Tuesday, January 18, 2022
Powertv Logo
HomePower Specialನಿರಾಶ್ರಿತರ ರೋಧನೆಗಿಲ್ಲ ಇನ್ನೂ ಪರಿಹಾರ

ನಿರಾಶ್ರಿತರ ರೋಧನೆಗಿಲ್ಲ ಇನ್ನೂ ಪರಿಹಾರ

ಇತ್ತೀಚೆಗೆ ಐರೋಪ್ಯ ಒಕ್ಕೂಟ, ಅದ್ರಲ್ಲೂ ಪೋಲ್ಯಾಂಡ್​​​ನಲ್ಲಿ ನಿರ್ಮಾಣವಾಗಿರುವ ನಿರಾಶ್ರಿತರ ಸಮಸ್ಯೆಯನ್ನ ಬಗೆಹರಿಸೋದಕ್ಕೆ ಐರೋಪ್ಯ ರಾಷ್ಟ್ರಗಳು ಸಂಪೂರ್ಣವಾಗಿ ವಿಫಲವಾಗಿವೆ. ಪೋಲ್ಯಾಂಡ್​ ಗಡಿಯಲ್ಲಿ ಈಗ ನಿರ್ಮಾಣವಾಗಿರುವ ಈ ಸಮಸ್ಯೆಯಿಂದ ಸಾವಿರಾರು ಮಹಿಳೆಯರು, ಮಕ್ಕಳು ಚಳಿಯಲ್ಲಿ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿ ತಿಂಗಳುಗಳೇ ಕಳೆದಿವೆ. ಈ ಬಗ್ಗೆ ಗಮನಹರಿಸಬೇಕಾದ ವಿಶ್ವಸಂಸ್ಥೆ ಕಣ್ಮುಚ್ಚಿ ಕುಳಿತಿದೆ. ಅರೆ ಏನ್ರಿ ಇದು ಈ ಸಮಸ್ಯೆ ಇನ್ನೂ ಬಗೆಹರಿದಿಲ್ವಾ ಅಂತಿದ್ದೀರಾ?

ಕಳೆದ ಕೆಲ ದಿನಗಳ ಹಿಂದಷ್ಟೇ ಪೊಲ್ಯಾಂಡ್ ಗಡಿಯಲ್ಲಿ ಮಧ್ಯ ಪ್ರಾಚ್ಯದ ನಿರಾಶ್ರಿತರು ಪರದಾಡ್ತಾ ಇರೋ ಬಗ್ಗೆ ಜಾಗತಿಕವಾಗಿ ವರದಿಯಾಗಿತ್ತು. ಇದರಿಂದ ಯೂರೋಪ್ ರಾಷ್ಟ್ರಗಳ ವಿರದ್ಧ ಮಧ್ಯಪ್ರಾಚ್ಯದ ರಾಷ್ಟ್ರಗಳು ಸೇರಿದಂತೆ, ವಿಶ್ವಸಂಸ್ಥೆಯು ಕೂಡ ಕೆಲ ದೇಶಗಳ ನಾಗರಿಕರ ಟೀಕೆಗೆ ಗುರಿಯಾಗಿತ್ತು ಅಮೇಲಾದ್ರು ಈ ದೇಶಗಳು ಈ ನಿರಾಶ್ರಿತರಿಗೆ ಏನಾದ್ರು ಒಂದು ವ್ಯವಸ್ಥೆಯನ್ನ ಕಲ್ಪಿಸುತ್ತೆ ಅಂತ ನಂಬಲಾಗಿತ್ತು. ಆದ್ರೆ ಇದುವರೆಗು ಕೂಡ ಯೂರೋಪಿನ ಯಾಚ ರಾಷ್ಟ್ರವು ಕೂಡ ಈ ನಿರಾಶ್ರಿತರನ್ನ ಒಳಗೆ ಬಿಟ್ಟುಕೊಳ್ಳೋದಕ್ಕೆ ಮನಸ್ಸು ಮಾಡ್ತಾ ಇಲ್ಲ. ಹಾಗಾಗಿ ಈಗ ಪೊಲ್ಯಾಂಡ್ ಗಡಿಯಲ್ಲಿರುವ ಮಹಿಳೆಯರು ಮಕ್ಕಳು ಮತ್ತಷ್ಟು ದಿನ ಇದೇ ಚಳಿ-ಮಳೆಯಲ್ಲಿ ಪೋಲ್ಯಾಂಡ್ ಗಡಿಯಲ್ಲಿ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದ್ರೆ ಹಲವು ಸಾವು ನೋವುಗಳು ಕೂಡ ಆಗೋ ಸಾಧ್ಯತೆ ಇದೆ ಅಂತ ಹೇಳಲಾಗ್ತಾ ಇದೆ. ಇದೀಗ ಯೂರೋಪಿಯನ್ ಯೂನಿಯನ್​ನ ಈ ನಿರ್ಧಾರಕ್ಕೆ ಪೋಲ್ಯಾಂಡ್ ಜಾಗತಿಕವಾಗಿ ಟೀಕೆಗೆ ಗುರಿಯಾಗ್ತಾ ಇದೆ.

