ಎರಡನೇ ಮ್ಯಾಚ್​ನಲ್ಲೂ ಕೊಹ್ಲಿ ಪಡೆಗೆ ದಿಗ್ವಿಜಯ ! ಇಲ್ಲಿದೆ ಇಂಡೋ-ಆಸೀಸ್​ ಕದನದ ಹೈಲೈಟ್ಸ್ ​

0
289

ಭಾರತಕ್ಕೆ 3ನೇ ವಿಶ್ವಕಪ್ ತರುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಪಡೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಟೀಮ್ ಇಂಡಿಯಾ, ತನ್ನ ಎರಡನೇ ಪಂದ್ಯದಲ್ಲೂ ದಿಗ್ವಿಜಯ ಸಾಧಿಸಿದೆ. ಬಲಾಢ್ಯ ಆಸ್ಟ್ರೇಲಿಯಾ ವಿರುದ್ಧ ಶಿಖರ್ ಧವನ್ ಶತಕ ಸೇರಿದಂತೆ ಸಂಘಟಿತ ಆಟದ ನೆರವಿನಿಂದ 36ರನ್​ಗಳ ಅಧಿಕಾರಯುತ ಗೆಲುವನ್ನು ಪಡೆದು ಬೀಗಿದೆ.

ಅಪ್ಘಾನಿಸ್ತಾನ್ ಮತ್ತು ವೆಸ್ಟ್​ ಇಂಡೀಸ್ ವಿರುದ್ಧ ಗೆದ್ದಿದ್ದ ಆಸೀಸ್​ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿತ್ತು. ಆದರೆ ಭಾರತದ ಎದುರು ಆ ತಂಡದ ಆಟ ನಡೆಯಲಿಲ್ಲ. ಲಂಡನ್​ ನ ಕಿಂಗ್ ಸ್ಟನ್ ಓವೆಲ್​ ಮೈದಾನದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಂದೆ-ಮುಂದೆ ಆಲೋಚಿಸದೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕ್ಯಾಪ್ಟನ್ ಕೊಹ್ಲಿಯ ನಿರ್ಧಾರವನ್ನು ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸಮರ್ಥಿಸಿಕೊಂಡ್ರು. ಆಸೀಸ್​ ಬೌಲರ್​ಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ ಈ ಆರಂಭಿಕ ಜೋಡಿ 127ರನ್​ ಗಳ ಜೊತೆಯಾಟವಾಡಿತು.

 ತಂಡದ ಮೊತ್ತ 127ರನ್​ ಆಗಿದ್ದಾಗ 70 ಬಾಲ್​ ಗಳಲ್ಲಿ 3 ಬೌಂಡರಿ, ಒಂದು ಸಿಕ್ಸರ್ ಮೂಲಕ 57ರನ್​ ಗಳಿಸಿದ್ದ ಹಿಟ್​ ಮ್ಯಾನ್​ ರೋಹಿತ್ ಶರ್ಮಾ ಸತತ ಎರಡನೇ ಮ್ಯಾಚ್​ನಲ್ಲೂ ಸೆಂಚುರಿ ಸಿಡಿಸುವ ನಿರೀಕ್ಷೆ ಹುಟ್ಟು ಹಾಕಿದ್ರು. ಆದರೆ, ಕಲ್ಟರ್ ನೈಲ್​ ಬೌಲಿಂಗ್​ ನ ಲ್ಲಿ ಕೀಪರ್ ಅಲೆಕ್ಸ್​​ ಕ್ಯಾರಿ ಗೆ ಕ್ಯಾಚ್​ ಇತ್ತು ಪೆವಿಲಿಯನ್ ಸೇರಿದ್ರು.

