ಕೊಹ್ಲಿ ಪಡೆಗೆ ‘ರೋ’.`ಚ’ಕ ವಿಜಯ..!

0
222

ಸೌತಾಂಪ್ಟನ್ : ಆರಂಭದಲ್ಲಿ ಹರಿಣಗಳ ಬ್ಯಾಟ್ಸ್​ಮನ್​ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಾಹಲ್ (4 ವಿಕೆಟ್​​), ಬಳಿಕ ಅದೇ ಹರಿಣಗಳ ಬೌಲರ್​​​​ಗಳ ಮೇಲೆ ಸವಾರಿ ಮಾಡಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ( ಅಜೇಯ122) ಭಾರತಕ್ಕೆ ಗೆಲುವಿನ ಗಿಫ್ಟ್​ ನೀಡಿದ್ರು. ಈ ಇಬ್ಬರು ಸ್ಟಾರ್ ಆಟಗಾರರ ಅತ್ಯುತ್ತಮ ಆಟದ ನೆರವಿನಿಂದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ. ಸೌತ್ ಆಫ್ರಿಕಾ ಟೂರ್ನಿಯಲ್ಲಿ ಸತತ 3ನೇ ಸೋಲನುಭವಿಸಿದೆ.
ದಿ ರೋಸ್​​​ ಬೌಲ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಭಾರತದ ದಾಳಿಗೆ ನಡುಗಿತು. ವೇಗಿ ಜಸ್​ಪ್ರೀತ್​​​​ ಬುಮ್ರಾ ಭಾರತಕ್ಕೆ ಆರಂಭಿಕ ಯಶಸ್ಸನ್ನು ತಂದುಕೊಟ್ಟರು. ತಂಡದ ಮೊತ್ತ ಕೇವಲ11ರನ್​ ಆಗಿದ್ದಾಗ ಹಶಿಮ್ ಆಮ್ಲ (6) ಬುಮ್ರಾ ಬೌಲಿಂಗ್​ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್​ ನೀಡಿ ಪೆವಿಲಿಯನ್ ಸೇರಿದ್ರು. ತಂಡಕ್ಕೆ ಮತ್ತೆ 13ರನ್ ಸೇರುವಷ್ಟರಲ್ಲಿ, ಅಂದ್ರೆ ತಂಡದ ಮೊತ್ತ 24 ರನ್ ಆಗಿದ್ದಾಗ ಬುಮ್ರಾ ಮತ್ತೊಬ್ಬ ಓಪನರ್ ಕ್ವಿಂಟನ್ ಡಿಕಾಕ್​ಗೆ (10) ಪೆವಿಲಿಯನ್ ದಾರಿ ತೋರಿಸಿದ್ರು. ಡಿಕಾಕ್ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದ್ರು.
ಬಳಿಕ ನಾಯಕ ಫಾಫ್​ ಡುಪ್ಲೆಸಿಸ್ (38) ,ರಸ್ಸಿ ವಾನ್ ಡೆರ್ ಡಸ್ಸೆನ್ (22) ಚೇತರಿಕೆ ನೀಡುವ ಪ್ರಯತ್ನ ಮಾಡಿದ್ರು. ಆದರೆ ಯುಜುವೇಂದ್ರ ಚಾಹಲ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಚಾಹಲ್ ಕೇವಲ 2 ರನ್​ ಗಳ ಅಂತರದಲ್ಲಿ ಆ ಇಬ್ಬರು ಬ್ಯಾಟ್ಸ್​ಮನ್ ಗಳಿಗೆ ಪೆವಿಲಿಯನ್ ದಿಕ್ಕು ತೋರಿಸಿದ್ರು. ನಂತರ ಡೇವಿಡ್​​​ ಮಿಲ್ಲರ್​​ (31) ಕೂಡ ಚಾಹಲ್​ಗೆ ವಿಕೆಟ್ ಒಪ್ಪಿಸಿದ್ರು. ಅಂಡಿಲ್ ಫೆಹ್ಲುಕ್ವೇವೊ (34) ಕೂಡ ಚಾಹಲ್​ಗೆ ಔಟಾದರು. ಡುಮಿನಿ (3) ಕುಲ್ದೀಪ್​ ಯಾದವ್​ ಬಲೆಗೆ ಬಿದ್ರು. ಸೌತ್ ಆಫ್ರಿಕಾ ಪರ ಅತ್ಯಧಿಕ ರನ್ ಮಾಡಿದ ಕ್ರಿಸ್ ಮೋರಿಸ್ (42) ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದ್ರು. ಇಮ್ರಾನ್ ತಾಹಿರ್ ಕೂಡ ಸೊನ್ನೆ ಸುತ್ತಿ ಭುವಿ ಎಸೆತದಲ್ಲಿ ಔಟಾದ್ರು. ಬ್ಯಾಟ್ಸ್​ಮನ್​ಗಳೇ ನಾಚುವಂತೆ ಭಾರತದ ದಾಳಿಯನ್ನು ಎದುರಿಸಿದ ಬೌಲರ್ ಕಗಿಸೊ ರಬಾಡ ಅಜೇಯ 31ರನ್ ಗಳಿಸಿದ್ರು. ಅಂತಿಮವಾಗಿ 50 ಓವರ್ ಗಳಲ್ಲಿ 9 ವಿಕೆಟ್​ ಕಳೆದುಕೊಂಡು ಸೌತ್​ ಆಫ್ರಿಕಾ 227ರನ್​ ಗಳನ್ನು ಮಾಡಿತು.
ಒಟ್ಟಾರೆ ಚಾಹಲ್ 4, ಭುವನೇಶ್ವರ್ ಕುಮಾರ್ ಹಾಗೂ ಬುಮ್ರಾ ತಲಾ 2, ಕುಲ್​​ದೀಪ್​ ಯಾದವ್ 1 ವಿಕೆಟ್ ಕಿತ್ತರು.
228ರನ್​ ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಕ್ಕೆ ಸೌತ್ ಆಫ್ರಿಕಾ ವೇಗಿ ರಬಾಡ ಆರಂಭಿಕ ಆಘಾತ ನೀಡಿದ್ರು. ಟೀಮ್ ಇಂಡಿಯಾದ ಮೊತ್ತ 13ರನ್ ಆಗಿದ್ದಾಗ ಶಿಖರ್ ಧವನ್ (8) ಅವರ ವಿಕೆಟ್ ಉರುಳಿಸುವಲ್ಲಿ ರಬಾಡ ಯಶಸ್ವಿಯಾದ್ರು. ಬಳಿಕ ಉಪನಾಯಕ ರೋಹಿತ್ ಶರ್ಮಾ ಅವರೊಡಗೂಡಿದ ನಾಯಕ ವಿರಾಟ್​ ಕೊಹ್ಲಿ ಉತ್ತಮ ಜೊತೆಯಾಟ ಆಡುವ ಸೂಚನೆ ನೀಡಿದ್ದರು. ಆದರೆ, ತಂಡದ ಮೊತ್ತ 54ರನ್ ಆಗಿದ್ದಾಗ ಕೊಹ್ಲಿ (18)ಫೆಹ್ಲುಕ್ವೇವೊಗೆ ವಿಕೆಟ್ ಒಪ್ಪಿಸಿದ್ರು. ನಂತರ ರೋಹಿತ್ ಜೊತೆಗೂಡಿದ ಕನ್ನಡಿಗ ಕೆ.ಎಲ್ ರಾಹುಲ್ (26) ಹೆಚ್ಚು ಹೊತ್ತು ನಿಲ್ಲಲಿಲ್ಲ. ರಬಾಡ ಎಸೆತದಲ್ಲಿ ಡುಪ್ಲೆಸಿಸ್​ ಗೆ ಕ್ಯಾಚ್​ ನೀಡಿ ರಾಹುಲ್ ಔಟಾದ್ರು. ಬಳಿಕ ರೋಹಿತ್ ಶರ್ಮಾ ( ಅಜೇಯ 122) ಅವರನ್ನು ಸೇರಿಕೊಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ( 34) ಗೆಲುವಿನ ಸನಿಹ ತಂಡವನ್ನು ಕೊಂಡೊಯ್ದದರು. ಅಂತಿಮ ಹಂತದಲ್ಲಿ ಕ್ರಿಸ್​ ಮೋರಿಸ್​​​​​​ ಬಾಲ್​ನಲ್ಲಿ ಅವರಿಗೇ ಕ್ಯಾಚ್​ ನೀಡಿ ಪೆವಿಲಿಯನ್​ಗೆ ಹೆಜ್ಜೆ ಹಾಕಿದ್ರು. ಆ ವೇಳೆ ಗೆಲುವಿಗೆ 22 ಎಸೆತಗಳಲ್ಲಿ 14ರನ್​ ಬೇಕಿತ್ತು.  ಆಗ ರೋಹಿತ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಅಜೇಯ 15 ರನ್ ಬಾರಿಸಿ ಗೆಲುವಿನ ದಡ ಸೇರಿಸಿದ್ರು. ಇನ್ನೂ 15 ಬಾಲ್​ಗಳು ಬಾಕಿ ಇರುವಂತೆಯೇ ಭಾರತ 6 ವಿಕೆಟ್​ ಗಳಿಂದ ಗೆದ್ದು ಬೀಗಿತು. 

ಧೋನಿ, ಗಂಗೂಲಿ ಮಾಡಲಾಗದ ರೆಕಾರ್ಡ್ ಮಾಡಿದ್ರು ಕೊಹ್ಲಿ..!

LEAVE A REPLY

Please enter your comment!
Please enter your name here