ಅಷ್ಟಕ್ಕು ಇಲ್ಲಿ ಪ್ರಮುಖವಾಗಿ ನಡೆದಿರೋ ಘಟನೆ ಏನು ಅಂದ್ರೆ, ಈಗ ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಇರಾಕ್ ಸಿರಿಯ, ಲೆಬನಾನ್ ದೇಶಗಳಲ್ಲಿನ ಉಗ್ರರ ಸಮಸ್ಯೆ ಹಾಗು ಸಂಘರ್ಷದಿಂದ ರೋಸಿ ಹೋಗಿರುವ ಜನ ಅಲ್ಲಿಂದ ಬೇರೆ ರಾಷ್ಟ್ರಕ್ಕೆ ವಲಸೆ ಹೋಗೋದಕ್ಕೆ ನಿರ್ಧರಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ, ಈ ಹಿಂದೆ ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ಆಕ್ರಮಿಸಿಕೊಂಡಾಗ ಅಲ್ಲಿನ ನಿರಾಶ್ರಿತ ಅಫ್ಘನ್ನರು ನಾವು ಅಮೆರಿಕಗೆ ಹೋಗಲ್ಲ, ಬದಲಾಗಿ ಯುರೋಪ್ ರಾಷ್ಟ್ರಗಳಿಗೆ ಹೋಗಿ ಬದುಕು ಕಟ್ಟಿಕೊಳ್ತೀವಿ ಅನ್ನೋ ಮಾತನ್ನ ಆಡ್ತಾರೆ. ಆದ್ರೆ ಈ ಬಗ್ಗೆ ಎಚ್ಚೆತ್ತ ಯುರೋಪ್ ಯೂನಿಯನ್, ಅನುಮತಿ ಇಲ್ಲದೇ ಯಾವುದೇ ನಿರಾಶ್ರಿತರನ್ನ ತನ್ನ ಒಕ್ಕೂಟದೊಳಗೆ ಬಿಡೋದಿಲ್ಲ ಅನ್ನೋ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಪ್ರಮುಖವಾದ ಕಾರಣವೇನಂದ್ರೆ ನಿರಾಶ್ರಿತರ ಸೋಗಿನಲ್ಲಿ ಕೆಲ ಭಯೋತ್ಪಾದಕರು ಯುರೋಪ್ ಒಕ್ಕೂಟದೊಳಕ್ಕೆ ಪ್ರವೇಶಿಸುವ ಭೀತಿ ಈ ಒಕ್ಕೂಟ ದೇಶಗಳದ್ದು.

