ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಶ್ರೀಲಂಕಾ,8ನೇ ಸ್ಥಾನದಲ್ಲಿರುವ ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ತಲಾ 1 ಸೋಲು, 1 ಗೆಲುವು ಕಂಡಿರುವ ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಜೊತೆಗೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ.
ಬ್ರೆಸ್ಟಾಲ್ (Bristol) ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಗಳ ಹೀನಾಯ ಸೋಲುಂಡಿದ್ದ ಪಾಕ್, 2ನೇ ಮ್ಯಾಚ್ ನಲ್ಲಿ ಇಂಗ್ಲೆಂಡ್ ವಿರುದ್ಧ 14ರನ್ ಗಳ ಜಯ ಸಾಧಿಸಿದೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಪಾಕ್ ಪಡೆ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌನ್ಸ್ ಬ್ಯಾಕ್ ಮಾಡಿ 348 ರನ್ ಕಲೆ ಹಾಕಿತ್ತು. ಇದೀಗ ಅದೇ ಆತ್ಮವಿಶ್ವಾಸದಲ್ಲಿ ಸಿಂಹಳೀಯರ ವಿರುದ್ಧ ಹೋರಾಟಕ್ಕಿಳಿಯಲಿದೆ.
ಇತ್ತ ಶ್ರೀಲಂಕಾ ತಂಡವೂ ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲುಂಡಿದೆ. ಆದ್ರೆ ಅಫ್ಘಾನಿಸ್ತಾನ ವಿರುದ್ಧದ 2ನೇ ಪಂದ್ಯದಲ್ಲಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಗೆಲವಿನ ಲಯ ಕಂಡು ಕೊಂಡಿರುವ ಶ್ರೀಲಂಕಾ ಬಳಗ ಇಂದಿನ ಪಂದ್ಯದಲ್ಲೂ ಗೆಲುವನ್ನ ಎದುರು ನೋಡುತ್ತಿದೆ.
ಪಾಕಿಸ್ತಾನ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಇಲ್ಲಿಯವರೆಗೂ ಒಂದೂ ಜಯ ಸಾಧಿಸಿಲ್ಲ. ವಿಶ್ವಕಪ್ ಇತಿಹಾಸದಲ್ಲಿ ಲಂಕಾ ಮತ್ತು ಪಾಕ್ 7 ಬಾರಿ ಮುಖಾಮುಖಿ ಆಗಿವೆ. ಈ ಏಳೂ ಪಂದ್ಯಗಳಲ್ಲೂ ಪಾಕಿಸ್ತಾನ ಗೆದ್ದು ಬೀಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದು ಇತಿಹಾಸ ಬರೆಯಲು ಸಿಂಹಳೀಯ ಪಡೆ ಸಜ್ಜಾಗಿದೆ.
ಲಂಕಾ ಪರ ನಾಯಕ ದಿಮುತ್ ಕರುಣರತ್ನೆ, ಕುಸಲ್ ಪೆರೆರಾ, ಲಸಿತ್ ಮಲಿಂಗ ಹೊರತು ಪಡಿಸಿದ್ರೆ ಉಳಿದೆಲ್ಲಾ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇತ್ತ ಪಾಕ್ ಪಾಳಯದಲ್ಲಿ ಬ್ಯಾಟ್ಸ್ಮನ್ಗಳು ಪಾರ್ಮ್ ಕಂಡುಕೊಂಡರೂ, ಆರಂಭಿಕ ಹಾಗೂ ಡೆತ್ ಓವರ್ಗಳಲ್ಲಿ ಬೌಲರ್ಗಳು ಹೆಚ್ಚು ರನ್ ಬಿಟ್ಟುಕೊಡುತ್ತಿರುವುದು ನಾಯಕನ ಚಿಂತೆಗೆ ಕಾರಣವಾಗಿದೆ.
ಹೀಗೆ ಸಮಾನ ಗೆಲುವು ಮತ್ತು ಸೋಲು ಕಂಡಿರುವ ಈ ಎರಡೂ ತಂಡಗಳೂ ಗೆಲುವನ್ನು ಎದುರು ನೋಡುತ್ತಿವೆ. ಇನ್ನು ಪಾಕ್ ವಿರುದ್ಧ ವಿಶ್ವಕಪ್ ಇತಿಹಾಸದಲ್ಲೇ ಗೆಲ್ಲದ ಶ್ರೀಲಂಕಾ ಒಂದೆಡೆಯಾದ್ರೆ, ಗೆಲುವಿನ ಟ್ರ್ಯಾಕ್ ಮುಂದುವರೆಸುವ ಒತ್ತಡ ಪಾಕ್ ಮೇಲಿದೆ. ಏಷ್ಯಾದ ಈ 2 ರಾಷ್ಟ್ರಗಳ ಹಣಾಹಣಿಗೆ ಇಂದು ಬ್ರೆಸ್ಟಾಲ್ (Bristol) ಮೈದಾನ ಸಾಕ್ಷಿಯಾಗಲಿದೆ.