Home P.Special ಕಾಫಿ ಡೇ ಜನಕನ ಬದುಕಿನ ಹಾದಿ..!

ಕಾಫಿ ಡೇ ಜನಕನ ಬದುಕಿನ ಹಾದಿ..!

A lot can happen over coffee..ನಿಜ ಅಲ್ವಾ..! ಇಂಥದ್ದೊಂದು ಸಾಲನ್ನು ಜಗತ್ತಿಗೆ ಬೋಧಿಸಿದ್ದು ವಿ.ಜಿ. ಸಿದ್ದಾರ್ಥ. ಆದ್ರೆ ಅದೇ ಸಾಲೇ ಈಗ ಸಿದ್ಧಾರ್ಥ್​ ಅವರ ಬಾಳಿಗೆ ಪೂರ್ಣವಿರಾಮ ಇಡುತ್ತದೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಕಾಫಿ ಉದ್ಯಮದಲ್ಲಿ ಜಗತ್ತನ್ನೇ ಗೆದ್ದಿದ್ದ ಸಿದ್ಧಾರ್ಥ ಇಂದು ಜೀವನದ ಕಡೇ ಗುಟುಕನ್ನು ಸವಿದು ಎದ್ದು ಹೋಗಿದ್ದಾರೆ. 60ನೇ ವಯಸ್ಸಲ್ಲಿ ಕಹಿಯಾದ ಕಾಫಿ ಕಿಂಗ್​ನ ಒಂದೊಂದು ಹೆಜ್ಜೆಯ ಪರಿಚಯ ಇಲ್ಲಿದೆ.

22 ಸಾವಿರ ಕೋಟಿಯ ಒಡೆಯ, 12 ಸಾವಿರ ಎಕರೆ ಕಾಫಿ ತೋಟ,  3 ಸಾವಿರ ಎಕರೆ ಬಾಳೆ ತೋಟ. ದಾನಶೂರ ಅಂತ ಕರೆಸಿಕೊಳ್ಳೋ ತಂದೆ, ಪ್ರತೀ ಸೋಲಲ್ಲೂ ಧೈರ್ಯ ತುಂಬಿದ ತಾಯಿ, ಪ್ರತಿ ಹೆಜ್ಜೆ ಹೆಜ್ಜೆಗೂ ಕೈ ಜೋಡಿಸಿದ ಪತ್ನಿ, ಜೊತೆಗೆ ಸಾವಿರಾರು ನೌಕಕರ ಪ್ರೀತಿಯ ಆಶೀರ್ವಾದ, ಮಮಕಾರ ಇನ್ನೇನು ಬೇಕಿತ್ತು ಸಿದ್ಧಾರ್ಥ ಅವರಿಗೆ..! ಆದ್ರೆ ಸಿದ್ಧಾರ್ಥ್​ ಅವರ ಆ ಒಂದು ನಿರ್ಧಾರ ಜಗತ್ತನ್ನೇ ಬಿಟ್ಟುಹೋಗುವಂತೆ ಮಾಡಿದೆ.

ಸಿದ್ಧಾರ್ಥ್​​ ಕಾಫಿಕಿಂಗ್ ಆಗಲು, ಜಗತ್ತಿಗೆ ಕಾಫಿ ಘಮ ಪಸರಿಸಲು ಸವೆಸಿದ ಹಾದಿ ಅಷ್ಟು ಸುಲಭದಲ್ಲ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಸಿದ್ಧಾರ್ಥ್​​ ಹುಟ್ಟೂರು. ಇಲ್ಲಿನ ಚೇತನಾ ಎಸ್ಟೇಟ್​ ಮಾಲಿಕ ಗಂಗಯ್ಯ ಹೆಗ್ಡೆ ಹಾಗೂ ವಾಸಂತಿಯ ಒಬ್ಬನೇ ಮಗ ಈ ಸಿದ್ಧಾರ್ಥ ಹೆಗ್ಡೆ.

ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಸಿದ್ಧಾರ್ಥ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮುಂದೆ ಇದೇ ಅರ್ಥಶಾಸ್ತ್ರವೇ ಸಿದ್ಧಾರ್ಥ ಅವರಿಗೆ ಕಾಫಿ ಸಾಮ್ರಾಟ್, ಕಾಫಿ ಕಿಂಗ್ ಅನ್ನೋ ಹೆಸರನ್ನು ತಂದುಕೊಟ್ಟಿತ್ತು. ಹಾಗೆ ಇದೇ ಅರ್ಥಶಾಸ್ತ್ರವೇ  ಕಾಫಿಯನ್ನು ಕಹಿಯೂ ಮಾಡಿದೆ. ಪದವಿ ನಂತರ 1983-84 ರಲ್ಲಿ ಮುಂಬೈಗೆ ತೆರಳಿದ ಸಿದ್ಧಾರ್ಥ, ಜೆ.ಎಂ.ಫೈನಾನ್ಸಿಯಲ್ ಲಿಮಿಟೆಡ್​​ನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ನಂತರ ಮಹೇಂದ್ರ ಕಂಪನಿ ನೇತೃತ್ವದಲ್ಲಿ ಭಾರತೀಯ ಷೇರು ಮಾರುಕಟ್ಟೆ ಯಲ್ಲಿ ಪೋರ್ಟ್​​ಫೋಲಿಯೊ ಮ್ಯಾನೇಜರ್ ಹಾಗೂ ಸೆಕ್ಯುರಿಟಿ ವಹಿವಾಟಿನ ಟ್ರೈನಿಯಾಗಿ ಬದುಕು ಕಟ್ಟಿಕೊಂಡ್ರು. ಈ ಹಂತದಲ್ಲೇ ಸ್ವಾವಲಂಬನೆ ಅನ್ನೋ ಪದ ಸಿದ್ಧಾರ್ಥ ಅವರ  ಕನಸಿನಲ್ಲಿ ಮತ್ತೆ ಮತ್ತೆ ಕಾಡತೊಡಗಿತ್ತು. ಸ್ವಂತ ಉದ್ಯೋಗದ ಬಿಸಿಲು ಕುದುರೆ ಏರಿ ಸಿದ್ಧಾರ್ಥ ಹೊರಟಿದ್ದು ಇದೇ ಸಮಯದಲ್ಲಿ.

 ಅಪ್ಪನ ಬಳಿ ಮೊಟ್ಟ ಮೊದಲ ಬಾರಿಗೆ ಸಿದ್ಧಾರ್ಥ ಕೈ ಚಾಚೋದು 20 ಸಾವಿರ ರೂಪಾಯಿಗಳಿಗೆ. ತಂದೆಯಿಂದ 20 ಸಾವಿರ ಹಣ ಪಡೆದು ತನ್ನ 24 ನೇ ವಯಸ್ಸಿನಲ್ಲಿಯೇ ಸ್ಟಾಕ್ ಮಾರ್ಕೆಟ್​ಗೆ ಅಡಿ ಇಟ್ಟರು ಸಿದ್ಧಾರ್ಥ.  ಸ್ವಾಭಿಮಾನದ ಮೊದಲ ಹೆಜ್ಜೆ ಇಟ್ಟಾಗಲೇ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಾ ಹೋಯ್ತು.  ಸ್ಟಾಕ್ ಮಾರ್ಕೆಟ್​​ನಿಂದ ಬಂದ ಹಣದಿಂದ ಶಿವನ್ ಅಂದರೆ ಈಗ ಇರುವ ವೆ ಟು ವೆಲ್ತ್  ಎಂಬ ಕಂಪನಿಯೊಂದನ್ನು ಆರಂಭಿಸಿದರು. ಇದು ಸಿದ್ಧಾರ್ಥಗೆ ಹೆಚ್ಚು ಲಾಭದ ಜೊತೆ ಭಲೇ ಸಿದ್ಧಾರ್ಥ ಅನ್ನೋ ಹೆಗ್ಗಳಿಕೆಯನ್ನೂ ತಂದು ಕೊಟ್ಟಿತ್ತು. ಇದೇ ಉದ್ಯಮ ಹಾಗೂ ಗೌರವ ಮುಂದೆ 1988ರಲ್ಲಿ ಎಸ್.ಎಂ ಕೃಷ್ಣ ಅವರ ಪುತ್ರಿ ಮಾಳವಿಕಾ ಅವರ ಪತಿಯ ಸ್ಥಾನವನ್ನು ತುಂಬುವಂತೆ ಮಾಡಿತ್ತು. ಸಿದ್ಧಾರ್ಥ್ ಕೊನೆಯವರೆಗೂ ಒಬ್ಬ ಉದ್ಯಮಿಯಾಗಿಯೇ ಗುರುತಿಸಿಕೊಂಡರೇ ಹೊರತು ಎಸ್.ಎಮ್ ಕೃಷ್ಣ ಅವರ ಅಳಿಯನಾಗಿ ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ. ಸಜ್ಜನ ಮೃದು ಸ್ವಭಾವದ ಸಿದ್ದಾರ್ಥ್ ಜೀವನ ಬದಲಿಸಿದ್ದು ಕಾಫಿ ಬ್ಯುಸಿನೆಸ್. ಹುಟ್ಟಿದಾಗಿನಿಂದ ಕಾಫಿ ಜೊತೆ ಜೊತೆಗೆ ಬೆಳೆದಿದ್ದ ಸಿದ್ಧಾರ್ಥ ಕಾಫಿಯ ಜ್ಞಾನವನ್ನೇ ಅರೆದು ಕುಡಿದಿದ್ರು.  ಹೀಗೆ ಸಿದ್ಧಾರ್ಥ್​​ 1993ರಲ್ಲಿ  ಎಬಿಸಿ ಎಂಬ ಕಾಫಿ ಸಂಸ್ಥೆಯನ್ನು ಹುಟ್ಟು ಹಾಕಿದ್ರು

