ವೀಕೆಂಡ್​ ಡಬಲ್ ಧಮಾಕದಲ್ಲಿ ಗೆಲ್ಲೋರ‌್ಯಾರು?

0
91

ವರ್ಲ್ಡ್​​ಕಪ್​ ಹಬ್ಬ ದಿನೇ ದಿನೇ ರೋಚಕ ಘಟ್ಟವನ್ನು ತಲುಪುತ್ತಿದೆ. ಟೂರ್ನಿಯ 10ನೇ ದಿನವಾದ ಇಂದು 2 ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ಹಾಗೂ ಬಾಂಗ್ಲಾ ದೇಶ ಮುಖಾಮುಖಿಯಾಗಲಿವೆ. 2ನೇ ಮ್ಯಾಚ್ ನಲ್ಲಿ ನ್ಯೂಜಿಲೆಂಡ್ ಅಫ್ಘಾನಿಸ್ತಾನ್ ಸೆಣಸಲಿವೆ.

ಯೆಸ್, ವಿಶ್ವಕಪ್​ ಟೂರ್ನಿಯ 10ನೇ ದಿನವಾದ ಇಂದು 2 ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಮೊದಲ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್​​ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮಖಿಯಾಗಲಿವೆ. 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್​​ ಪಡೆ ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಕಾರ್ಡಿಫ್​ನ ಸೋಪಿಯಾ ಗಾರ್ಡಿನ್ಸ್​​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಗೆಲುವಿಗಾಗಿ ಫೈಟ್​​​ ನಡೆಸಲಿವೆ.
ವಿಶ್ವದ ಘಟಾನುಘಟಿ ತಂಡಗಳಿಗೆ ಶಾಕ್ ನೀಡಿರುವ ಬಾಂಗ್ಲಾ ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಲಾಢ್ಯ ಸೌತ್ ಆಫ್ರಿಕಾಗೆ ಸೋಲಿನ ರುಚಿ ತೋರಿಸಿತ್ತು. ಆದ್ರೆ ಪಾಕಿಸ್ತಾನದ ವಿರುದ್ಧ ಎರಡನೇ ಪಂದ್ಯದಲ್ಲಿ ತಾನೇ ಸೋಲಿಗೆ ಶರಣಾಗಿತ್ತು. ಆದ್ರೆ ಇಂದು ಅತಿಥೇಯ ಇಂಗ್ಲೆಂಡ್​ಗೆ ಟಕ್ಕರ್​​ ಕೊಡುತ್ತಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಆದರೆ, ಬಾಂಗ್ಲಾ ಸುಲಭದ ತುತ್ತಲ್ಲ ಅನ್ನೋದು ಈಗಾಗಲೇ ಇಂಗ್ಲೆಂಡ್ ಗೆ ಗೊತ್ತಾಗಿದೆ. ವಿಶ್ವಕಪ್​ ಇತಿಹಾಸದಲ್ಲಿ ಬಾಂಗ್ಲಾ ಮತ್ತು ಇಂಗ್ಲೆಂಡ್ ಮೂರು ಬಾರಿ ಮುಖಾಮುಖಿ ಆಗಿವೆ. ಅದರಲ್ಲಿ ಎರಡು ಬಾರಿ ಬಾಂಗ್ಲಾ ಹುಲಿಗಳೇ ಗೆದ್ದು ಬೀಗಿದ್ದಾರೆ. ಇದು ಇಂಗ್ಲೆಂಡ್ ಆತ್ಮಬಲವನ್ನು ಕುಗ್ಗಿಸಿರೋದ್ರಲ್ಲಿ ಅನುಮಾನವೇ ಇಲ್ಲ.
