ಇಂಡೋ-ಆಸೀಸ್​ ಮೆಗಾ ಫೈಟ್​​ಗೆ ಕ್ಷಣಗಣನೆ; ಹೇಗಿದೆ ಗೊತ್ತಾ ಕೊಹ್ಲಿ ಪಡೆ?

0
108

ಇದು ಕ್ರಿಕೆಟ್​ ಜಗತ್ತಿನ ಮದಗಜಗಳ ಕಾದಾಟ.. ಒಂದೆಡೆ ಐದು ಬಾರಿ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ.. ಮತ್ತೊಂದೆಡೆ ಎರಡು ಬಾರಿಯ ಚಾಂಪಿಯನ್​ ಟೀಮ್​ ಇಂಡಿಯಾ…!
ವಿಶ್ವಕಪ್​ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಶುಭಾರಂಭ ಮಾಡಿದೆ ಟೀಮ್​ಇಂಡಿಯಾ. ಆಸೀಸ್​ ಕೂಡ ಕ್ರಿಕೆಟ್​ ಶಿಶು ಅಫ್ಘಾನಿಸ್ತಾನ, ದೈತ್ಯ ವೆಸ್ಟ್​ಇಂಡೀಸ್​​ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದೆ. ಈ ಎರಡೂ ತಂಡಗಳ ಹೊಡಿಬಡಿ ಮುಖಾಮುಖಿ ವೀಕೆಂಡ್​ ಮಸ್ತಿಗೆ ಕಳೆಗಟ್ಟೋದ್ರಲ್ಲಿ ಡೌಟೇ ಬೇಡ.
ಇಂಡೋ ಆಸೀಸ್​ ಪಂದ್ಯಗಳ ಖದರ್ರೆ ಬೇರೆ. ಇಲ್ಲಿ ಕೇವಲ ಬ್ಯಾಟ್​ ಮತ್ತು ಬಾಲ್​ ಮಾತ್ರ ಮಾತಾಡಲ್ಲ. ಪ್ರತಿ ಹಂತದಲ್ಲೂ ಎದುರಾಳಿ ಆಟಗಾರರನ್ನ ಕಿಚಾಯಿಸ್ತಾರೆ ಆಸೀಸ್​ ಪ್ಲೇಯರ್ಸ್​. ಸ್ಲೆಡ್ಜಿಂಗ್​ ಏನೇ ಇರಲಿ ಅದಕ್ಕೆಲ್ಲ ಹಾಗೇ ತಿರುಗೇಟು ಕೊಡೋದ್ರಲ್ಲಿ ನಿಸ್ಸೀಮರಾಗಿರೋದೆ ವಿರಾಟ್ ಕೊಹ್ಲಿ.
ವಿಶ್ವಕಪ್​ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಕಿವೀಸ್​​ ವಿರುದ್ಧ ಸೋಲುಂಡ ಟೀಮ್​ಇಂಡಿಯಾ ನಂತರದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳಿತ್ತು. ನಂತರದ ಟೂರ್ನಿಯ ಅಸಲಿ ವಾರ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್​​ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆದ್ರೆ ಇಂದಿನ ಪಂದ್ಯ ಭಾರತಕ್ಕೆ ಅಗ್ನಿ ಪರೀಕ್ಷೆ.
ವಿಶ್ವಕಪ್​ ಟೂರ್ನಿಗೂ ಮುನ್ನ ವರ್ಷಾರಂಭದಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು ಆಸ್ಟ್ರೇಲಿಯಾ. ಆಗ 2 ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸಿತ್ತು. ಏಕದಿನ ಸರಣಿಯನ್ನೂ 2-3 ಅಂತರದಲ್ಲಿ ಗೆದ್ದು ಬೀಗಿತ್ತು. ಇದೀಗ ಆ ಸೇಡು ತೀರಿಸಿಕೊಳ್ಳಲು ಕೊಹ್ಲಿ ಬಾಯ್ಸ್​ ಸಜ್ಜಾಗಿದ್ದಾರೆ.
ಇನ್ನು ವಿಶ್ವ ಸಮರದಲ್ಲಿ ಆಸ್ಟ್ರೇಲಿಯಾ ಆಡಿದ 2 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ. ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್​​ಗಳ ಭರ್ಜರಿ ಗೆಲುವು ಕಂಡಿತ್ತು. ಇನ್ನು ವಿಂಡೀಸ್​​​​ ವಿರುದ್ಧದ 2ನೇ ಪಂದ್ಯದಲ್ಲಿ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ಗಳು ವೈಫಲ್ಯ ಅನುಭವಿಸಿದ್ರು. ಆತಂಕದ ನಡುವೆಯೂ ಸಂಘಟಿತ ಹೋರಾಟದ ನೆರವಿನಿಂದ 15ರನ್​ಗಳ ರೋಚಕ ಗೆಲುವು ದಾಖಲಿಸಿತ್ತು ಆಸೀಸ್​ ಬಳಗ.
ಅಂಕಿ-ಅಂಶಗಳ ವಿಚಾರದಲ್ಲೂ ಟೀಮ್​ಇಂಡಿಯಾ ಮೇಲೆ ಆಸಿಸ್​ ಪ್ರಭುತ್ವ ಸಾಧಿಸಿದೆ. ಏಕದಿನ ಮಾದರಿಯಲ್ಲಿ ಇಂಡೋ-ಆಸಿಸ್​ 136 ಮುಖಾಮುಖಿಯಾಗಿವೆ. ಇದರಲ್ಲಿ 49 ಬಾರಿ ಟೀಮ್​ಇಂಡಿಯಾ ಜಯ ಸಾಧಿಸಿದ್ರೆ, 77 ಪಂದ್ಯಗಳಲ್ಲಿ ಆಸಿಸ್​​ ಜಯಭೇರಿ ಬಾರಿಸಿದೆ. ಇನ್ನು ವಿಶ್ವಕಪ್​ ಮುಖಾಮುಖಿಯಲ್ಲೂ ಆಸಿಸ್​ನದ್ದೇ ಮೇಲುಗೈ.
ವಿಶ್ವಕಪ್​ನಲ್ಲಿ ಆಸಿಸ್​ V/S ಭಾರತ
ಪಂದ್ಯ -11
ಗೆಲುವು -03
ಸೋಲು -08
 ವಿಶ್ವಕಪ್​ ಟೂರ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಈವರೆಗೆ 11 ಬಾರಿ ಮುಖಾಮುಖಿ ಆಗಿವೆ. ಅದರಲ್ಲಿ ಕೇವಲ 3 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ರೆ, 8 ಮ್ಯಾಚ್​​ಗಳಲ್ಲಿ ಸೋಲುಂಡಿದೆ.