ಕೇವಲ ಎರಡೂವರೆ ಲಕ್ಷ ಬಂಡವಾಳದಲ್ಲಿ ಹುಟ್ಟಿದ ಕಾಫಿ ಡೇ ಸಂಸ್ಥೆ ಭಾರತ ಬಿಟ್ಟು ವಿಶ್ವದಲ್ಲೂ ರಾರಾಜಿಸಿದ್ದಕ್ಕೆ ಅದರ ಪ್ರಖ್ಯಾತಿಯೇ ಕಾರಣ. 1800 ಕಾಫಿ ಶಾಪ್​ಗಳನ್ನು ಹೊಂದಿರೋ ಕಾಫಿ ಡೇ ಪ್ರತೀ ತಿಂಗಳ ವಹಿವಾಟು ಎರಡೂವರೆಯಿಂದ ಮೂರು ಸಾವಿರ ಕೋಟಿ ರೂಪಾಯಿ. 55 ಸಾವಿರ ಉದ್ಯೋಗಿಗಳಿಗೆ ಜೀವನದ ಹಾದಿ ತೋರಿಸಿಕೊಟ್ಟಿದ್ದು ಇದೇ ಕೆಫೆ ಕಾಫಿ ಡೇ.  ಡಾ. ಮನಮೋಹನ್ ಸಿಂಗ್  ಪ್ರಧಾನಿಗಳಾಗಿದ್ದಾಗ ಕಾಫಿ ಬೆಳೆಗಾರರು ಎದುರಿಸುತ್ತಿದ್ದಂತಹ ಹಲವು ತೊಂದರೆಗಳನ್ನು ಅವರ ಮುಂದಿಟ್ಟು ನೇರವಾಗಿ ಮಾರಾಟ ಮಾಡಲು ಅನುಕೂಲವಾಗುವಂತಹ ಪರಿಸ್ಥಿತಿಯನ್ನು ದೇಶದಲ್ಲಿ ಮೊದಲು ನಿರ್ಮಿಸಿದ್ದು ಸಿದ್ಧಾರ್ಥ.

