ಬೆಳಗಾವಿ: ಸತ್ತು ಹೋಗಿದ್ದಾರೆ ಎಂದು ಭಾವಿಸಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಾಗ ಮಹಿಳೆ ಎದ್ದು ಕುಳಿತ ಘಟನೆಯೊಂದು ಬೆಳಗಾವಿಯ ಮುಚ್ಚಂಡಿ ಗ್ರಾಮದ ಸಿದ್ಧೇಶ್ವರ ನಗರದಲ್ಲಿ ನಡೆದಿದೆ.
ಜ್ವರ ನೆತ್ತಿಗೇರಿ ನರಳಾಡುತ್ತಿದ್ದ ಮಾಲು ಯಲ್ಲಪ್ಪ ಚೌಗಲೆಯವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾಲು ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಅವರನ್ನುಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅವರನ್ನು ಆ್ಯಂಬುಲೆನ್ಸ್ನಲ್ಲಿ ಕರೆತರುತ್ತಿದ್ದ ವೇಳೆ ಮಹಿಳೆ ಉಸಿರಾಟ ನಿಂತಿರುವುದನ್ನು ನೋಡಿ ಅವರ ಪುತ್ರ ಸಂತೋಷ್ ಸಂಬಂಧಿಕರಿಗೆ ಕರೆ ಮಾಡಿ ತಾಯಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಮನೆಯಲ್ಲಿ ಮಹಿಳೆಯ ಅಂತ್ಯಕ್ರಿಯೆಗೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಆದರೆ ದೇಹ ಮನೆ ಮುಂದೆ ಇಳಿಸುವಾಗ ಮಾಲು ತನ್ನ ಕೈಗಳನ್ನು ಅಲುಗಾಡಿಸಿದ್ದು, ಎದ್ದು ಕುಳಿತು ಚಹಾ, ಆಹಾರವನ್ನು ಸೇವಿಸಿದ್ದಾರೆ. ಇದೀಗ ಸತ್ತು ಹೋಗಿದ್ದ ಮಹಿಳೆ ಮತ್ತೆ ಬದುಕಿ ಬಂದಿರುವುದನ್ನು ನೋಡಿ ಗ್ರಾಮಸ್ಥರು ಇದೆಲ್ಲಾ ಸವದತ್ತಿ ಯಲ್ಲಮ್ಮನ ಪವಾಡ ಎಂದು ಹೇಳುತ್ತಿದ್ದಾರೆ.