ಇಂದೇ ಸಚಿನ್ ರೆಕಾರ್ಡ್​ ಬ್ರೇಕ್ ಮಾಡಿ ಬಿಡ್ತಾರಾ ಕೊಹ್ಲಿ?

0
574

ಒಡಿಐನಲ್ಲಿ ಅತೀ ವೇಗವಾಗಿ 11 ಸಾವಿರ ರನ್​ ಸಿಡಿಸಿ ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​ ದಾಖಲೆಯನ್ನ ವಿರಾಟ್​ ಕೊಹ್ಲಿ ಪುಡಿಗಟ್ಟಿ ಕೆಲ ದಿನಗಳಷ್ಟೇ ಆಗಿವೆ. ಅಷ್ಟರಲ್ಲೇ ಮತ್ತೊಂದು ವಿಶ್ವದಾಖಲೆಯನ್ನ ನಿರ್ಮಿಸುವತ್ತ ರನ್​ಮಷಿನ್​​ ಹೆಜ್ಜೆ ಇಟ್ಟಾಗಿದೆ.
ಸಚಿನ್​ ದಾಖಲೆಗಳನ್ನ ಮುರಿಯುವುದನ್ನೇ ಹಾಬಿ ಮಾಡಿಕೊಂಡಿರುವ ವಿರಾಟ್​​, ಮಾಸ್ಟರ್​​ ಹೆಸರಿನಲ್ಲಿರುವ ಮತ್ತೊಂದು ಸ್ಮರಣೀಯ ದಾಖಲೆಯ ಸನಿಹದಲ್ಲಿದ್ದಾರೆ. ಇಂದಿನ ವೆಸ್ಟ್​​ಇಂಡೀಸ್​​​ ವಿರುದ್ಧದ ಫೈಟ್​​ನಲ್ಲಿ ಡೆಲ್ಲಿ ಡ್ಯಾಶರ್​ ಅಬ್ಬರಿಸಿದ್ದೇ ಆದ್ರೆ, ಆ ರೆಕಾರ್ಡ್​​ ಉಡೀಸ್​ ಆಗೋದು ಖಚಿತ.
ಹೌದು, ಟೀಮ್​ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 20 ಸಾವಿರ ಅಂತರಾಷ್ಟ್ರೀಯ ರನ್​ಗಳ ಸನಿಹದಲ್ಲಿದ್ದಾರೆ. ಈ ನೂತನ ಇತಿಹಾಸ ಬರೆಯೋಕೆ ಕೊಹ್ಲಿಗೆ ಬೇಕಿರೋದು ಕೇವಲ 37 ರನ್​ಗಳು ಮಾತ್ರ.
ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ 77 ಟೆಸ್ಟ್​​ ಪಂದ್ಯಗಳನ್ನಾಡಿರುವ ವಿರಾಟ್​​, 25 ಶತಕ ಹಾಗೂ 20 ಅರ್ಧಶತಕಗಳ ನೆರವಿನಿಂದ 6613 ರನ್​ ಸಿಡಿಸಿದ್ದಾರೆ. ಇನ್ನು 231 ಏಕದಿನ ಪಂದ್ಯಗಳಲ್ಲಿ 41 ಶತಕ ಹಾಗೂ 52 ಹಾಫ್​ಸೆಂಚುರಿ ಸಿಡಿಸಿ 11,087 ರನ್​ ಕಲೆ ಹಾಕಿದ್ದಾರೆ. ಇನ್ನು 67 ಟಿ-ಟ್ವೆಂಟಿ ಮ್ಯಾಚ್​ಗಳಲ್ಲಿ 20 ಅರ್ಧಶತಕ ಬಾರಿಸಿ 2263 ರನ್ ​ಗಳಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಕೊಹ್ಲಿ 37 ರನ್​ ಗಳಿಸಿದ್ರೆ, ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಸಿಡಿಸಿದ ವಿಶ್ವದ 12ನೇ ಹಾಗೂ ಭಾರತದ 3ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಟೀಮ್​ಇಂಡಿಯಾ ಪರ ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​​, ರಾಹುಲ್​ ದ್ರಾವಿಡ್​ ಮಾತ್ರ ಈ ಸಾಧನೆ ಮಾಡಿದ್ದಾರೆ.
ಇಂದು ವಿಂಡೀಸ್​​ ವಿರುದ್ಧ ಈ ಸಾಧನೆಯನ್ನ ಕೊಹ್ಲಿ ಮಾಡಿದ್ದೇ ಆದ್ರೆ, ಬ್ಯಾಟಿಂಗ್​ ದಿಗ್ಗಜ ಬ್ರಿಯಾನ್​ ಲಾರಾ, ಸಚಿನ್​ ತೆಂಡೂಲ್ಕರ್​ ದಾಖಲೆಯನ್ನ ಉಡೀಸ್​​ ಮಾಡಲಿದ್ದಾರೆ. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಸದ್ಯ ವೇಗವಾಗಿ 20 ಸಾವಿರ ರನ್​ ಕಲೆ ಹಾಕಿರುವ ಆಟಗಾರರ ಪಟ್ಟಿಯಲ್ಲಿ ವೆಸ್ಟ್​ಇಂಡೀಸ್​​ ದಿಗ್ಗಜ ಬ್ರಿಯಾನ್​ ಲಾರಾ, ಮಾಸ್ಟರ್​​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​​ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಹಾಗೂ ಲಾರಾ ಈ ಸಾಧನೆ ಮಾಡಲು 453 ಇನ್ನಿಂಗ್ಸ್​​ ತೆಗೆದುಕೊಂಡಿದ್ರೆ, 468 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್​ 3ನೇ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಸೂಪರ್​​​​​​​ ಫಾರ್ಮ್​ನಲ್ಲಿದ್ದಾರೆ. ಸೌತ್​​ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 18 ರನ್​ಗಳಿಗೆ ಔಟಾಗಿ ನಿರಾಸೆ ಮೂಡಿಸಿದ್ದ ಕೊಹ್ಲಿ, ನಂತರದ 3 ಪಂದ್ಯಗಳಲ್ಲೂ ಅರ್ಧಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 82 ರನ್​ ಸಿಡಿಸಿದ ವಿರಾಟ್​​, ಪಾಕಿಸ್ತಾನದ ಎದುರು 77, ಅಫ್ಘಾನಿಸ್ತಾನ ವಿರುದ್ಧ 67 ರನ್​ ಸಿಡಿಸಿ ಹ್ಯಾಟ್ರಿಕ್​ ಹಾಫ್​ ಸೆಂಚುರಿ ಬಾರಿಸಿದ್ದಾರೆ.
ಪ್ರತಿ ಪಂದ್ಯದಲ್ಲೂ ದಾಖಲೆ ನಿರ್ಮಿಸೋದು ಕಿಂಗ್​ ಕೊಹ್ಲಿಗೆ ಹೊಸದೇನಲ್ಲ, ಹಾಗೆಯೇ ನಾಳಿನ ಪಂದ್ಯದಲ್ಲಿಯೂ ವಿರಾಟ್​ ಈ ವಿಶ್ವ ದಾಖಲೆ ನಿರ್ಮಿಸಿದ್ರೆ ಅಚ್ಚರಿಯೂ ಇಲ್ಲ.

LEAVE A REPLY

Please enter your comment!
Please enter your name here