ಸೌತ್​​ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಟೀಮ್​ಇಂಡಿಯಾ ಉತ್ತಮ ಬೌಲಿಂಗ್​ ದಾಳಿ ಸಂಘಟಿಸಿತ್ತು. ಜೊತೆಗೆ ಬ್ಯಾಟಿಂಗ್​ ವಿಭಾಗದಲ್ಲೂ ಬೆಸ್ಟ್​​ ಪರ್ಫಾರ್ಮೆನ್ಸ್​​ ನೀಡಿತ್ತು. ಆದ್ರೆ ಆರಂಭಿಕ ಆಟಗಾರ ಶಿಖರ್​ ಧವನ್​, ವಿರಾಟ್​​ ಕೊಹ್ಲಿ ಅಸ್ಥಿರ ಫಾರ್ಮ್​ ಸದ್ಯಕ್ಕೆ ತಲೆ ನೋವು. ಇಂದಿನ ಪಂದ್ಯದಲ್ಲಾದ್ರು ವಿರಾಟ್​, ಧವನ್ ಫಾರ್ಮ್​ ಕಂಡುಕೊಳ್ತಾರಾ ಅನ್ನೋದೇ ಪ್ರಶ್ನೆ.

ಇತ್ತ ಆಸೀಸ್​​ ಪಾಳಯದಲ್ಲಿ ಡೇವಿಡ್​​ ವಾರ್ನರ್​ ,ಸ್ಟೀವ್​ ಸ್ಮಿತ್​​ ಕಮ್ ​ಬ್ಯಾಕ್​ ತಂಡದ ವಿಶ್ವಾಸ ಹೆಚ್ಚಿಸಿದೆ. ಆದ್ರೆ ಕಳೆದ ಪಂದ್ಯದಲ್ಲಿ ವಿಂಡೀಸ್​​ ಬಳಗ ಬೌನ್ಸ್​​ ಅಸ್ತ್ರಕ್ಕೆ ಕಾಂಗರೂ ಪಡೆಯ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ಗಳು ತರಗೆಲೆಯಂತೆ ಉದುರಿದ್ರು. ಆದರೂ ಅಂತಿಮ ಹಂತದಲ್ಲಿ ಸ್ಟೀವ್​ ಸ್ಮಿತ್​​, ನಥಾನ್​ ಕೌಲ್ಟರ್​​ ನೈಲ್​ ಕಟ್ಟಿದ ಅದ್ಭುತ ಇನ್ನಿಂಗ್ಸ್ ತಂಡದ ಮೊತ್ತ ಹಿಗ್ಗುವಲ್ಲಿ ನೆರವಾಗಿತ್ತು. ಮಿಚೆಲ್​ ಸ್ಟಾರ್ಕ್​, ಪಾಟ್​​ ಕುಮಿನ್ಸ್​​ರ ಬೌಲಿಂಗ್​ ಆಸಿಸ್​ ಗೆಲುವಿಗೆ ಕಾರಣವಾಗಿತ್ತು.

 ಕೆನ್ನಿಂಗ್​ಟನ್​ ಓವಲ್​ ಅಂಗಳದಲ್ಲೂ ಟೀಮ್​ಇಂಡಿಯಾ 15 ಪಂದ್ಯಗಳನ್ನಾಡಿ ಕೇವಲ 5ರಲ್ಲಿ ಜಯ ಸಾಧಿಸಿದ ಟ್ರ್ಯಾಕ್​ ರೆಕಾರ್ಡ್​​​ ಹೊಂದಿದೆ. ಎಲ್ಲಾ ಅಂಕಿ-ಅಂಶಗಳು ಆಸ್ಟ್ರೇಲಿಯಾ ಪರ ಇರೋದು ಸುಳ್ಳೇನಲ್ಲ. ಆದ್ರೆ ಅದನ್ನೆಲ್ಲಾ ಮೀರಿ ಟೀಮ್ ​ಇಂಡಿಯಾ ಗೆಲ್ಲೋ ಪ್ರತಿಭೆಗಳನ್ನ ಈ ಬಾರಿ ಹೊಂದಿದೆ. ಇಂದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಮ್ಯಾಜಿಕ್​ ವರ್ಕೌಟ್​ ಆಗುತ್ತೆ ಅನ್ನೋದೇ ಕ್ರಿಕೆಟ್​ ಪ್ರೇಮಿಗಳ ಆಶಯ.

LEAVE A REPLY

Please enter your comment!
Please enter your name here