ಸದ್ಯಕ್ಕೆ ಈ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಂಘರ್ಷ ತಾರಕಕ್ಕೇರಿದ್ದು ಆ ರಾಷ್ಟ್ರಗಳಿಂದ ವಲಸೆ ಹೋಗಿ ಬೇರೆ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಪ್ರಯತ್ನಿಸ್ತಿದ್ದಾರೆ. ಇವರಲ್ಲಿ ಬಹುತೇಕರು ಯುರೋಪ್​ಗೆ ಹೋಗೋದಕ್ಕೆ ಬಯಸ್ತಾರೆ. ಆದರೆ ಯಾವ ದೇಶವೂ ಕೂಡ ಅನುಮತಿ ಇಲ್ಲದೆ ವಲಸೆ ಕೈಗೊಳ್ಳೋದಕ್ಕೆ ಅವಕಾಶವನ್ನ ಕೊಡೋದಿಲ್ಲ. ಹಾಗೇನೆ ಇವರಿಗೆ ವಲಸೆಗೆ ಅನುಮತಿಯನ್ನ ಕೊಡೋದಿಲ್ಲ. ಕಾರಣ ಭಯೋತ್ಪಾದನೆ ಪೀಡಿತ ರಾಷ್ಟ್ರಗಳಿಂದ ಬಂದವರು ಅನ್ನೋದು. ಹೀಗಾಗಿ ಇವರು ಯುರೋಪಿಯನ್ ಯೂನಿಯನ್​​ ಕಣ್ಣಿಗೆ ಗಡಿದಾಟಿ ವಾಮಮಾರ್ಗದ ಮೂಲಕ ಬಂದ ಅಕ್ರಮ ವಲಸಿಗರಾಗಿ ಕಾಣ್ತಾರೆ. ಇಷ್ಟು ದಿನಗಳ ಕಾಲ ಈ ನಿರಾಶ್ರಿತರು ಟರ್ಕಿಯ ಮೂಲಕ ಈ ಯುರೋಪ್ ರಾಷ್ಟ್ರಗಳಿಗೆ ವಲಸೆ ಹೋಗ್ತಾ ಇದ್ರು. ಆದ್ರೆ ಟರ್ಕಿ ಆ ಮಾರ್ಗವನ್ನ ಸಂಪೂರ್ಣವಾಗಿ ಬಂದ್ ಮಾಡಿತ್ತು. ಬಳಿಕ ಮೆಡಿಟರೇನಿಯನ್ ಸಮುದ್ರ ಮಾರ್ಗದ ಮೂಲಕ ಬೋಟ್​ಗಳನ್ನ ಬಳಸಿಕೊಂಡು ಪ್ರಯಾಣ ಮಾಡ್ತಾ ಇದ್ರು. ಆದ್ರೆ ಇದು ಅತ್ಯಂತ ಅಪಾಯಕಾರಿ ಪ್ರಯಾಣವಾಗಿತ್ತು. ಈ ಪ್ರಯಾಣದ ಮೂಲಕ ಅಲ್ಲಿರುವ ಬಹುತೇಕರು ಸಾವಿಗೀಡಾಗ್ತಾ ಇದ್ರು. ಇದ್ರಲ್ಲಿ ಬದುಕುಳಿದವರು ಮಾತ್ರ ಐರೋಪ್ಯ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಶುರು ಮಾಡಿದ್ದಾರೆ.

