ವರ್ಲ್ಡ್​ಕಪ್ ಇತಿಹಾಸದಲ್ಲಿ ಹೀಗೆಂದೂ ಆಗಿರಲಿಲ್ಲ..!

0
1098

ಈ ಬಾರಿಯ ವಿಶ್ವಕಪ್​ನಲ್ಲಿ ಬ್ಯಾಟ್​​ ಮತ್ತು ಬಾಲ್​ಗಿಂತ ಮಳೆಯ ಸದ್ದೇ ಹೆಚ್ಚಾಗಿದೆ. ಬ್ಯಾಟ್ಸ್​ಮನ್​ಗಳ ಆರ್ಭಟಕ್ಕಿಂತ ವರುಣನ ಅಬ್ಬರವೇ ಜೋರು. ಇಂಗ್ಲೆಂಡ್​ ಮಳೆಗಾಲದಲ್ಲಿ ವಿಶ್ವಸಮರದ ಬಿಗ್​ ಫೈಟ್​​ಗಳು ಕೊಚ್ಚಿ ಹೋಗ್ತಿವೆ.
1999ರ ಬಳಿಕ ಇದೇ ಮೊದಲ ಬಾರಿ ವಿಶ್ವಕಪ್​ ಆಯೋಜಿಸಿರುವ ಇಂಗ್ಲೆಂಡ್​​ ಅದೃಷ್ಠವೇ ಸರಿ ಇಲ್ಲ… 20 ವರ್ಷಗಳ ಬಳಿಕ ವಿಶ್ವಕಪ್​ ಆಯೋಜಿಸಿದ್ರೂ ಮಳೆ ಕಾಟ ಇಂಗ್ಲೆಂಡ್​ ಮಂಡಳಿಗೆ ಕಪ್ಪು ಚುಕ್ಕೆಯಾಗಿದೆ. ಆಂಗ್ಲರ ನಾಡಲ್ಲಿ ಈಗ ತಾನೇ ಮಳೆಗಾಲ ಆರಂಭವಾಗಿದೆ. ವಿಶ್ವಕಪ್ ಅಂತ್ಯವಾಗುವವರೆಗೂ ವರುಣನ ಕಾಟ ಮುಂದುವರಿಯೋ ಸಾಧ್ಯತೆ ಇದೆ. ಇಂದು ನಡೆಯಬೇಕಾಗಿದ್ದ ಭಾರತ- ನ್ಯೂಜಿಲೆಂಡ್ ನಡುವಿನ ಮ್ಯಾಚ್​ಗೂ ಮಳೆ ಅಡ್ಡಿಯಾಗಿದೆ. 
ಈ ಬಾರಿಯ ವಿಶ್ವಕಪ್​ನಲ್ಲಿ ಈಗಾಗಲೇ ನಡೆದಿರುವ 17 ಪಂದ್ಯಗಳ ಪೈಕಿ 3 ಪಂದ್ಯಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ. ಟೂರ್ನಿಯಲ್ಲಿ ಮೊದಲು ಅಫ್ಘಾನಿಸ್ತಾನ – ಶ್ರೀಲಂಕಾ ನಡುವಿನ ಪಂದ್ಯಕ್ಕೆ ಎಂಟ್ರಿ ಕೊಟ್ಟ ಮಳೆ ಸ್ವಲ್ಪ ಹೊತ್ತು ಸುರಿದು ಪಂದ್ಯಕ್ಕೆ ಅನುವು ಮಾಡಿಕೊಟ್ಟಿತ್ತು. ಆದ್ರೆ ನಂತರದ ಶ್ರೀಲಂಕಾ-ಪಾಕಿಸ್ತಾನ, ಸೌತ್​-ಆಫ್ರಿಕಾ-ವೆಸ್ಟ್​ಇಂಡೀಸ್​​, ಶ್ರೀಲಂಕಾ – ಬಾಂಗ್ಲಾದೇಶ ನಡುವಿನ ಪಂದ್ಯಗಳು ವರುಣನ ಅಬ್ಬರದಲ್ಲಿ ಕೊಚ್ಚಿಹೋದವು. ಇನ್​ ಫ್ಯಾಕ್ಟ್​ ವಿಶ್ವಕಪ್​ ಇತಿಹಾಸದಲ್ಲೇ 3 ಪಂದ್ಯ ರದ್ದಾಗಿರೋದು ಇದೇ ಮೊದಲು.
ವಿಶ್ವಕಪ್​ ಇತಿಹಾಸದಲ್ಲಿ 1979,1996, 1999, 2011 ರಲ್ಲಿ 1 ಪಂದ್ಯ ರದ್ದಾಗಿತ್ತು. 1992, 2003ರ ಟೂರ್ನಿಯಲ್ಲಿ 2 ಪಂದ್ಯಗಳು ವಾಷ್​​ ಔಟ್​ ಆಗಿದ್ವು. ಇದೀಗ ನಡೆಯುತ್ತಿರುವ 12ನೇ ವಿಶ್ವ ಸಮರದಲ್ಲಿ ನಡೆದ 17 ಪಂದ್ಯಗಳಲ್ಲಿ 3 ಮಳೆಯಲ್ಲಿ ಕೊಚ್ಚಿ ಹೋಗಿವೆ.
ಈ ಬಾರಿಯ ಟೂರ್ನಿಯಲ್ಲಿ ಹೀಗೆ ಪಂದ್ಯ ರದ್ದಾಗುತ್ತಿರುವುದು ತಂಡಗಳಿಗೆ ದೊಡ್ಡ ತಲೆನೋವಾಗಿದೆ. ಒಂದು ಪಂದ್ಯ ರದ್ದಾದರೆ ಆ ಪಂದ್ಯವನ್ನ ನಡೆಸಲು ರಿಸರ್ವ್​​ ಡೇ ಅವಕಾಶ ಗ್ರೂಪ್​ ಸ್ಟೇಜ್​ನಲ್ಲಿ ಇಲ್ಲದಿರುವುದು ದೊಡ್ಡ ಹಿನ್ನಡೆ. ಪಂದ್ಯ ರದ್ದಾದ್ರೆ ಕೇವಲ ತಲಾ 1 ಅಂಕ ಮಾತ್ರ ತಂಡಗಳಿಗೆ ಸಿಗುತ್ತೆ.. ಇದು ಅಂಕಪಟ್ಟಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ.