ರೋಹಿತ್ ಔಟಾದ ಬಳಿಕ ಧವನ್ ಜೊತೆ ಗೂಡಿದ ನಾಯಕ ವಿರಾಟ್ ಕೊಹ್ಲಿ ಕೂಡ ರನ್​ ಮಳೆ ಸುರಿಸಲಾರಂಭಿಸಿದ್ರು. ಶಿಖರ್ ಧವನ್ 17ನೇ ಒಡಿಐ ಸೆಂಚುರಿ ಸಿಡಿಸಿ ಮಿಂಚಿದ್ರೆ, ನಾಯಕ ಕೊಹ್ಲಿ ಅರ್ಧಶತಕ ಬಾರಿಸಿ ಆಸೀಸ್ ಬೌಲರ್​ಗಳನ್ನು ಇನ್ನಿಲ್ಲದಂತೆ ಕಾಡಿದ್ರು. 117ರನ್​ ಗಳಿಸಿ ರನ್​ ಶಿಖರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದ ಧವನ್, ಟೀಮ್​ ನ ಮೊತ್ತ 220 ಆಗಿದ್ದಾಗ ಮಿಚೆಲ್​ ಸ್ಟಾರ್ಕ್​ ಗೆ ವಿಕೆಟ್ ಒಪ್ಪಿಸಿದ್ರು. ಧವನ್ ಮತ್ತು ಕೊಹ್ಲಿ ಜೋಡಿ ಎರಡನೇ ವಿಕೆಟ್​ ಗೆ 93ರನ್​ ಗಳ ಜೊತೆಯಾಟವಾಡಿತು.

ಧವನ್ ಔಟಾದ ಬಳಿಕ ಬ್ಯಾಟಿಂಗ್​​​ನಲ್ಲಿ ಮುಂಬಡ್ತಿ ಪಡೆದು ನಾಲ್ಕನೇ ಕ್ರಮಾಂಕದಲ್ಲಿ ಸ್ಕ್ರೀಸ್​ಗೆ ಇಳಿದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕ ವಿರಾಟ್​ ಕೊಹ್ಲಿಗೆ ಸಾಥ್ ನೀಡಿದ್ರು. ವಿರಾಟ್ ನಿಧಾನಕ್ಕೆ ರನ್​ ಗತಿ ಹೆಚ್ಚಿಸುತ್ತಾ ಸ್ಕ್ರೀಸ್​ನಲ್ಲಿ ಉಳಿದುಕೊಳ್ಳೋ ಕೆಲಸ ಮಾಡಿದ್ರೆ, ಹಾರ್ದಿಕ್ ಪಾಂಡ್ಯ ಬಿರುಸಿನ ಆಟಕ್ಕೆ ಮುಂದಾದದ್ರು.

ಹಾರ್ದಿಕ್ ಪಾಂಡ್ಯ ಆರ್ಭಟಕ್ಕೆ ಫಿಂಚ್ ಪಡೆಯ ಬೌಲರ್​​​​​ಗಳು ಪಂಚರ್ ಆದ್ರು. 27 ಬಾಲ್​ ಗಳನ್ನು ಫೇಸ್ ಮಾಡಿದ ಪಾಂಡ್ಯ 3 ಸಿಕ್ಸರ್, 4 ಬೌಂಡರಿ ಸಮೇತ 48ರನ್​ ಗಳಿಸಿದ್ರು. ಕುಮಿನ್ಸ್​ ಎಸೆತದಲ್ಲಿ ಫಿಂಚ್​ಗೆ ಕ್ಯಾಚಿತ್ತು ಪಾಂಡ್ಯ ಹಾಫ್ ಸೆಂಚುರಿ ಮಿಸ್ ಮಾಡಿಕೊಂಡ್ರು. ಬಳಿಕ ವಿರಾಟ್ ಜೊತೆಯಾದ ಧೋನಿ ಕೂಡ ತಕ್ಕಮಟ್ಟಿಗೆ ಆರ್ಭಟಿಸಿದ್ರು. 14 ಎಸೆತಗಳನ್ನು ಎದುರಿಸಿದ ಧೋನಿ 3 ಬೌಂಡರಿ, 1 ಸಿಕ್ಸರ್ ಸಹಿತ 27ರನ್ ಸಿಡಿಸಿ ಸ್ಟೋಯಿನ್ಸ್​ಗೆ ವಿಕೆಟ್ ಒಪ್ಪಿಸಿದ್ರು.

ಧೋನಿಯ ಬೆನ್ನಲ್ಲೇ 5ನೇ ಬ್ಯಾಟ್ಸ್​ಮನ್ ಆಗಿ ಕೊಹ್ಲಿ ಪೆವಿಲಿಯನ್ ಕಡೆ ಮುಖಮಾಡಿದ್ರು. ವಿರಾಟ್ ಕೂಡ ಸ್ಟೋಯಿನ್ಸ್​​ಗೆ ವಿಕೆಟ್ ಒಪ್ಪಿಸಿದ್ರು. ಔಟಾಗುವ ಮುನ್ನ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 82 ರನ್​ ಗಳನ್ನು ಮಾಡಿದ್ದ ಕೊಹ್ಲಿ , ನಾಯಕನ ಆಟವನ್ನು ಪ್ರದರ್ಶಿಸಿದ್ರು. ಅಂತಿಮವಾಗಿ ಕನ್ನಡಿಗ ಕೆ.ಎಲ್ ರಾಹುಲ್ ಮೂರು ಎಸೆತಗಳಲ್ಲಿ 11 ರನ್ ಮಾಡಿ ಅಜೇಯರಾಗಿ ಉಳಿದ್ರು. ನಿಗದಿತ 50 ಓವರ್​ ಗಳಲ್ಲಿ ಭಾರತ 5 ವಿಕೆಟ್​ ಕಳೆದುಕೊಂಡು 352ರನ್ ಮಾಡಿತು.

353 ರನ್​ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ನಾಯಕ ಆ್ಯರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಬುನಾದಿ ಹಾಕಿಕೊಡೋ ಸೂಚನೆ ನೀಡಿದ್ದರು. 13 ಓವರ್​ ಗಳಲ್ಲಿ 60 ರನ್ ಜೊತೆಯಾಟವಾಡಿದ್ದ ಈ ಜೋಡಿ ಭಾರತಕ್ಕೆ ಶಾಕ್ ನೀಡೋ ವಿಶ್ವಾಸದಲ್ಲಿತ್ತು. ಆದರೆ ತಂಡದ ಮೊತ್ತ 61 ರನ್ ಆಗಿದ್ದಾಗ ಕೇದಾರ್ ಜಾಧವ್ ಮತ್ತು ಹಾರ್ದಿಕ್ ಪಾಂಡ್ಯ ಒಡಗೂಡಿ ಆಸೀಸ್ ಕಪ್ತಾನ ಫಿಂಚ್ ಅವರನ್ನು ರನ್​ ಔಟ್ ಬಲೆಗೆ ಕೆಡವಿದ್ರು. 36 ರನ್​ ಮಾಡಿ ಆಡುತ್ತಿದ್ದ ಫಿಂಚ್ ಸಪ್ಪೆ ಮೊರೆ ಹೊತ್ಕೊಂಡು ಪೆವಿಲಿಯನ್​ಗೆ ಹೋದ್ರು.

ಡೇವಿಡ್ ವಾರ್ನರ್ 56 ರನ್ ಬಾರಿಸಿ ನಿರ್ಗಮಿಸಿದ್ರು. ಸ್ಟೀವನ್ ಸ್ಮಿತ್ ಕ್ಲಾಸಿಕಲ್ ಇನ್ನಿಂಗ್ಸ್ 69ರನ್​ಗಳಿಗೆ ಮುಕ್ತಾಯವಾಯ್ತು. ಉಸ್ಮನ್ ಖುವಾಜ 42, ಕೀಪರ್ ಅಲೆಕ್ಸ್ ಕ್ಯಾರಿ 55, ಮ್ಯಾಕ್ಸ್​ವೆಲ್ 28ರನ್ ಕೊಡುಗೆ ನೀಡಿದ್ರೂ ಭಾರತದ ದಾಳಿಗೆ ಸಮರ್ಪಕವಾಗಿ ಉತ್ತರಿಸಿ, ಗೆಲುವಿನ ದಡ ಸೇರಿಸಲು ಯಾರಿಗೂ ಸಾಧ್ಯವಾಗಲಿಲ್ಲ. 50 ಓವರ್​ ಸಂಪೂರ್ಣ ಆಡಿದ್ರೂ 316 ರನ್​ ಗಳಿಗೆ ಆಲೌಟ್ ಆಗುವುದರೊಂದಿಗೆ ಆಸೀಸ್​ ಸೋಲಪ್ಪಿಕೊಂಡಿತು.

ಭಾರತದ ಪರ ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ ತಲಾ 3 ವಿಕೆಟ್​, ಯುಜುವೇಂದ್ರ ಚಾಹಲ್ 2 ವಿಕೆಟ್ ಪಡೆದರು. ಸೆಂಚುರಿ ಸ್ಟಾರ್ ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ಸತತ ಎರಡು ಗೆಲುವು ಪಡೆದ ಕೊಹ್ಲಿ ಪಡೆ ಜೂನ್ 13ರಂದು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here