Monday, May 23, 2022
Powertv Logo
HomePower Specialರಾಜಪಥದಲ್ಲಿ 'ವಿರಾಟ್' ವಿಶ್ರಾಂತಿ..!

ರಾಜಪಥದಲ್ಲಿ ‘ವಿರಾಟ್’ ವಿಶ್ರಾಂತಿ..!

ಸತತ 13 ವರ್ಷ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ವಿರಾಟ್ ನಿವೃತ್ತಿ ಹೊಂದಿದ್ದಾನೆ. 2000 ಇಸವಿಯಿಂದ ನಿರಂತರ ರಾಷ್ಟ್ರಪತಿಗಳ ಅಂಗ ರಕ್ಷಕ ತಂಡದ ಸದಸ್ಯನಾಗಿದ್ದ ವಿರಾಟ್ ಎಲ್ಲರ ಆಕರ್ಷಣೆಗೂ ಕಾರಣನಾಗಿದ್ದ. ಹ್ಯಾನೋವೆರಿಯನ್ ತಳಿಯ ಕಡುಗಪ್ಪು ವರ್ಣದ ಕುದುರೆ ವಿರಾಟ್​ಗೆ ‘ಚಾರ್ಜರ್’ ಎಂಬ ನಿಕ್ ನೆಮ್​ನಿಂದಲೇ ಫೆಮಸ್..!

ಈ ಉಪನಾಮ ಬರುವುದಕ್ಕೆ ಕಾರಣ ರಾಷ್ಟ್ರಪತಿಗಳ ಅಂಗರಕ್ಷಕರ ತಂಡದಲ್ಲಿರುವ ಅಶ್ವದಳದ ಕುದುರೆಗಳ ನಾಯಕನ ಸ್ಥಾನ ನಿಭಾಯಿಸಿದ್ದಕ್ಕೆ. ತನ್ನ ತಂಡದಲ್ಲಿ ಮುಂಚೂಣಿಯಲ್ಲಿ ಇದ್ದು ತಂಡವನ್ನು ಮುನ್ನಡೆಸುವ ಪ್ರಧಾನ ಕುದುರೆಗೆ ಚಾರ್ಜರ್ ಎಂದು ಕರೆಯುವುದು ವಾಡಿಕೆ.

ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ ಕರ್ನಲ್ ಅನುಪ್ ತಿವಾರಿ ಅವರ ಒಡನಾಟ, ಆರೈಕೆ, ಸಾರಥ್ಯದಲ್ಲಿದ್ದ ಕಪ್ಪು ಕುದುರೆ ವಿರಾಟ್ ಅನ್ನು ಈ ಬಾರಿಯೂ ಗಣರಾಜ್ಯೋತ್ಸವದ ಪರೇಡ್​​ಗೆ ತರಲಾಗಿತ್ತು. ಬರೋಬ್ಬರಿ 13 ಬಾರಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಿದ್ದ ಅನುಭವ ಈ ವಿರಾಟ್​ಗೆ. ಹಾನೋವೇರಿಯನ್ ತಳಿಯ ಈ ಕುದುರೆಯನ್ನು 2000 ಇಸವಿಯ ಸೆಪ್ಟೆಂಬರ್ 12ರಂದು ಸೇನಾ ಸೇವೆಗೆ ನಿಯೋಜಿಸಲಾಗಿತ್ತು. ಬಹಳ ಶಿಸ್ತಿನ ಕುದುರೆಯಾದ ವಿರಾಟ್, ತನ್ನ ಗಾತ್ರ ಹಾಗೂ ಆಕಾರದಿಂದ ಜನಪ್ರಿಯತೆ ಪಡೆದಿತ್ತು.