ಇನ್ನು ತಂಡಗಳ ಬಲಾಬಲ ನೋಡೋದಾದ್ರೆ ಇಂಗ್ಲೆಂಡ್​ಗೆ ಜೇಸನ್ ರಾಯ್, ಜೋ ರೂಟ್, ಇಯಾನ್ ಮಾರ್ಗನ್, ಜಾಸ್ ಬಟ್ಲರ್, ಆಲ್ ರೌಂಡರ್ ಬೆನ್​ ಸ್ಟ್ರೋಕ್ಸ್​ ಬ್ಯಾಟಿಂಗ್ ಬಲವಾಗಿದ್ದಾರೆ. ಪಾಕ್​ ವಿರುದ್ಧದ ಪಂದ್ಯದಲ್ಲಿ ರಾಯ್, ಬಟ್ಲರ್ ಸಿಡಿಸಿದ ಶತಕ ಮತ್ತಷ್ಟು ಆತ್ಮ ವಿಶ್ವಾಸ ತುಂಬಿದೆ. ಬೌಲಿಂಗ್ ವಿಭಾಗದಲ್ಲಿ ಆರ್ಚರ್, ಲ್ಯಾಮ್ ಪ್ಲಂಕೆಟ್, ಆದಿಲ್ ರಶೀದ್ ತಂಡದ ಭರವಸೆಯಾಗಿದ್ದಾರೆ.
ಇತ್ತ ಬಾಂಗ್ಲಾ ಪಡೆಗೆ ಸತತ ಎರಡು ಅರ್ಧಶತಕ ಸಿಡಿಸಿ ಉತ್ತಮ ಫಾರ್ಮ್​ನಲ್ಲಿರುವ ಉಪನಾಯಕ ಶಕಿಬ್ ಅಲ್ ಹಸನ್, ವಿಕೆಟ್ ಕೀಪರ್ ಮುಷ್ಫೀಕರ್ ರಹೀಮ್ ಪ್ರಮುಖ ಬ್ಯಾಟಿಂಗ್ ಅಸ್ತ್ರಗಳು. ಶಕಿಬ್ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಬೌಲಿಂಗ್​​ನಲ್ಲೂ ಮಿಂಚಿದ್ದಾರೆ. ಮುಸ್ತಫಿಜುರ್ ರೆಹ್​​ಮಾನ್​, ಮೊಹಮ್ಮದ್ ಸೈಫುದ್ದಿನ್ ಪ್ರಮುಖ ಬೌಲಿಂಗ್​ ಅಸ್ತ್ರಗಳಾಗಿದ್ದಾರೆ.
ಇನ್ನು ಇಂದಿನ 2ನೇ ಪಂದ್ಯದಲ್ಲಿ ಕ್ರಿಕೆಟ್​​ ಶಿಶು ಅಪ್ಘಾನಿಸ್ತಾನ್ ಮತ್ತು ಬಲಾಢ್ಯ ನ್ಯೂಜಿಲೆಂಡ್ ಸೆಣೆಸಲಿವೆ. ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲೂ ಗೆದ್ದಿರುವ ನ್ಯೂಜಿಲೆಂಡ್ ಸುಲಭದ ಮೂರನೇ ಗೆಲುವನ್ನು ಎದುರು ನೋಡುತ್ತಿದೆ. ಆದ್ರೆ ಆಡಿದ 2 ಪಂದ್ಯಗಳಲ್ಲೂ ವಿರೋಚಿತ ಸೋಲುಂಡಿರುವ ಅಫ್ಘನ್​ ಸೋಲಿನಿಂದ ಹೊರ ಬರುವ ಪ್ರಯತ್ನದಲ್ಲಿದೆ.
ಕೇನ್ ವಿಲಿಯಮ್ಸ್ ನಾಯಕತ್ವದ ಕಿವೀಸ್ ಮೊದಲ ಪಂದ್ಯದಲ್ಲಿ ಲಂಕಾ ವಿರುದ್ಧ 10 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತ್ತು. ಬಳಿಕ 2ನೇ ಮ್ಯಾಚ್ ನಲ್ಲಿ ಬಾಂಗ್ಲಾ ವಿರುದ್ಧ 2 ವಿಕೆಟ್ ಗಳ ಜಯ ಸಾಧಿಸಿದೆ. ಇದೀಗ ಅಪ್ಘಾನ್ ವಿರುದ್ಧವೂ ಗೆದ್ದು ಹ್ಯಾಟ್ರಿಕ್ ಗೆಲುವಿನ ನಗೆ ಬೀರುವ ತವಕದಲ್ಲಿದೆ. ಆದರೆ ಗುಲ್ಬದಿನ್ ನೈಬ್ ಬಳಗ ಆಡಿದ ಎರಡೂ ಪಂದ್ಯಗಳಲ್ಲೂ ಟಫ್​ ಫೈಟ್​ ನೀಡಿದ್ದು, ನ್ಯೂಜಿಲೆಂಡ್ ಸ್ವಲ್ಪವೇ ಸ್ವಲ್ಪ ಯಾಮಾರಿದ್ರು ಕಷ್ಟವೇ.
ಒಟ್ಟಿನಲ್ಲಿ ಇಂದು ಕ್ರಿಕೆಟ್ ಪ್ರಿಯರಿಗೆ ವಿಕೆಂಡ್​​ ಡಬಲ್ ಧಮಾಕ. ಎರಡೂ ಮ್ಯಾಚ್ ಗಳಲ್ಲೂ ತಂಡಗಳು ಉತ್ತಮ ಸಾಮರ್ಥ್ಯ ಹೊಂದಿರುವುದರಿಂದ ರೋಚಕ ಫೈಟ್​ ಅನ್ನಂತೂ ನಿರೀಕ್ಷಿಸಬಹುದು.

LEAVE A REPLY

Please enter your comment!
Please enter your name here