1996ರಲ್ಲಿ ಬೆಂಗಳೂರಿನ ಬ್ರಿಗೇಡ್​ ರಸ್ತೆಯಲ್ಲಿ ಸಿದ್ಧಾರ್ಥ್​​ ಮೊದಲ ಬಾರಿಗೆ ಕಾಫಿ ಡೇ ಕೆಫೆ ಅರಂಭಿಸಿದ್ರು. ಆದರೆ ಅವರ ಕಾಫಿ ಡೇ ಶಾಪ್​​ ನೋಡಿ ಮೊದ ಮೊದಲು ಖಾಸಾ ಸ್ನೇಹಿತರೇ ನಗುತ್ತಿದ್ದರಂತೆ. ಇಷ್ಟು ಬೆಲೆ ಕೊಟ್ಟು ಯಾರು ಕಾಫಿ ಕುಡಿಯುತ್ತಾರೆ ಅಂತ ಮಾತಾಡಿಕೊಳ್ತಿದ್ದರಂತೆ. ಆದರೆ ವಾಸ್ತವದಲ್ಲಿ ಕಾಫಿ ಡೇ ಬೆಳೆದದ್ದು ದೇಶದಲ್ಲಿ ಯಾವ ಉಧ್ಯಮವೂ ಬೆಳೆಯದ ರೀತಿ. ಬಿಸ್​ನೆಸ್ ಮೀಟಿಂಗ್, ಲವ್ವರ್ಸ್ ಸ್ಪಾಟ್, ಸ್ಟೇಸ್ ಫ್ರೀ ಸ್ಪೇಸ್ ಹೀಗೆಲ್ಲಾ ಕರೆಸಿಕೊಂಡು ಜಗತ್ತಿಗೆ ಕಾಫಿಯ ಕಂಪನ್ನು ಬೀರಿತ್ತು. ವಿಶೇಷ ಅಂದ್ರೆ ಎಲ್ಲಾ ಕಾಫಿ ಡೇ ಗಳಿಗೂ ಸಿದ್ಧಾರ್ಥ್ ತಮ್ಮ ತೋಟದಲ್ಲಿ ಬೆಳೆದ ಕಾಫಿ ಬೀಜಗಳನ್ನೇ ಸರಬರಾಜು ಮಾಡುತ್ತಿದ್ದರು. ಇದಕ್ಕೆಂದೆ ತಮ್ಮ ಊರಿನಲ್ಲಿ ಸಮಾರು 18000 ಎಕರೆಯಷ್ಟು ಕಾಫಿ ತೋಟವನ್ನು ಖರೀದಿಸಿದ್ದರು. ಕಳೆದ ಮೂರು ದಶಕದಿಂದ ಪ್ರತಿಷ್ಟಿತ ಉದ್ಯಮವಾಗಿರುವ ಕಾಫಿ ಡೇ,  ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಲಿಮಿಟೆಡ್ ಮೂಲಕ 55 ಸಾವಿರ ಮಂದಿಗೆ ಉದ್ಯೋಗವನ್ನೂ ಸಹ ನೀಡಿತ್ತು. 2000ನೇ ಇಸವಿಯಲ್ಲಿ ಐಟಿಯಲ್ಲಿ ಹೂಡಿಕೆ ಮಾಡುವವರಿಗೆ ಮಾರ್ಗದರ್ಶನಕ್ಕಾಗಿ ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್ ಅರಂಭಿಸಿದ್ದರು.  ಜಿಟಿವಿ ,ಮೈಂಡ್ ಟ್ರೀ, ಲಿಕ್ವಿಡ್ ಕ್ರಿಸ್ಟಲ್, ವೇ2ವೆಲ್ತ್ ಮತ್ತು ಇಟ್ಟಿಯಂ ಕಂಪೆನಿಯಲ್ಲಿ ಪಾಲುದಾರಿಕೆ ಹೊಂದಿದ್ರು ಸಿದ್ಧಾರ್ಥ ಹೆಗಡೆ.

ಉದ್ಯಮಿಗಳು ಸಾಯುತ್ತಾರೆಯೇ ಹೊರತು ನಿವೃತ್ತರಾಗುವುದಿಲ್ಲ ಎಂದು ಹೇಳುತ್ತಿದ್ದಂತಹ ಸಿದ್ಧಾರ್ಥ ಎರಡು ವರ್ಷಗಳ ಹಿಂದೆ ನಡೆದಿದ್ದ IT ದಾಳಿಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಸಿದ್ಧಾರ್ಥ ಅವರ ಆಸ್ತಿಗಳನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿತ್ತು. ಇತ್ತ ಬ್ಯಾಂಕ್​ಗಳಿಂದ ತೆಗೆದುಕೊಂಡ ಸಾಲ ಹೆಚ್ಚುತ್ತಾ ಹೋಯ್ತು, ಇದರಿಂದ ತೀವ್ರ ಕುಗ್ಗಿದ್ದ ಸಿದ್ಧಾರ್ಥ ನೇತ್ರಾವತಿಗೆ ಹಾರಿ ಪ್ರಾಣಬಿಟ್ರು.

