ಉಡುಪಿ : ಪೇಜಾವರ ಮಠದ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ (88) ಬೃಂದಾವನಸ್ತರಾಗಿದ್ದಾರೆ. ನ್ಯುಮೋನಿಯಾ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳನ್ನು ಡಿಸೆಂಬರ್ 20 ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಪರಿಸ್ಥಿತಿ ತೀರ ಬಿಗುಡಾಯಿಸಿದ್ದರಿಂದ ಶ್ರೀಗಳ ಕೊನೆಯ ಆಸೆಯಂತೆ ಇಂದು ಶ್ರೀಮಠಕ್ಕೆ ಅವರನ್ನುಕರೆತರಲಾಗಿತ್ತು. ಮಠಕ್ಕೆ ಕರೆತಂದ ಕೆಲವೇ ಹೊತ್ತಲ್ಲಿ ಕೃಷ್ಣೈಕ್ಯರಾದರು.
ಉಡುಪಿಯಿಂದ 120 ಕಿಲೋಮೀಟರ್ ದೂರದ ಸುಬ್ರಹ್ಮಣ್ಯ ಸಮೀಪದ ರಾಮಕುಂಜ ಎಂಬ ಕುಗ್ರಾಮ ವಿಶ್ವೇಶತೀರ್ಥರ ಹುಟ್ಟೂರು. 1931 ಏಪ್ರಿಲ್ 27ರಂದು ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ವೆಂಕಟರಮಣ ಅಂತ. ತಂದೆ ನಾರಾಯಣಚಾರ್ಯ, ತಾಯಿ ಕಮಲಮ್ಮ. ವೆಂಕಟರಮಣ ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೇ ಸ್ವಾಮೀಜಿಯಾಗಿ ಪೀಠವನ್ನೇರಿ, ವಿಶ್ವೇಶತೀರ್ಥರಾದಾಗ ಅವರಿಗೆ ಕೇವಲ 7 ವರ್ಷ.
1938 ಡಿಸೆಂಬರ್ 3ರಂದು ಅಧೋಕ್ಷಜ ತೀರ್ಥರ ಉತ್ತರಾಧಿಕಾರಿಯಾಗಿ ಪೀಠ ಅಲಂಕರಿಸಿದ ವಿಶ್ವೇಶ್ವ ತೀರ್ಥರು. 81 ವರ್ಷಗಳ ಕಾಲ ಸರ್ವಧರ್ಮ ಸಹಿಷ್ಣುವಾಗಿ ಇಡೀ ನಾಡಿಗೆ ಮಾರ್ಗದರ್ಶಕರಾಗಿ, ಗುರುವಾಗಿ ಅನನ್ಯ ಸೇವೆ ಸಲ್ಲಿಸಿದ್ದರು.