ಚಿತ್ರದುರ್ಗ: ಹಲವಾರು ವರ್ಷಗಳಿಂದ ಸ್ಥಗಿತಗೊಂಡ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಅಪಾರ ಪ್ರಮಾಣದ ನೀರು ನಿಂತು ಅಪಾಯಗಳಿಗೆ ಆಹ್ವಾನ ನೀಡ್ತಾ ಇದೆ. ಯಾಕೆಂದರೆ ಸುಮಾರು 100 ಆಡಿಗಳ ಆಳ ಇರೋ ಪ್ರದೇಶಕ್ಕೆ ಯಾವುದೇ ರೀತಿಯಾದ ತಂತಿ ಬೇಲಿ, ಟ್ರೆಂಚ್ ಇಲ್ಲದ ಕಾರಣ ಕೂಡಲೆ ಸೀಲ್ ಮಾಡಿ ತಡೆಗೋಡೆ ನಿರ್ಮಾಣ ಮಾಡಲು ಸ್ಥಳೀಯರು ಆಗ್ರಹಿಸಿದ್ದಾರೆ.
ಕಲ್ಲುಗಣಿಗಾರಿಕೆ ನಡೆದ ಪ್ರದೇಶ ಅಪಾರ ಪ್ರಮಾಣ ನೀರಿನಿಂದ ತುಂಬಿದೆ. ನೋಡುವವರ ಮನಸ್ಸನ್ನು ಒಮ್ಮೆ ಸ್ತಬ್ದಗೊಳಿಸೋ ಈ ಸ್ಥಳ ಇರೋದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಿಂದ 5 ಕಿ,ಲೋ ಮೀಟರ್ ದೂರದಲ್ಲಿ ಇದೆ. ಹೊಸದುರ್ಗ ರಸ್ತೆ ಯ ಸಿದ್ದರಾಮ ನಗರದ ಬಳಿ ಇರೋ ಕಲ್ಲಿನ ಕ್ವಾರಿ ಸ್ಥಗಿತಗೊಂಡು ಸುಮಾರು ವರುಷಗಳೆ ಕಳೆದಿವೆ. ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆದಿದ್ದ ಈ ಕ್ವಾರಿ ಇಂದು ಕಾರ್ಯ ನಿರ್ವಹಿಸುತ್ತಿಲ್ಲ.
ಸುಮಾರು 100 ಅಡಿ ಹೆಚ್ಚು ಆಳದವರೆಗೂ ಇರೊ ಈ ಪ್ರದೇಶದಲ್ಲಿ ಅಪಾರ ಪ್ರಮಾಣ ನೀರು ಇರೋ ಕಾರಣ ಇಲ್ಲಿಗೆ ನೀರಿಗಾಗಿ ಬರೋ ಜಾನುವಾರುಗಳು ಹಾಗು ಈಜಾಡಲು ಬರೋ ಜನರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕೂಡಲೆ ತಾಲ್ಲೂಕು ಆಡಳಿತ ಎಚ್ಚೆತ್ತು ಕೊಳ್ಳ ಬೇಕು ಅಂತ ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ.