ಬೆಂಗಳೂರು: ಹೊಸ ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷತೆ ಇದ್ದಂತೆ ಕಾಣುತಿಲ್ಲ. ಒಂದು ಕಡೆ ನೈಟ್ ಕರ್ಪ್ಯೂ ಜಾರಿ ಮಾಡಿ, ಅನಗತ್ಯ ಪಾರ್ಟಿಗಳಿಗೆ ಬ್ರೇಕ್ ಹಾಕಿದೆ. ಆದರೆ ಶಾಲೆ ಆರಂಭ ಮಾಡಿ ಮಕ್ಕಳಿಗೆ ಪಾಠ ಮಾಡಲು ಹೊರಟಿದೆ. ಹೀಗಾಗಿ ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯಿತಾ ಅನ್ನುವ ಅನುಮಾನ ಶುರುವಾಗಿದೆ. ಜೊತೆಗೆ ಮಕ್ಕಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಲು ಹೊರಟಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಕೊರೋನಾ ವೈರಸ್ ಪ್ರಭೇದ ಸಾಕಷ್ಟು ಅಪಾಯಕಾರಿಗಿದ್ದು, ಜನರಿಗೆ ಆತಂಕ ಶುರು ಮಾಡಿದೆ. ಇಂಗ್ಲೆಂಡ್ ರಾಜಧಾನಿ ಲಂಡನ್ನಲ್ಲಿ ಈಗಾಗಲೇ ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಈ ಸೋಂಕು ತಡೆಯೋಕೆ ಸರ್ಕಾರ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿಗೆ ತಂದಿದೆ. ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೇ ಉದ್ಭವಿಸಿದೆ. ಈಗಾಗಲೇ ಜನವರಿ ಒಂದರಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಕ್ಲಾಸ್ಗಳನ್ನು ಆರಂಭಿಸುತ್ತಿದೆ. ಆದರೆ ಸರ್ಕಾರ ಶಾಲೆಗಳನ್ನು ಪ್ರಾರಂಭ ಮಾಡಿ, ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡಲು ಹೊರಟಿದೆಯಾ ಅನ್ನುವ ಅನುಮಾನ ಶುರುವಾಗಿದೆ.
ಒಂದು ಕಡೆ ನೈಟ್ ಕರ್ಫ್ಯೂ ಜಾರಿ ಮಾಡಿರುವ ರಾಜ್ಯ ಸರ್ಕಾರ, ಮತ್ತೊಂದು ಕಡೆ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ನೀಡುತ್ತಿದೆ. ಹೀಗಾಗಿ ಜನರ ಜೀವನದ ಜೊತೆಗೆ ಮಕ್ಕಳ ಜೀವವೂ ಸರ್ಕಾರಕ್ಕೆ ಮುಖ್ಯವಾಗುತ್ತೆ. ಇಷ್ಟು ದಿನ ಕೊರೋನಾ ಹಿನ್ನೆಲೆಯಲ್ಲಿ ಶಾಲಾಕಾಲೇಜು ಬಂದ್ ಮಾಡಿದ್ದ ಸರ್ಕಾರ, ಇನ್ನೂ ಸ್ವಲ್ಪ ದಿನ ಮುಂದೂಡಿಕೆ ಮಾಡಿದ್ದರೆ ಯಾವುದೇ ನಷ್ಟವಾಗಲ್ಲ. ಹೊಸ ಕೊರೊನಾ ಸೋಂಕು ಕಾಣಿಸಿಕೊಂಡರೂ ಶಾಲೆ ಆರಂಭ ಮಾಡಲು ಹೊರಟಿದೆ. ಹೀಗಾಗಿ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಶಾಲೆ ಆರಂಭಕ್ಕೆ ಮುಂದಾಯ್ತಾ ಅನ್ನೊ ಪ್ರಶ್ನೇ ಶುರುವಾಗಿದೆ.
ಏನೇಆಗ್ಲಿ, ಹೊಸ ಕೊರೋನಾ ರೂಪಾಂತರದಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಶಾಲೆಗಳ ಆರಂಭದ ಬಗ್ಗೆ ಮತ್ತೊಮ್ಮೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಮಕ್ಕಳ ಜೀವದ ಬಗ್ಗೆ ಮತ್ತಷ್ಟು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.