ತನ್ನ ವೃದ್ಧಾಪ್ಯದ ಮಧ್ಯೆಯೂ ವಿರಾಟ್, 2021ರ ಗಣರಾಜ್ಯೋತ್ಸವ ದಿನದ ಪಥಸಂಚಲನ ಮತ್ತು ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯು ಆಯ್ಕೆ ಮತ್ತು ಮಹತ್ವವೂ ಅಷ್ಟೇ ಪ್ರಾಮುಖ್ಯತೆವಹಿಸಿದೆ. ಪ್ರಸಕ್ತ ತಂಡಕ್ಕೆ ಭಾರತೀಯ ಸೇನೆಯ ಅತ್ಯಂತ ಉತ್ಕೃಷ್ಟ ರೆಜಿಮೆಂಟ್ ಎಂದು ಗುರುತಿಸಿಕೊಂಡಿದೆ. ಸಾವಿರಾರು ಯೋಧರ ಮಧ್ಯೆ ಕೆಲವೇ ಕೆಲವರನ್ನುಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಅನೇಕ ಮಾನದಂಡಗಳ ಆಧಾರವಾಗಿರಿಸಿಕೊಂಡು ಆಯ್ಕೆ ಮಾಡುವ ಪದ್ಧತಿ ಇಂದಿಗೂ ಮುಂದುವರೆದುಕೊಂಡು ಬಂದಿದೆ.

ಇನ್ನೂ ಅಶ್ವದಳದ ಆಯ್ಕೆಯೂ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಸಾವಿರಾರು ಕುದುರೆಗಳನ್ನು ತರಿಸಿ ಅವುಗಳಲ್ಲಿ 200 ಪ್ರಬಲ ಅಶ್ವಗಳ ಆಯ್ಕೆ ಮಾಡಿ ಅಶ್ವದಳವನ್ನು ಸಿದ್ಧಪಡಿಸ್ತಾರೆ. ಬಹುತೇಕ ಅಶ್ವಪರೀಕ್ಷಾ ವಿಧಿಯನ್ನು ಚಾಚೂ ತಪ್ಪದೆ ಈ ಕುದುರೆಗಳ ಆಯ್ಕೆಯಲ್ಲಿ ಬಳಸಲಾಗುತ್ತದೆ. ಪ್ರಸ್ತುತ ಅಶ್ವದಳವನ್ನು ದೇಶದ ಅತ್ಯುನ್ನತ ವಿಐಪಿಗಳ ಅಂಗರಕ್ಷಣೆಗೆ ಹಾಗೂ ಗೌರವ ವಂದನೆಗಾಗಿ ಮೀಸಲಿಡಲಾಗುತ್ತದೆ. ಈ ಪದ್ಧತಿ ಶತಮಾನಗಳಿಂದಲೂ ನಡೆದು ಬಂದಿದೆ. ಹಿಂದೆ ನಮ್ಮ ದೇಶದಲ್ಲಿ ಆಂಗ್ಲರ ಆಳ್ವಿಕೆಯ ಕಾಲದಿಂದಲೂ ಬ್ರಿಟಿಷ್ ವೈಸ್‌ರಾಯ್‌ ಅವರಿಗೆ ಅಂಗರಕ್ಷರಾಗಿದ್ದ ಈ ದಳ ಈಗಿನ ರಾಷ್ಟ್ರಪತಿವರೆಗೂ ಈ ಪರಂಪರೆ ಬೆಳೆದು ಬಂದಿದೆ.ಪ್ರತಿ ಗಣರಾಜ್ಯ ದಿನದಂದು ಕಡುಗೆಂಪು ಬಣ್ಣದ ಕೋಟು, ಚಿನ್ನದ ಬಣ್ಣ ಕವಚ ಮತ್ತು ಆಕರ್ಷಕ ಪೇಟಗಳನ್ನು ಧರಿಸಿದ ಅಶ್ವಾರೋಹಿಗಳು, ರಾಷ್ಟ್ರಪತಿ ಅವರ ಬೆಂಗಾವಲಿಗೆ ಇದ್ದು ವೇದಿಕೆಯವರೆಗೆ ಕರೆತರುತ್ತಾರೆ. ಅಂತೆಯೇ ರಾಷ್ಟ್ರಗೀತೆ ಆರಂಭವಾಗುವುದಕ್ಕೆ ಆದೇಶ ನೀಡುವ ಜವಾಬ್ದಾರಿಯೂ ಇವರದ್ದೆ ಆಗಿರುತ್ತದೆ. ಭದ್ರತೆಯ ಜವಾಬ್ಧಾರಿ ಸ್ಥಳೀಯ ಪೊಲೀಸ್ರಿಗಿದ್ದರೂ ಅಂಗರಕ್ಷಕರ ಗೌರವ ಇರಲೇಬೇಕಾದ ವ್ಯವಸ್ಥೆ ಜಾರಿಯಲ್ಲಿದೆ. ಇನ್ನೂ ನಿವೃತ್ತವಾದ ಅಶ್ವ ವಿರಾಟ್ ಕಳೆದ 13 ವರ್ಷಗಳಲ್ಲಿ ಉತ್ತಮ ಸೇವೆ ಸಲ್ಲಿಸಿತ್ತು. ತನ್ನ ಸೇವೆಯಿಂದ ಹಾಗೂ ತನ್ನ ಶಿಸ್ತುಬದ್ಧ ನಿಲುವಿನಿಂದ ಮಾದರಿಯಾಗಿದ್ದ ವಿರಾಟ್ ಸೇವೆಯನ್ನು ಸ್ವತಃ ರಾಷ್ಟ್ರಪತಿಯವರೇ ನೆನೆಸಿಕೊಂಡಿದ್ದಾರೆ.

