ರೋಚಕ ಫೈಟ್​​ನಲ್ಲಿ ನ್ಯೂಜಿಲೆಂಡ್​​​ಗೆ ಗೆಲುವು

0
148

ವಿಶ್ವಕಪ್​ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್​ ರೋಚಕ ಜಯ ಸಾಧಿಸಿತು. ಕೆನ್ನಿಂಗ್​ಟನ್​ ಓವಲ್​ ಮೈದಾನದಲ್ಲಿ ನಡೆದ 9ನೇ ಲೀಗ್​ ಫೈಟ್​​ನಲ್ಲಿ ಬಾಂಗ್ಲಾ ಹುಲಿಗಳ ಎದುರು ಕಿವೀಸ್​​ ಬಳಗ 2 ವಿಕೆಟ್​​ಗಳ ಪ್ರಯಾಸದ ಗೆಲುವು ದಾಖಲಿಸಿದೆ.
ಸೌತ್​ಆಫ್ರಿಕಾ ತಂಡವನ್ನು ಮಣಿಸಿದ ವಿಶ್ವಾಸದಲ್ಲಿದ್ದ, ಬಾಂಗ್ಲಾ ಪಡೆ ಗೆಲುವಿನ ವಿಶ್ವಾಸದಲ್ಲಿಯೇ ನಿನ್ನಯೂ ಕಣಕ್ಕಿಳಿದಿತ್ತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಡೀಸೆಂಟ್ ಆರಂಭ ಪಡೆದುಕೊಳ್ತು. ಆರಂಭಿಕರಾದ ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ 45 ರನ್ ಜೊತೆಯಾಟ ನೀಡಿದರು. ಸರ್ಕಾರ್ 25 ರನ್​ಗಳಿಸಿ ನಿರ್ಗಮಿಸಿದ್ರೆ, ತಮೀಮ್ 24 ರನ್​ಗಳಿಗೆ ಔಟಾದ್ರು.
ಬಳಿಕ ಕಣಕ್ಕಿಳಿದ ಮುಷ್ಫಿಕರ್​ ರಹೀಮ್​ 19 ರನ್​ಗಳಿಸಿ ರನೌಟ್​ ಬಲೆಗೆ ಬಿದ್ರು. ಆದರೆ ಅರ್ಧಶತಕ ಸಿಡಿಸಿದ ಶಕೀಬ್​ ಆಲ್​ ಹಸನ್​ ತಂಡಕ್ಕೆ ನೆರವಾದರು. 68 ಎಸೆತಗಳಲ್ಲಿ 7 ಬೌಂಡರಿ ಸಹಿತ 64 ರನ್​ಗಳಿಸಿದ ಶಕೀಬ್​ ತಂಡಕ್ಕೆ ಬಲ ತುಂಬಿದ್ರು. ಉತ್ತಮವಾಗಿ ಬ್ಯಾಟ್​​ ಬೀಸ್ತಾ ಇದ್ದ ಶಕೀಬ್​, ಡಿ ಗ್ರಾಂಡ್​ಹೊಮ್ಮೆಗೆ ವಿಕೆಟ್​ ಒಪ್ಪಿಸಿದ್ರೆ, ಇದರ ಬೆನ್ನಲ್ಲೇ ಮೊಹಮದ್​​ ಮಿಥುನ್​ ಪೆವಿಲಿಯನ್​ ಸೇರಿದ್ರು. ಇನ್ನು 20 ರನ್​ಗಳಿಗೆ ಮಹಮದುಲ್ಲಾ ಆಟಕ್ಕೆ ಮಿಚೆಲ್​ ಸ್ಯಾಂಟ್ನರ್​ ಬ್ರೇಕ್​ ಹಾಕಿದ್ರು.
ನಂತರ ಕಣಕ್ಕಿಳಿದ ಬ್ಯಾಟ್ಸ್​​ಮನ್​ಗಳೂ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದ್ರು. ಮೊಹಮದ್​ ಸೈಫುದ್ದೀನ್​ 29 ರನ್ ಸಿಡಿಸಿದ್ದು ಹೊರತು ಪಡಿಸಿದ್ರೆ ಉಳಿದೆಲ್ಲಾ ಲೋ ಆರ್ಡರ್​​ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ ಪರೇಡ್​​ ನಡೆಸಿದ್ರು. ದೊಡ್ಡ ಜೊತೆಯಾಟದ ಕೊರತೆಯ ನಡುವೆಯೂ ಬಾಂಗ್ಲಾ ಪಡೆ 244 ರನ್​ ಕಲೆಹಾಕುವಲ್ಲಿ ಯಶಸ್ವಿಯಾಯ್ತು.
225 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕಿವೀಸ್​​ ಬಳಗ 35 ರನ್​ಗಳಿಸುವಷ್ಟರಲ್ಲೇ ಮಾರ್ಟಿನ್​ ಗಪ್ಟಿಲ್​ ವಿಕೆಟ್​​ ಕಳೆದುಕೊಳ್ತು. ಇದರ ಬೆನ್ನಲ್ಲೇ ಇನ್ನೊರ್ವ ಆರಂಭಿಕ ಆಟಗಾರ ಕಾಲಿನ್​ ಮನ್ರೋ ಶಕೀಬ್​ ಆಲ್​ ಹಸನ್​ಗೆ ವಿಕೆಟ್​ ಒಪ್ಪಿಸಿದ್ರು.
ಬಳಿಕ ಕಣಕ್ಕಿಳಿದ ನಾಯಕ ಕೇನ್​ ವಿಲಿಯಮ್​ಸನ್​ ಹಾಗೂ ರಾಸ್​ ಟೇಲರ್​​ ಶತಕದ ಜೊತೆಯಾಟವಾಡಿದ್ರು. ವಿಲಿಯಮ್​ಸನ್​ 40 ರನ್​ ಸಿಡಿಸಿ ಔಟಾದ್ರೆ, ನಾಯಕನ​ ಬೆನ್ನಲ್ಲೇ ಟಾಮ್​ ಲಾಥಮ್ ಸೊನ್ನೆ ಸುತ್ತಿ ಪೆವಿಲಿಯನ್​ಗೆ ಮರಳಿದ್ರು. ​ಇನ್ನು ಉತ್ತಮ ಇನ್ನಿಂಗ್ಸ್​​ ಕಟ್ಟಿದ ರಾಸ್​ ಟೇಲರ್​ ಆಟ 80 ರನ್​ಗಳಿಗೆ ಅಂತ್ಯವಾಯ್ತು.
ಬಳಿಕ ಬಂದ ಬ್ಯಾಟ್ಸ್​​ಮನ್​ಗಳು ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಇದು ಬಾಂಗ್ಲಾ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿತಾದರೂ ಮಿಚೆಲ್​ ಸ್ಯಾಂಟ್ನರ್​​ ಹುಲಿಗಳಿಗೆ ಶಾಕ್​ ನೀಡಿದ್ರು. 12 ಎಸೆತಗಳಲ್ಲಿ 2 ಬೌಂಡರಿ ಸಿಡಿಸಿ ಅಬ್ಬರಿಸಿದ ಸ್ಯಾಂಟ್ನರ್​ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಅಂತಿಮವಾಗಿ ಮೊದಲ ಪಂದ್ಯದಲ್ಲಿ ಲಂಕಾ ಎದುರು 10 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿದ್ದ ನ್ಯೂಜಿಲೆಂಡ್​​, ಬಾಂಗ್ಲಾದೇಶದ ವಿರುದ್ಧ 2 ವಿಕೆಟ್​​ಗಳ ಗೆಲುವು ದಾಖಲಿಸಿತು. ಇತ್ತ ಸೋಲು ಕಂಡರೂ ದಿಟ್ಟ ಹೋರಾಟ ನಡೆಸಿದ ಬಾಂಗ್ಲಾದೇಶ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here