ಹೀಗೆ ಅಕ್ರಮ ವಲಸಿಗರು ಹೆಚ್ಚಾಗ್ತಾ ಇರೋದನ್ನ ಗಮನಿಸಿದ ಹಾಗು ಆ ನಿರಾಶ್ರಿತರಿಂದ ಸಮಸ್ಯೆ ಎದುರಿಸಿದ ಐರೋಪ್ಯ ರಾಷ್ಟ್ರಗಳು ಈ ನಿರಾಶ್ರಿತರಿಗೆ ಬಾಗಿಲು ಬಂದ್ ಮಾಡಿದ್ವು. ಇದೆಲ್ಲದರ ಪರಿಣಾಮ ಇದೀಗ ಈ ನಿರಾಶ್ರಿತರ ಸಮಸ್ಯೆ ಪೋಲ್ಯಾಂಡ್ ಹಾಗು ಬೆಲಾರಸ್ ಗಡಿಯಲ್ಲಿ ಶುರುವಾಗಿದೆ. ಆದ್ರೆ ಇದೇ ಎಲ್ಲರ ಆಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಮಧ್ಯಪ್ರಾಚ್ಯದ ನಿರಾಶ್ರಿತರು ತಮ್ಮ ರಾಷ್ಟ್ರ ಇರಾಕ್ನಿಂದನೇ ಹೊರಡಬೇಕು ಅಂತ ನಿರ್ಧರಿಸಿ ಬೆಲಾರಸ್ ಹಾಗು ಪೋಲ್ಯಾಂಡ್ ಗಡಿಗೆ ತಲುಪಬೇಕು ಅಂದ್ರೆ ಮೊದಲು ಇರಾಕ್​​ನಿಂದ ಅರ್ಮೇನಿಯ, ಜಾರ್ಜಿಯಗಳನ್ನ ದಾಟಿಕೊಂಡು ಉಕ್ರೇನಿಯ ತಲುಪಿ ಅಲ್ಲಿಂದ ಬೆಲರಸ್ಗೆ ತಲುಪಬೇಕು. ತದನಂತರ ಪೋಲ್ಯಾಂಡ್ ಗಡಿಗೆ ಈ ನಿರಾಶ್ರಿತರು ತಲುಪಬೇಕು. ಆದ್ರೆ ಇದು ಅಷ್ಟು ಸುಲಭವಾಗಿ ನಡೆಯೋ ಕೆಲಸವಲ್ಲ.. ಹಾಗಾಗಿಯೇ ಇದ್ರ ಹಿಂದೆ ಬೆಲಾರಸ್ ಹಾಗು ರಷ್ಯಾ ಇದೆ ಅನ್ನೋ ಅನುಮಾನವನ್ನ ಐರೋಪ್ಯ ಒಕ್ಕೂಟಗಳು ವ್ಯಕ್ತಪಡಿಸ್ತಿವೆ.

ಇನ್ನು ಇಕ್ಕಟ್ಟಿನಲ್ಲಿರುವ ಆ ನಿರಾಶ್ರಿತರು ಈ ಸಮಸ್ಯೆ ಇವತ್ತು ಬಗೆ ಹರಿಯುತ್ತೆ, ನಾಳೆ ಬಗೆ ಹರಿಯುತ್ತೆ ಅಂತ ದಿನಗಳನ್ನ ಕಳಿತಾ ಇದ್ದಾರೆ. ಆದ್ರೆ ಈ ಬಗ್ಗೆ ಸ್ವಲ್ಪವೂ ಕರುಣೆಯನ್ನ ತೋರಿಸದ ಪೋಲ್ಯಾಂಡ್ ಸರ್ಕಾರ ಹಾಗು ಯೂರೋಪಿಯನ್ ಯೂನಿಯನ್, ಇದ್ರಲ್ಲಿ ನಮ್ದೇನು ತಪ್ಪಿಲ್ಲ, ಈ ಇದು ಬೆಲಾರಸ್​​ನದ್ದೇ ಕಿತಾಪತಿ. ಒಂದು ವೇಳೆ ಅವರನ್ನ ನಮ್ಮ ದೇಶದ ಒಳಗೆ ಬಿಟ್ಟುಕೊಂಡ್ರೆ ನಮ್ಮಲ್ಲಿ ಉಗ್ರವಾದಿತ್ವವನ್ನ ಶುರು ಮಾಡಿಬಿಡ್ತಾರೆ. ಇದ್ರಿಂದ ಯೂರೋಪ್​​ನಲ್ಲಿನ ಶಾಂತಿ ಸಂಪೂರ್ಣವಾಗಿ ಹಾಳಾಗಿ ಹೋಗುತ್ತೆ ಅನ್ನೋ ಹಸಿ ಸುಳ್ಳುಗಳನ್ನ ಹೇಳಿ ನಿರಾಶ್ರಿತರ ವಿಚಾರದಿಂದ ನುಣುಚಿಕೊಳ್ಳೋದಕ್ಕೆ ಯತ್ನಿಸ್ತಾ ಇದ್ದಾರೆ.