ಇತ್ತ ರಾಷ್ಟ್ರಪತಿಗಳಿಗೆ 73ನೇ ಗಣರಾಜ್ಯೋತ್ಸವ ಪರೇಡ್ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಸ್ವಲ್ಪ ಸಂತಸದ ಜೊತೆ ತನ್ನ ಜೊತೆಗಾರನಿಗೆ ವಿದಾಯ ಹೇಳಿದ ಭಾವುಕ ಕ್ಷಣವಾಗಿತ್ತು. ಕಾರಣ ಅವರ ಅಂಗರಕ್ಷಕನಾಗಿದ್ದ ವಿರಾಟ್ ಶತಮಾನಗಳ ಸೇವೆಯ ನಂತರ ನಿವೃತ್ತಿಯಾದ ದಿನ ಅದಾಗಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೆರವಣಿಗೆಯ ನಂತರ ಭವ್ಯವಾದ ಕುದುರೆಯ ಬೆನ್ನು ತಟ್ಟಿ ಬೀಳ್ಕೊಟ್ಟರು. ಇದುವರೆಗೂ ಯಾವ ಕುದುರೆಗೂ ರಾಷ್ಟ್ರಪತಿ, ಪ್ರಧಾನಿ ಇಂಥದ್ದೊಂದು ಬೀಳ್ಕೊಡುಗೆ ಕೊಟ್ಟಿರುವ ಇತಿಹಾಸ ದೇಶದ ಇತಿಹಾಸದಲ್ಲಿ ಇರಲಿಲ್ಲ.

ಅಸಾಧಾರಣ ಸೇವೆ ಮತ್ತು ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದ ಅದ್ಭುತ ಅಶ್ವ್ ವಿರಾಟ್​ಗೆ ಜನವರಿ 15ರಂದು ಸೇನಾ ದಿನದ ಮುನ್ನಾದಿನದಂದು ಸೇನಾ ಮುಖ್ಯಸ್ಥರು ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದರ ಶೌರ್ಯ, ಶಿಸ್ತು ಹಾಗೂ ಅಸಾಧಾರಣ ಸೇವೆ ಮತ್ತು ಸಾಮರ್ಥ್ಯಗಳಿಗಾಗಿ ಪ್ರಶಂಸೆಯನ್ನು ಪಡೆದುಕೊಂಡ ಮೊದಲ ಸೇನಾ ಕುದುರೆ ಎಂಬ ಹೆಮ್ಮೆ ವಿರಾಟ್​ಗೆ ಸಲ್ಲುತ್ತದೆ. ವಿರಾಟ್, ಹ್ಯಾನೋವೇರಿಯನ್ ತಳಿಯ ಕುದುರೆಯಾಗಿದ್ದು ರಾಷ್ಟ್ರಪತಿಗಳ ಅಂಗರಕ್ಷಕನಾಗಿ ವಿರಾಟ್‌ ಒಂದು ದಶಕಕ್ಕೂ ಹೆಚ್ಚು ಕಾಲ ಕಮಾಂಡೆಂಟ್‌ನ ಚಾರ್ಜರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಿದ್ದ. ವಿರಾಟ್ ತನ್ನ ಸಮಚಿತ್ತದ ಟ್ರೇಡ್‌ಮಾರ್ಕ್ ಮತ್ತು ಆತ್ಮವಿಶ್ವಾಸದಿಂದ ವಿದೇಶಿ ಗಣ್ಯರು ಸೇರಿದಂತೆ ಅನೇಕ ನೋಡುಗರನ್ನು ಬೆರಗುಗೊಳಿಸಿದ್ದ. ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ ಕರ್ನಲ್ ಅನುಪ್ ತಿವಾರಿ ವಿರಾಟ್‌ನ ಸವಾರಿ ಮಾಡುತ್ತಿದ್ದರು. ಒಟ್ಟು 13 ಗಣರಾಜ್ಯೋತ್ಸವದ ಪರೇಡ್‌ಗಳಲ್ಲಿ ವಿರಾಟ್‌ ಭಾಗವಹಿಸಿದ್ದ.

ವಿರಾಟ್ ರಾಜಪಥ್‌ನಲ್ಲಿನ ಸದ್ದುಗದ್ದಲದ ಆ ಸಡಗರದಲ್ಲಿಯೂ ತನ್ನ ಸವಾರನ ಪಿಸುಮಾತುಗಳನ್ನು ಕೇಳಿ ಆತನ ಆದೇಶ ಚಾಚು ತಪ್ಪದೇ ಪಾಲಿಸುತ್ತಿದ್ದ. ಇದರಿಂದಾಗಿಯೇ ಅತ್ಯಂತ ವಿಶ್ವಾಸಾರ್ಹ ಕುದುರೆಗಳ ಸಾಲಿನಲ್ಲಿ ನಿಲ್ಲುವುದಕ್ಕೆ ಮುಖ್ಯ ಕಾರಣವಾಗಿತ್ತು. ರಾಜಪಥದಲ್ಲಿ ಭಾರಿ ಬ್ಯಾಂಡ್​ಗಳ ನಾದ ಮಾಡುತ್ತಿದ್ದರೂ, ಗನ್‌ಗಳ ಘರ್ಜನೆಯ ಮಧ್ಯ ಯುದ್ಧ ಟ್ಯಾಂಕ್‌ಗಳ ಕರ್ಕಶ ಸೌಂಡ್ ಜೊತೆ ವಿರಾಟ್ ಯಾವುದೇ ಅಂಜಿಕೆ ಇಲ್ಲದೇ ರಾಜ ಗಾಂಭಿರ್ಯದಲ್ಲಿ ತನ್ನ ಸವಾರ ಹೇಳಿದ ಆದೇಶವನ್ನು ಶಾಂತ ಮತ್ತು ಸಮಚಿತ್ತದಿಂದ ಪಾಲಿಸುತ್ತಿದ್ದ. ಇಂಥಹ ಅಸಾಮಾನ್ಯ ಕುದುರೆ ಇನ್ನೂ ಮುಂದೆ ನಿವೃತ್ತಿ ಜೀವನ ನಡೆಸಲಿದೆ. ಅದಕ್ಕೆ ದೇಶದ ಮೊದಲ ಪ್ರಜೆ, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ದೇಶದ ಹೆಮ್ಮೆಯ ಸ್ಥಳವಾಗಿದ್ದ ರಾಜಪಥದಲ್ಲಿಯೇ ಗೌರವಿಸಿ ಅಭಿನಂದಿಸಿದ್ದಾರೆ. ವಿರಾಟ್​ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಇಡಿ ದೇಶವೇ ಹಾರೈಸುತ್ತಿದೆ.

ಶ್ರೀನಾಥ್ ಜೋಶಿ, ಪವರ್​ ಟಿವಿ

- Advertisment -

Most Popular

Recent Comments