ವಿಶ್ವಕ್ಕೆ ಕಾಫಿಯ ಸ್ವಾದವನ್ನ ತೊರಿಸಿಕೊಟ್ಟ ಕಾಫಿ ಸಾಮ್ರಾಜ್ಯದ ಫಕೀರ ಇನ್ನು ನೆನಪು ಮಾತ್ರ. ಕಾಣದ ಕಡಲಿಗೆ ಕಾಫಿ ಕಿಂಗ್ ಪಯಣಿಸಿಬಿಟ್ಟಿದ್ದಾರೆ. ಕಣ್ಣೀರಲ್ಲೇ ಕಾಫಿ ಡೇ ಮರುಗುತ್ತಿದೆ. ಸಿದ್ಧಾರ್ಥ ಅವರ ವ್ಯಕ್ತಿತ್ವಕ್ಕೆ ಸಾಲು ಸಾಲು ಪದಗಳು ಬೇಕಾಗಿಲ್ಲ..ಅಂತಿಮ ಯಾತ್ರೆಯಲ್ಲಿ ಅಭಿಮಾನಿಗಳನ್ನು ನೋಡಿದ್ರೆನೇ ಗೊತ್ತಾಗುತ್ತೆ ಅವರ ವ್ಯಕ್ತಿತ್ವ, ಸಂಪಾದಿಸಿದ ಗೌರವ ಎಂಥದ್ದು ಅಂತ. ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಚಿಕ್ಕಮಗಳೂರಿನ ಕಾಫಿ ಘಮಲನ್ನು ಪಸರಿಸಿದ ನಿಮಗೆ ಯಾಕಿಷ್ಟು ಅವಸರವಿತ್ತು? ಹೇಳಿ ಸಿದ್ಧಾರ್ಥ್​​! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನಡೆವುದೇ ಜೀವನ ಅನ್ನೋದು ಇದಕ್ಕೇನಾ..?!

ಮೈಥಿಲಿ ಗೌಡ

LEAVE A REPLY

Please enter your comment!
Please enter your name here

- Advertisment -

Most Popular

ಕೊನೆಯ ಪರೀಕ್ಷೆಯಲ್ಲಿ 515 ವಿದ್ಯಾರ್ಥಿಗಳು ಗೈರು..!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕೊನೆಯ ದಿನವಾದ ಇಂದು ಒಟ್ಟು 515 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯಲ್ಲಿ 13061 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿತರಾಗಿದ್ದು ಅದರಲ್ಲಿ 12546...

ಮೊಬೈಲ್ ಸುಲಿಗೆ ಜೊತೆಗೆ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ.

ಶಿವಮೊಗ್ಗ : ಮೊಬೈಲ್ ಸುಲಿಗೆ ಮತ್ತು 3 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ತಪ್ಪಿಸಿಕೊಂಡು, ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಗಳಾದ 19 ವರ್ಷದ ಪ್ರಶಾಂತ್ ಮತ್ತು 18...

ಮಲೆನಾಡಿನಲ್ಲಿ ಮಳೆಯ ಆರ್ಭಟ..!

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.  ಬೆಳಗ್ಗೆಯಿಂದಲೂ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿತ್ತು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಲಲ್ಲೆ ಸಾಧಾರಣ ಮಳೆ ಕೂಡ ಸುರಿಯುತ್ತಿತ್ತು. ಆದರೆ, ಸಂಜೆ ವೇಳೆಗೆ...

ಮುಂಜರಾಬಾದ್ ಕೋಟೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ: ಸಚಿವ ಸಿ.ಟಿ. ರವಿ

ಹಾಸನ : ಸಕಲೇಶಪುರ ತಾಲ್ಲೂಕಿನಲ್ಲಿರುವ ಮುಂಜರಾಬಾದ್ ಕೋಟೆಯ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ಕೇಂದ್ರ ಪುರಾತತ್ವದ ಅನುಮತಿ ಪಡೆದು 3 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ...