ಪಾಠ ಮಾಡಲು ಹೋಗುವ ಶಿಕ್ಷಕರಿಗೆ ಕೊರೋನಾದ ಈ ಸಂದರ್ಭದಲ್ಲಿ ಸುರಕ್ಷತೆ ನೀಡಬೇಕೆಂದು ಶಿಕ್ಷಕರು ಮನವಿ ಮಾಡಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರ ಶಿಕ್ಷಕರಿಗೆ ತಮ್ಮ ಕೆಲಸದಲ್ಲಿರುವ ಸ್ಥಳ ಮತ್ತು ಊರುಗಳ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಮಕ್ಕಳಿಗೆ ಪಾಠ ಮಾಡಬೇಕು ಎಂದು ಆದೇಶ ನೀಡಿದೆ. ಅಲ್ಲದೇ ಮನೆ ಬಾಗಿಲಿಗೆ ಹೋಗಿ ಪಾಠ ಮಾಡಬೇಕು ಎಂದು ಹೇಳಿದೆ. ಆದರೆ, ಕೊರೋನಾದ ಈ ಸಂದರ್ಭದಲ್ಲಿ ಹೀಗೆ ಪಾಠ ಮಾಡಲು ಹೋದ ಶಿಕ್ಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಶಿಕ್ಷಕಿಯರಂತೂ ಭಯ ಪಡುತ್ತಿದ್ದಾರೆ. ಈಗಾಗಲೇ ಕೊರೋನಾ ಲಕ್ಷಣ ಇರುವ ನೂರಾರು ಶಿಕ್ಷಕಿಯರು ಪಾಠ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಯಾವ ಸುರಕ್ಷತೆ ಇಲ್ಲದೇ ಪಾಠ ಮಾಡುವುದಾದರೂ ಹೇಗೆ ಎಂಬ ಆತಂಕದಲ್ಲಿದ್ದಾರೆ.
ಶಿಕ್ಷಕರ ಸಂಘ ಶಿಕ್ಷಕರ ಈ ಸಮಸ್ಯೆಗಳು ಗೊತ್ತಿದ್ದು ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಂಘ ಇರುವುದು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದೇ ಆಗಿದೆ. ಕೊರೋನಾದಂತಹ ಇಂತಹ ಸಂದರ್ಭದಲ್ಲಿ ಊರುಗಳಿಗೆ ತೆರಳಿ ಅದರಲ್ಲೂ ಮನೆ ಬಾಗಿಲಿಗೆ ಪಾಠ ಮಾಡುವುದು ಒಂದು ರೀತಿಯ ಕಷ್ಟವೇ ಸರಿ. ಈಗಾಗಲೇ ಕೊರೋನಾ ಸಮುದಾಯಕ್ಕೆ ಹಬ್ಬಿರುವುದರಿಂದ ಯಾರ ಮನೆಯಲ್ಲಿ ಯಾರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿಯುವುದೇ ಕಷ್ಟವಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಇದ್ಯಾವುದೇ ಗೊತ್ತಿಲ್ಲದಂತೆ ನೀವು ಪಾಠ ಮಾಡಲೇಬೇಕು ಎಂದು ಹೇಳುತ್ತಿರುವುದು ಮಾತ್ರ ವಿಪರ್ಯಾಸ.
ಇನ್ನೂ ಇದನ್ನೆಲ್ಲ ಬಿಟ್ಟು ಸರ್ಕಾರವೇ ಕೂಡಲೇ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡುವಂತೆ ಶಿಕ್ಷಕರ ಸಂಘ ಒತ್ತಾಯಿಸಬೆಕಾಗಿದೆ. ಶಾಲೆಗಳಲ್ಲೂ ಕೂಡ ಅಂತರ ಕಾಪಾಡಿಕೊಂಡು, ಮುಂಜಾಗ್ರತಾ ಕ್ರಮ ವಹಿಸಿ ಪಾಠ ಮಾಡಬಹುದಾಗಿದೆ. ಇದರಿಂದ ಶಿಕ್ಷಕರಿಗೂ ಆತಂಕ ದೂರವಾಗುತ್ತದೆ. ಇಲ್ಲದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡುವುದು ಕಷ್ಟವಾಗುತ್ತದೆ. ಶಿಕ್ಷಕರ ಸಂಘ ಹಾಗೂ ಅದರ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಮಾತ್ರ ಸುಮ್ಮನೆ ಇರುವುದು ಸರಿಯಲ್ಲ. ಕೂಡಲೇ ಶಿಕ್ಷಕರ ಜೊತೆ ಸಂಪರ್ಕ ಇಟ್ಟುಕೊಂಡು, ಚರ್ಚಿಸಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಶಿಕ್ಷಕರಿಗೆ ಅಗತ್ಯ ಕೊರೋನಾ ಪರಿಕರಗಳನ್ನು ನೀಡಬೇಕು. ಆದಷ್ಟು ಅಂತರ ಕಾಪಾಡಿಕೊಂಡು ಶಾಲೆಯಲ್ಲಿಯೇ ಪಾಠ ಮಾಡುವಂತೆ ಆದೇಶ ಮಾಡಬೇಕು ಮತ್ತು ಕೊರೋನಾ ಲಕ್ಷಣ ಇರುವ ಶಿಕ್ಷಕ-ಶಿಕ್ಷಕಿಯರಿಗೆ ಪಾಠ ಮಾಡುವುದರಿಂದ ಬಿಡುಗಡೆಗೊಳಿಸಬೇಕು. ಕೊರೋನಾದಿಂದ ಕೇವಲ ಶಿಕ್ಷಕರು ಮಾತ್ರವಲ್ಲ ಮಕ್ಕಳು ಸುರಕ್ಷಿತವಾಗಿರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.