 ಒಂದರ ಹಿಂದೊಂದರಂತೆ ಪಂದ್ಯಗಳು ರದ್ದಾಗುತ್ತಿದ್ದಂತೆ ನೆಟ್ಟಿಗರು ಐಸಿಸಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇಂಗ್ಲೆಂಡ್​​ನಲ್ಲಿ ಮೇ-ಜೂನ್ ಮಳೆಗಾಲ ಎಂದು ತಿಳಿದೂ ವಿಶ್ವಕಪ್ ಆಯೋಜಿಸಿರುವುದು ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಈಗಾಗ್ಲೇ ಐಸಿಸಿಯನ್ನ ಟ್ರೋಲ್​ ಮಾಡುವ ಅನೇಕ ಮೀಮ್ಸ್​​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಐಸಿಸಿ ಕಾಲೆಳೆಯುತ್ತಿದ್ದಾರೆ.
ವಿಶ್ವಸಮರಕ್ಕೆ ಮಳೆಕಾಟ ಇರಬಾರದೆಂದು ಸಾಮಾನ್ಯವಾಗಿ ಫೆಬ್ರವರಿಯಿಂದ, ಏಪ್ರಿಲ್​ಗೆ ಅಂತ್ಯದಲ್ಲಿ ಟೂರ್ನಿ ಆಯೋಜಿಸಲಾಗುತಿತ್ತು. 2003ರ ವಿಶ್ವಕಪ್ ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್​​ನಲ್ಲಿ ಅಂತ್ಯ ಕಂಡಿದ್ರೆ, 2007ರ ವಿಶ್ವಯುದ್ಧ ಮಾರ್ಚ್​​ನಿಂದ ಏಪ್ರಿಲ್​ವರೆಗೆ ನಡೆದಿತ್ತು. ಇನ್ನು 2011 ಹಾಗೂ 2015ರ ವಿಶ್ವಸಮರ ಫೆಬ್ರವರಿಯಿಂದ ಮಾರ್ಚ್​​ವರೆಗೆ ನಡೆದಿತ್ತು.
ಇದೇ ಜೂನ್​ 16ಕ್ಕೆ ಬದ್ಧವೈರಿಗಳ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇಂಡೋ-ಪಾಕ್​​ ಕದನಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿರುವ ಪಂದ್ಯವೂ ಮಳೆಯಲ್ಲಿ ಕೊಚ್ಚಿ ಹೋಗೋ ಸಾಧ್ಯತೆ ದಟ್ಟವಾಗಿದೆಯೆಂದು ಇಂಗ್ಲೆಂಡ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
 ಈ ಬಾರಿಯ ವಿಶ್ವಕಪ್ ಮೇನಲ್ಲಿ ಆರಂಭವಾಗೋಕೆ ಐಪಿಎಲ್​ ಕೂಡ ಒಂದು ಕಾರಣ. ಈ ಬಾರಿಯ ಐಪಿಎಲ್​ ಅಂತ್ಯ ಕಂಡಿದ್ದೇ ಮೇ 12ಕ್ಕೆ. ಚುಟುಕು ಲೀಗ್​ ನಂತರವೇ ವಿಶ್ವಕಪ್ ಆರಂಭಿಸಬೇಕಾಗಿ ಬಂದಿದ್ದು, ಐಸಿಸಿ ಹಾಗೂ ಇಂಗ್ಲೆಂಡ್​ಗೆ ಪಟ್ಟು ನೀಡಿತು. ಹೀಗಾಗಿ ಬೇರೆ ದಾರಿಗಳಿಲ್ಲದೆ ಮಳೆಗಾಲದಲ್ಲೇ ಈ ಬಾರಿಯ ವಿಶ್ವಕಪ್ ಮುಂದುವರಿಯುತ್ತಿದೆ.
ಒಟ್ಟಾರೆಯಾಗಿ, ಮಳೆ ಕಾಟ ಹೀಗೆ ಮುಂದುವರೆದರೆ ಬ್ಯಾಟ್​​,ಬೌಲ್​​ ಆಟದ ಬದಲು ಅದೃಷ್ಠದ ಆಟ ಆರಂಭವಾಗುವ ಆರಂಭವಾಗಲಿದೆ. ಮಳೆಯ ನಡುವೆ ಅದೃಷ್ಠ ಯಾರಿಗಿದೆ, ಯಾರಿಗಿಲ್ಲ… ಅನ್ನೋದನ್ನ ಕಾದು ನೋಡಬೇಕಿದೆ. 

LEAVE A REPLY

Please enter your comment!
Please enter your name here