡಿಯಲ್ಲಿ ಆರಂಭಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಯಧುವೀರ್ ಫೇಸ್ಬುಕ್ ಪೇಜ್ನಲ್ಲಿ ಏನಿದೆ?:
ಮಂಡ್ಯ ಜಿಲ್ಲೆಯು ಕಬ್ಬುಬೆಳೆ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಸಮಾನವಾಗಿದೆ.
ಮೈಶುಗರ್ ಕಾರ್ಖಾನೆಯ ಪರಂಪರೆಯ ದೃಷ್ಟಿಯಿಂದ ಖಾಸಗೀಕರಣಕ್ಕೆ ನಿರಂತರ ಪ್ರತಿರೋಧ ವ್ಯಕ್ತವಾಗುತ್ತಿರುವುದು ಅರ್ಥವಾಗುವಂತಹದ್ದಾಗಿದೆ. ಆದರೆ ಪ್ರತಿರೋಧವು ಕಳವಳಕ್ಕೆ ಕಾರಣವಾಗಿದೆ. ಏಕೆಂದರೆ ಮಂಡ್ಯ ಜಿಲ್ಲೆಯ ರೈತರು ಬೆಳೆದಿರುವ ಕಬ್ಬನ್ನು ಮಾರಾಟ ಮಾಡಲು ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ.
ಕಾರ್ಖಾನೆಯನ್ನು ನಡೆಸುವಲ್ಲಿ ಸರ್ಕಾರದ ವೈಫಲ್ಯ ಮತ್ತು ಸಂಪೂರ್ಣ ಖಾಸಗೀಕರಣದ ವಿರುದ್ಧ ಸಾರ್ವಜನಿಕರ ಭಾವನೆಯ ನಡುವೆ ನಮಗೆ ಇರುವ ಒಂದು ಆಯ್ಕೆಯೆಂದರೆ, ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯಡಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ನಡೆಸುವುದು.
ಈ ಮಧ್ಯಮ ವ್ಯವಸ್ಥೆಯು ಖಾಸಗೀಕರಣದ ವಿರುದ್ಧ ಸಾರ್ವಜನಿಕರಿಗಿರುವ ಭಾವನೆಯನ್ನು ತೃಪ್ತಿಪಡಿಸುವುದಲ್ಲದೆ ಕಾರ್ಖಾನೆಯು ಮತ್ತೊಮ್ಮೆ ಸಮೃದ್ಧಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಯಾವುದೇ ಸಂಕಷ್ಟಗಳನ್ನು ಎದುರಿಸಬೇಕಾಗಿರುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.