ಚೊಚ್ಚಲ ಮ್ಯಾಚ್​​​ನಲ್ಲೇ ಸಿಗುತ್ತಾ ಕೊಹ್ಲಿ ಪಡೆಗೆ ಗೆಲುವು?

0
250

ಭಾರತೀಯ ಅಭಿಮಾನಿಗಳು ಬಹು ದಿನದಿಂದ ಕಾಯ್ತಾ ಇದ್ದ ದಿನ ಬಂದೇ ಬಿಟ್ಟಿದೆ. ಇಂದು ರೋಸ್​ ಬೌಲ್​ ಅಂಗಳದಲ್ಲಿ ನಡೆಯುವ ಸೌತ್​ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಟೀಮ್​ಇಂಡಿಯಾ ಅಸಲಿ ವಿಶ್ವಕಪ್​ ಹೋರಾಟಕ್ಕೆ ಕಾಲಿಡಲಿದೆ.
ಐಸಿಸಿ ಏಕದಿನ ರ‍್ಯಾಂಕಿಂಗ್​​ ಪಟ್ಟಿಯಲ್ಲಿ 2ನೇ ಸ್ಥಾನಲ್ಲಿರುವ ಟೀಮ್​ಇಂಡಿಯಾ, 3ನೇ ಸ್ಥಾನದಲ್ಲಿರುವ ಸೌತ್​​ ಆಫ್ರಿಕಾ ಇಂದು ಮುಖಾಮುಖಿಯಾಗಲಿವೆ. ಪ್ರಸಕ್ತ ಟೂರ್ನಿಯಲ್ಲಿ ಭಾರತಕ್ಕಿದು ಮೊದಲ ಪಂದ್ಯವಾದ್ರೆ, ಹರಿಣಗಳಿಗಿದು 3ನೇ ಪಂದ್ಯ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ 104ರನ್ ಗಳ ಸೋಲುಂಡ ಡು ಪ್ಲೆಸಿಸ್​​ ಪಡೆ ನಂತರದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಆಘಾತ ಅನುಭವಿಸಿದೆ. ಬಾಂಗ್ಲಾ ಹುಲಿಗಳ ಎದುರು 21ರನ್​ಗಳ ಸೋಲುಂಡಿರುವ ಫಾಫ್ ಡುಪ್ಲೆಸಿಸ್ ನೇತೃತ್ವದ ಸೌತ್ ಆಫ್ರಿಕಾ ಭಾರತದ ವಿರುದ್ಧ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. 

ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಭಾರತ ನಂ.1 : ತನ್ನ ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಮಾಡಲು ಸನ್ನದ್ಧರಾಗಿರುವ ಕೊಹ್ಲಿ ಬಾಯ್ಸ್ ಮುಂದೆ ಸೌತ್ಆಫ್ರಿಕಾಗೆ ಗೆಲುವು ಅಷ್ಟು ಸುಲಭವಲ್ಲ. ICC ರ‍್ಯಾಂಕಿಂಗ್ ಪಟ್ಟಿಯಲ್ಲಿ ಸೌತ್ ಆಫ್ರಿಕಾಕ್ಕಿಂತ ಟೀಮ್​ಇಂಡಿಯಾ ಆಟಗಾರರೇ ಟಾಪ್ 10ನಲ್ಲಿ ಹೆಚ್ಚಿದ್ದಾರೆ. ವಿರಾಟ್​ ಕೊಹ್ಲಿ ವಿಶ್ವದ ನಂಬರ್​​ 1 ಬ್ಯಾಟ್ಸ್​​ಮನ್​ ಆಗಿದ್ರೆ, ಬೌಲಿಂಗ್​ ವಿಭಾಗದಲ್ಲಿ ಜಸ್ಪ್ರೀತ್​​ ಬೂಮ್ರಾ ಅಗ್ರಸ್ಥಾನಿ​. ಜೊತೆಗೆ ಹಿಟ್​​ಮ್ಯಾನ್​ ರೋಹಿತ್​​ ಶರ್ಮಾ ವಿಶ್ವದ 2ನೇ ಬೆಸ್ಟ್​​ ಬ್ಯಾಟ್ಸ್​​ಮನ್​ ಆಗಿದ್ರೆ, ಬೌಲಿಂಗ್​ ನಲ್ಲಿ ಟೀಮ್​ಇಂಡಿಯಾ ಸ್ಪಿನ್ ಅಸ್ತ್ರಗಳಾದ ಕುಲ್​-ಚಾ ಜೋಡಿ ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿದ್ದಾರೆ.
ಅಭ್ಯಾಸ ಪಂದ್ಯಗಳಲ್ಲಿ ಫಾರ್ಮ್​ ಸಮಸ್ಯೆ ಎದುರಿಸಿರುವ ಟೀಮ್​ಇಂಡಿಯಾ ಆರಂಭಿಕ ಆಟಗಾರರಾದ ರೋಹಿತ್​​ ಶರ್ಮಾ, ಶಿಖರ್​ ಧವನ್​ ಅಸಲಿ ಹೋರಾಟದಲ್ಲಿ ಯಶಸ್ಸು ಕಾಣ್ತಾರಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಆದ್ರೆ ಬಾಂಗ್ಲಾ ವಿರುದ್ಧದ ಪ್ರಾಕ್ಟಿಸ್​​ ಮ್ಯಾಚ್​​ನಲ್ಲಿ ಶತಕ ಸಿಡಿಸಿರುವ ಕೆಎಲ್​ ರಾಹುಲ್​,ಎಮ್​​ಎಸ್​​ ಧೋನಿ ಹಾಗೂ ನಾಯಕ ವಿರಾಟ್​​ ಕೊಹ್ಲಿ ಮೇಲೆ ನಿರೀಕ್ಷೆಯ ಭಾರವೇ ಇದೆ.
ಇನ್ನು ಆಲ್​ರೌಂಡರ್​​ಗಳಾದ ರವೀಂದ್ರ ಜಡೇಜಾ,ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್​ನಲ್ಲಿರೊದು ಕೊಹ್ಲಿ ಬಳಗಕ್ಕೆ ಪ್ಲಸ್​​ ಪಾಯಿಂಟ್​​​. ಇದಲ್ಲದೇ ಕುಲ್​ದೀಪ್​ ಯಾದವ್​, ಯಜುವೇಂದ್ರ ಚಹಾಲ್ ಸ್ಪಿನ್​ ಜೋಡಿ, ಹಾಗೂ ಭುವನೇಶ್ವರ್ ಕುಮಾರ್, ಜಸ್ಪ್ರೀತ್​​ ಬೂಮ್ರಾ ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ತಲೆನೋವಾಗಿದ್ದಾರೆ ಅಂದ್ರೆ ತಪ್ಪಲ್ಲ.
ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ದಕ್ಷಿಣ ಆಫ್ರಿಕಾಗೆ ಇದೀಗ ಇಂಜುರಿ ಸಮಸ್ಯೆ ಎಡೆ ಬಿಡದೆ ಕಾಡ್ತಿದೆ. ವೇಗಿ ಡೇಲ್​ ಸ್ಟ್ರೇನ್​ ಟೂರ್ನಿಯಿಂದಲೇ ಹೊರ ನಡೆದಿದ್ರೆ, ಲುಂಗಿ ನಿಡಿ ಕಣಕ್ಕಿಳಿಯೋದೆ ಅನುಮಾನ.
ಮೊದಲ ಎರಡೂ ಪಂದ್ಯಗಳಲ್ಲಿ ದೊಡ್ಡ ಜೊತೆಯಾಟದ ಕೊರತೆ ಹಾಗೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಡು ಪ್ಲೆಸಿಸ್​ ಬಳಗ ಇಂದಿನ ಪಂದ್ಯದಲ್ಲಿ ಮಿಂಚಲೇ ಬೇಕಿದೆ. ವಿಕೆಟ್​ ಕೀಪರ್​ ಕ್ವಿಂಟನ್​ ಡಿ ಕಾಕ್, ಹಶೀಮ್​ ಆಮ್ಲಾ, ವಾನ್ ಡೆರ್ ಡುಸೆನ್​, ಡೇವಿಡ್ ಮಿಲ್ಲರ್ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸ ಬೇಕಾದ ಅನಿವಾರ್ಯತೆಯಲ್ಲಿದ್ರೆ, ಇಮ್ರಾನ್​ ತಾಹೀರ್​​ ಕಾಗಿಸೋ ರಬಾಡ ಟೀಮ್​ಇಂಡಿಯಾ ಬ್ಯಾಟ್ಸ್​​​ಮನ್​ಗಳನ್ನ ಕಾಡೋ ಸಾಧ್ಯತೆ ಇದೆ.
ಸೌತ್ ಆಫ್ರಿಕಾ ಈಗಾಗಲೇ ಆಡಿದ 2 ಪಂದ್ಯದಲ್ಲೂ ಸೋತಿರುವುದರಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿ ಇಂದು ಕಣಕ್ಕಿಳಿಯಲಿದೆ. ಇತ್ತ ವಿರಾಟ್​ ಪಡೆ ಶುಭಾರಂಭ ಮಾಡುವತ್ತ ಚಿತ್ತ ನೆಟ್ಟಿದೆ. ಗೆಲುವಿನ ಒತ್ತಡದಲ್ಲಿ ಭಾರತವನ್ನು ಎದುರಿಸಿ ಹರಿಣಗಳು ಗೆಲ್ಲುವುದು ಕಷ್ಟ ಸಾಧ್ಯ. ಹಾಗೆಂದು ಡು ಪ್ಲೇಸಿಸ್​ ಬಳಗವನ್ನ ಸುಲಭವಾಗಿ ಪರಿಗಣಿಸುವಂತೂ ಇಲ್ಲ..

LEAVE A REPLY

Please enter your comment!
Please enter your name here