ಸದ್ಯಕ್ಕೆ ಈ ನಿರಾಶ್ರಿತರ ಪಾಡು ಹೇಳೋಕೆ ಆಗ್ತಿಲ್ಲ. ಒಂದು ಕಡೆ ತಮ್ಮ ದೇಶಕ್ಕೆ ಹೋದ್ರೆ ಉಗ್ರರಿಂದ ಗುಂಡೇಟು ತಿಂದು ಸಾಯಬೇಕು.. ಈ ಕಡೆ ಮಕ್ಕಳು, ಮಹಿಳೆಯರನ್ನ ಕರೆದುಕೊಂಡು ಯೂರೋಪಿನಲ್ಲಿ ಹೋಗಿ ಬದುಕೋಣ ಅಂದ್ರೆ ಇವ್ರಿಗೆ ಯೂರೋಪಿನಲ್ಲಿ ನಿರ್ಬಂಧವನ್ನ ವಿಧಿಸಿಬಿಟ್ಟಿದ್ದಾರೆ.. ಇನ್ನು ಪೋಲ್ಯಾಂಡ್ ಗಡಿ ಈ ಗಡಿಯ ಒಳಗಡೆ ನಿರಾಶ್ರಿತರನ್ನ ಒಳಗೆ ಬಿಡದೆ ನೀವು ಹೇಗೆ ಬಂದ್ರೋ ಹಾಗೆ ನಿಮ್ಮ ದೇಶಕ್ಕೆ ವಾಪಸ್ಸು ಹೋಗಿ ಅಂತ ಅಲ್ಲಿನ ಪೋಲ್ಯಾಂಡ್ ಸೈನಿಕರು ಹೇಳ್ತಾ ಇದ್ದಾರೆ. ಆದ್ರೆ ಈ ರೀತಿ ಆ ನಿರಾಶ್ರಿತರು ಮಾಡಿದ್ರೆ ಅವ್ರು ದಟ್ಟವಾದ ಕಾಡು-ಮೇಡುಗಳನ್ನ ದಾಟಿಕೊಂಡು ಹೋಗ್ಬೇಕು. ಅದು ಸಾಧ್ಯವಾಗದ ಮಾತು. ಒಂದು ವೇಳೆ ಸಾಧ್ಯವಾದ್ರು ಕೂಡ ಬೆಲರಾಸ್ ಅವರನ್ನ ಒಳಗೆ ಬಿಟ್ಟುಕೊಳ್ಳೋದಕ್ಕೆ ರೆಡಿ ಇಲ್ಲ. ಹೀಗಾಗಿ ಈ ನಿರಾಶ್ರಿತರ ಬದುಕು ಈಗ ಸದ್ಯಕ್ಕೆ ಸಾವು-ಬದುಕಿನ ನಡುವಿನ ಹೋರಾಟವಾಗಿ ಕಾಣ್ತಾ ಇದೆ.

ಸದ್ಯದ ಮಟ್ಟಿಗೆ ಐರೋಪ್ಯ ಒಕ್ಕೂಟದ ಈ ಬಿಕ್ಕಟ್ಟು ರಾಜಕೀಯವಾಗಿ ತೀವ್ರತೆಯನ್ನ ಪಡೆದುಕೊಳ್ತಾ ಇದೆ. ಆದ್ರೆ ಪೋಲ್ಯಾಂಡ್ ಗಡಿಯಲ್ಲಿರುವ ಈ ಮಧ್ಯಪ್ರಾಚ್ಯದ ನಿರಾಶ್ರಿತರು ಅಹಾರ, ಸೂರು ಇಲ್ಲದೇ ಕೊರೆಯುವ ಚಳಿಯಲ್ಲಿ ನಡುಗುತ್ತಾ ಸೈನಿಕರ ಬಂದೂಕನ್ನ ತಮ್ಮ ಮುಗ್ದ ನೋಟಗಳಿಂದ ನೋಡುತ್ತಾ ದಿನ ನೂಕುತ್ತಿರುವ ದೃಶ್ಯಗಳು ಮಾತ್ರ ಮನಕಲಕುವಂತಿವೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments