Saturday, May 28, 2022
Powertv Logo
HomePower Specialನಿರ್ಮಾಣವಾಗ್ತಿದೆ ವಿಶ್ವದ ಅತಿದೊಡ್ಡ ಗಾಜಿನ ಬ್ರಿಡ್ಜ್​

ನಿರ್ಮಾಣವಾಗ್ತಿದೆ ವಿಶ್ವದ ಅತಿದೊಡ್ಡ ಗಾಜಿನ ಬ್ರಿಡ್ಜ್​

ಸೇತುವೆಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತೆ. ಅದ್ರಲ್ಲೂ ಕಬ್ಬಿಣದ ಸೇತುವೆಗಳು, ಏಣಿ ಸೇತುವೆಗಳು, ಮರದ ಸೇತುವೆಗಳ ಬಗ್ಗೆ ಬಹುತೇಕರಿಗೆ ತಿಳಿದಿರುತ್ತೆ. ಹಾಗೆಯೇ ಅವುಗಳ ಮೇಲೆ ಓಡಾಡಿರುವ ಅನುಭವವೂ ಇರುತ್ತೆ. ಆದ್ರೆ ಗಾಜಿನ ಸೇತುವೆಯ ಬಗ್ಗೆ ನೀವು ಎಂದಾದ್ರೂ ಕೇಳಿದ್ದೀರಾ? ಅಲ್ಲಾ… ನಮ್ಮಲ್ಲಿ ಇರೋ ಮಾಮೂಲಿ ಸೇತುವೆಗಳೇ ನೆಟ್ಟಗಿಲ್ಲ ಇನ್ನು ಗಾಜಿನ ಸೇತುವೆ ಬೇರೆ ಇರುತ್ತಾ? ಒಂದು ವೇಳೆ ಅಂತಹ ಸೇತುವೆ ಇದ್ರೂ ಅದು ಎಷ್ಟು ದಿನ ಬಾಳಿಕೆ ಬರುತ್ತೆ ಅನ್ನೋ ಅನುಮಾನಗಳು ಹಲವರನ್ನ ಕಾಡೋದು ಸಹಜ. ಆದ್ರೆ ಇಂಥದ್ದೊಂದು ಸೇತುವೆ ಚೀನಾದಲ್ಲಿದೆ. ಆ ಸೇತುವೆ ಸದ್ಯದ ಮಟ್ಟಿಗೆ ವಿಶ್ವದ ಅತಿ ಉದ್ದದ ಸೇತುವೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮನೆಯಲ್ಲಿ ಗಾಜಿನ ಯಾವುದೇ ಪದಾರ್ಥಗಳನ್ನ ಇಟ್ರು ಅದನ್ನ ಜೋಪಾನವಾಗಿ ನೋಡಿಕೊಳ್ಳಬೇಕು. ಹಾಗಾಗಿಲ್ಲ ಅಂದ್ರೆ ಆ ಗಾಜಿನ ವಸ್ತುಗಳು ಪುಡಿಪುಡಿಯಾಗೋದು ಕನ್ಫರ್ಮ್​. ಇಂಥಾದ್ರಲ್ಲಿ ಗಾಜಿನ ಸೇತುವೆಯನ್ನ ಹೇಗೆ ನಿರ್ಮಿಸಲಾಗುತ್ತೆ? ಅದೂ ಅಲ್ಲದೆ ಅದರ ಮೇಲೆ ಮಾನವ ಹೇಗೆ ನಡೆದಾಡೋದಕ್ಕೆ ಸಾಧ್ಯ ಅನ್ನೋ ಅನುಮಾನ ಕೂಡ ಹಲವರನ್ನ ಕಾಡುತ್ತಿರೋದು ಸಹಜ. ಆದ್ರೆ ಈ ಗಾಜಿನ ಸೇತುವೆಯ ಮೇಲೆ ಕೇವಲ ಮನುಷ್ಯ ಮಾತ್ರವಲ್ಲ, ಒಂದು ಕಾರನ್ನೇ ಓಡಿಸಬಹುದು… ಆ ಕಾರು ಕೂಡ ಈ ಗಾಜಿನ ಸೇತುವೆಯ ಮೇಲೆ ಆರಾಮಾಗಿ ಸಾಗುತ್ತದೆ. ಇಂತಹ ಬೃಹತ್​ ಬೃಹತ್​ ಸೇತುವೆ ಈಗ ಇರೋದು ಚೀನಾದಲ್ಲಿ ಮಾತ್ರ. ಆದ್ರೆ ಈಗ ಚೀನಾಗೆ ಟಕ್ಕರ್ ಕೊಡೋದಕ್ಕೆ ಅಂತಲೇ ವಿಯೆಟ್ನಮ್​ ವಿಶ್ವದ ಅತಿದೊಡ್ಡ ಗಾಜಿನ ಸೇತುವೆ ನಿರ್ಮಿಸಿದೆ. ಇದು ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆ ಕೂಡ ಆಗಲಿದೆ.

ಇಷ್ಟು ದಿನ ಚೀನಾದಲ್ಲಿದ್ದ ಗಾಜಿನ ಸೇತುವೆ ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಅಂತ ಹೇಳಲಾಗ್ತಾ ಇತ್ತು. ಇದಕ್ಕೆ ಪೂರಕ ಅನ್ನೋ ಹಾಗೆ ಚೀನಾ ಕೂಡ ಆ ಗಾಜಿನ ಸೇತುವೆಗೆ ಒಳ್ಳೆ ಪಬ್ಲಿಸಿಟಿ ಕೊಟ್ಟಿತ್ತು. ಆದ್ರೆ ಮೊದ ಮೊದಲು ಈ ಗಾಜಿನ ಸೇತುವೆಗೆ ಬರೋದಕ್ಕೆ ಹಲವರು ಹೆದರುತ್ತಿದ್ರು. ಏನೂ ಆಗದಂತೆ ನಾವೇ ನೋಡಿಕೊಳ್ಳುತ್ತೇವೆ ಅಂದ್ರೆ ಯಾರು ಕೂಡ ನಂಬ್ತಾ ಇರ್ಲಿಲ್ಲ. ಇದೇ ಕಾರಣಕ್ಕೆ ಚೀನಾ ಸರ್ಕಾರ ಹಲವು ಮಂದಿಗೆ ಈ ಗಾಜಿನ ಸೇತುವೆಯನ್ನು ಒಡೆದು ತೋರಿಸುವ ಸವಾಲು ಹಾಕಿತ್ತು. ಹೀಗಾಗಿ ಹಲವು ಮಂದಿ ಈ ಗಾಜಿನ ಸೇತುವೆಯನ್ನ ಒಡೆಯಲು ಪ್ರಯತ್ನಿಸಿದ್ರು. ಇದಕ್ಕಾಗಿ ಸುತ್ತಿಗೆ, ಭಾರವಾದ ಕಬ್ಬಿಣದ ವಸ್ತುಗಳನ್ನಕೂಡ ಬಳಸಿಕೊಳ್ಳಲಾಯಿತು. ಆದ್ರೆ ಇದುವರೆಗೂ ಕೂಡ ಯಾರಿಂದಲೂ ಈ ಗಾಜಿನ ಸೇತುವೆಯನ್ನ ಸಂಪೂರ್ಣವಾಗಿ ನಾಶ ಮಾಡೋದಕ್ಕೆ ಸಾಧ್ಯವಾಗಿಲ್ಲ.

ಹಾಗಿದ್ರೆ ಈ ಗಾಜಿನ ಸೇತುವೆ ಹೇಗೆ ಕೆಲಸ ಮಾಡುತ್ತೆ ಅಂತ ನಿಮ್ಮಲ್ಲಿ ಹಲವರಿಗೆ ಅನುಮಾನ ಕಾಡ್ತಾ ಇರಬಹುದು. ಅದಕ್ಕೆ ಉತ್ತರ ತುಂಬಾನೇ ಸಿಂಪಲ್​. ಇವತ್ತು ಹೇಗೆ ನಾವು, ನೀವೆಲ್ಲ ಸ್ಮಾರ್ಟ್​ ಫೋನ್​ಗಳ ಡಿಸ್​​​​ಪ್ಲೇ ಒಡೆದು ಹೋಗ ಬಾರ್ದು ಅಂತ ಟ್ಯಾಂಪರ್​ ಗ್ಲಾಸ್​ ಹಾಕಿಸುತ್ತವೋ ಅದೇ ರೀತಿ, ಇಲ್ಲಿ ಬೃಹತ್​ ಟ್ಯಾಂಪರ್​ ಗ್ಲಾಸ್​ ಅನ್ನ ಅಳವಡಿಸಲಾಗಿದೆ. ಇಲ್ಲಿ ಒಂದೇ ಲೇಯರ್​ನ ಟ್ಯಾಂಪರ್​ ಗ್ಲಾಸ್ ಅಳವಡಿಸಲಾಗಿಲ್ಲ. ಬದಲಾಗಿ ಒಂದು ಗ್ಲಾಸಿನ ಮೇಲೆ ಮತ್ತೊಂದು ಟೆಂಪರ್​ ಗ್ಲಾಸ್​ನ ಹಾಗೆ ಹೆಚ್ಚು ಥಿಕ್​ನೆಸ್​ ಇರುವ 3 ಲೇಯರ್​ನ ಗ್ಲಾಸ್​ಗಳನ್ನ ಅಳವಡಿಸಲಾಗಿದೆ. ಹಾಗಾಗಿ ಇದು ತೂಗು ಸೇತುವೆಯ ಹಾಗೆ ಬೃಹತ್​ ವಾಹನಗಳ ಭಾರವನ್ನ ಕೂಡ ತಡೆದುಕೊಳ್ಳುತ್ತದೆ. ಇಂತದ್ದೇ ಗ್ಲಾಸ್​ಗಳನ್ನ ಚೀನಾ ತನ್ನ ಗಾಜಿನ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಬಳಸಿಕೊಂಡಿದೆ. ಹೀಗಾಗಿ ಆ ಗ್ಲಾಸ್​ಗಳು ವಿಶ್ವವನ್ನೇ ಗಮನ ಸೆಳೆದಿದೆ.

ಇದೀಗ ಚೀನಾವನ್ನ ಮೀರಿಸಿದ ಬೃಹತ್​ ಸೇತುವೆಯನ್ನ ವಿಯೆಟ್ನಂ ದೇಶ ನಿರ್ಮಿಸಿಕೊಂಡಿದೆ. ಇದು ಕೆಲವೇ ದಿನಗಳಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರಿಗೆ ತೆರೆಯಲಿದೆ. ವಿಯೆಟ್ನಾಂನ ಉತ್ತರದ ಹೈಲ್ಯಾಂಡ್ಸ್ ಪಟ್ಟಣವಾದ ಮೊಕ್ ಚೌನಲ್ಲಿ ಬರೋಬ್ಬರಿ 2,073.5 ಅಡಿ ಉದ್ದದ ಗಾಜಿನ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ. ವಿಯೆಟ್ನಾಮ್​ನ  ಹನೋಯಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಈ ಸೇತುವೆ ಭೂಮಿಯ ಮೇಲಿಂದ ಸುಮಾರು 500 ಅಡಿಗಳಷ್ಟು ಎತ್ತರದಲ್ಲಿದೆ. ಫ್ರೆಂಚ್ ಕಂಪನಿ ಸೇಂಟ್ ಗೊಬೈನ್ ಉತ್ಪಾದಿಸಿದ ಸೂಪರ್ ಟ್ಯಾಂಪರ್ಡ್ ಗ್ಲಾಸ್​ನಿಂದ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾದ ಕೇಬಲ್ ಕಾರ್ ವ್ಯವಸ್ಥೆಯನ್ನು ಸಹ ಅಳವಡಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.

ಸದ್ಯಕ್ಕೆ ಈ ಸೇತುವೆ ಏಪ್ರಿಲ್ 30ರಂದು ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ. ಇದರಲ್ಲಿ ಒಂದೇ ಬಾರಿಗೆ 500 ಜನರಿಗೆ ಮಾತ್ರ ನಡೆಯಲು ಅವಕಾಶ ಮಾಡಿಕೊಡಲಾಗಿದ್ದು, ಜನರ ಪ್ರತಿಕ್ರಿಯೆಯನ್ನ ನೋಡಿ ಇದರ ಇನ್ನಷು ಕಾಮಗಾರಿ ನಡೆಸಲಾಗುವುದು ಎಂದು ಹೇಳಲಾಗ್ತಾ ಇದೆ. ಒಟ್ಟಾರೆಯಾಗಿ ಈ ಗಾಜಿನ ಸೇತುವೆ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇರೋದಂತೂ ಸುಳ್ಳಲ್ಲ.

ಲಿಖಿತ್​​ ರೈ, ಪವರ್​​ ಟಿವಿ

- Advertisment -

Most Popular

Recent Comments