ಇಂದು ಬಲಿಷ್ಠ ಆಸೀಸ್​​ -ದೈತ್ಯ ವಿಂಡೀಸ್ ಫೈಟ್​

0
135

ವಿಶ್ವಕಪ್ ಮಹಾಸಮರದಲ್ಲಿ ಇಂದು ದೈತ್ಯ ವೆಸ್ಟ್​​ಇಂಡೀಸ್​ ಹಾಗೂ ಪ್ರಬಲ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಮೊದಲ ಪಂದ್ಯವನ್ನ ಜಯಿಸಿ, ಉತ್ಸಾಹದ ಅಲೆಯ ಮೇಲೆ ತೇಲುತ್ತಿರುವ ಉಭಯ ತಂಡಗಳಿಗೂ ಇಂದಿನ ಮ್ಯಾಚ್​​​ ಪ್ರತಿಷ್ಠೆಯ ಕದನವಾಗಿದೆ.
ಆಸಿಸ್​-ವಿಂಡೀಸ್​ ಮದಗಜಗಳ ಕಾದಾಟಕ್ಕೆ ನಾಟಿಂಗ್​ಹ್ಯಾಮ್​ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈಗಾಗಲೇ ಟೂರ್ನಿಯಲ್ಲಿ ಆಡಿರುವ ಮೊದಲ ಪಂದ್ಯದಲ್ಲೇ ಗೆದ್ದು ಉಭಯ ತಂಡಗಳು ಶುಭಾರಂಭ ಮಾಡಿವೆ. ಉಭಯ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸ್ಟ್ರಾಂಗ್​​​​​​ ಆಗಿರುವುದರಿಂದ ಬ್ಯಾಟ್​​, ಬೌಲ್​ ನಡುವಿನ ಸಮರ ಕುತೂಹಲ ಮೂಡಿಸಿದೆ.
ಈಗಾಗಲೇ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ವೆಸ್ಟ್​ಇಂಡೀಸ್​​ ಬಳಗ ಪಾರಮ್ಯ ಮೆರೆದಿದೆ. ಪಾಕ್​ ವಿರುದ್ಧ ಉತ್ತಮ ಬೌಲಿಂಗ್​ ಸಂಘಟಿಸಿದ ಹೋಲ್ಡರ್​ ಪಡೆ, ಕೇವಲ 136 ರನ್​ಗಳಿಗೆ ಸರ್ಫರಾಜ್​ ಬಳಗವನ್ನ ಆಲೌಟ್​ ಮಾಡಿತ್ತು. ಅಲ್ಲದೇ ಈ ಗುರಿಯನ್ನ 13.4 ಓವರ್​ಗಳಲ್ಲೇ ಬೆನ್ನತ್ತಿದ್ದು ವೆಸ್ಟ್ ಇಂಡೀಸ್​ ಉತ್ಸಾಹವನ್ನ ಮತ್ತಷ್ಟು ಹೆಚ್ಚಿಸಿದೆ.
ಇತ್ತ ಆಸ್ಟ್ರೇಲಿಯಾ ಬಳಗ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್​​ಗಳ ಗೆಲುವು ದಾಖಲಿಸಿದೆ. ಅಫ್ಘನ್​ ವಿರುದ್ಧ ಕೌಲ್ಟರ್​​ ನೈಲ್​ ಹೊರತುಪಡಿಸಿದ್ರೆ ಉಳಿದೆಲ್ಲಾ ಬೌಲರ್​ಗಳು ವಿಕೆಟ್​​ ಕೀಳುವಲ್ಲಿ ಸಫಲರಾಗಿದ್ದಾರೆ. ಅದಲ್ಲದೇ ಡೇವಿಡ್​​ ವಾರ್ನರ್ ಕಮ್​ಬ್ಯಾಕ್​ ಇನ್ನಿಂಗ್ಸ್​​​ ಹಾಗೂ ನಾಯಕ ಆ್ಯರೋನ್​ ಫಿಂಚ್​ ಉತ್ತಮ ಫಾರ್ಮ್​​​​​ ತಂಡದ ವಿಶ್ವಾಸ ಹೆಚ್ಚಿಸಿದೆ. ನಿಷೇಧದ ಬಳಿಕ ಕಮ್​ಬ್ಯಾಕ್​ ಮಾಡಿರುವ ಸ್ಟೀವ್​ ಸ್ಮಿತ್​ ಕೂಡ ಉತ್ತಮ ಇನ್ನಿಂಗ್ಸ್​​ ಕಟ್ಟಿದ್ರೆ ಆಸೀಸ್​​ ಮೇಲುಗೈ ಸಾಧಿಸಲಿದೆ.
ಟ್ರೆಂಟ್​​ ಬ್ರಿಡ್ಜ್​ ಮೈದಾನ ಬ್ಯಾಟಿಂಗ್​ ಸ್ನೇಹಿಯಾಗಿರುವುದು ಅಭಿಮಾನಿಗಳ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ. ವಿಂಡೀಸ್​ ಬಳಗದಲ್ಲಿ ಕ್ರಿಸ್ ​ಗೇಲ್, ಆಂಡ್ರೆ ರಸೆಲ್​​​​​​, ಡರೇನ್​ ಬ್ರಾವೋ, ಶಿಮ್ರೋನ್​ ಹೆಟ್ಮೆಯರ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಆಸಿಸ್​ ಬಳಗದ ಆ್ಯರೋನ್​ ಫಿಂಚ್​​, ಡೇವಿಡ್ ವಾರ್ನರ್​​,​ ​ಸ್ಪೀವ್​ ಸ್ಮಿತ್​, ಗ್ಲೆನ್​​​​​​​​ ಮ್ಯಾಕ್ಸ್​ವೆಲ್​ ಮೇಲೆ ಕಾಂಗರೂ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.
ಬಲಿಷ್ಠ ಹಾಗೂ ದೈತ್ಯ ತಂಡಗಳ ನಡುವಿನ ಇಂದಿನ ಕದನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ರನ್​ ಮಳೆಗಾಗಿ ಕಾದು ಕುಳಿತಿರುವ ಕ್ರಿಕೆಟ್ ಪ್ರೇಮಿಗಳ ಬಯಕೆ ಈಡೇರುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here