Tuesday, January 18, 2022
Powertv Logo
Homeತಂತ್ರಜ್ಞಾನಫುಟ್ಬಾಲ್​ ಫಿಶ್​ ನೋಡಿ ಬೆಚ್ಚಿದ್ರು ಜನ !

ಫುಟ್ಬಾಲ್​ ಫಿಶ್​ ನೋಡಿ ಬೆಚ್ಚಿದ್ರು ಜನ !

ಜಗತ್ತಿನಲ್ಲಿ ಅದೆಷ್ಟು ಕೋಟಿ ರಾಶಿ ಜೀವಿಗಳಿವೆ ಅನ್ನೋದನ್ನ ಇದುವರೆಗೂ ನಿಖರವಾಗಿ ವಿಜ್ಞಾನಿಗಳಿಂದ ಪತ್ತೆ ಹಚ್ಚೋದಕ್ಕೆ ಸಾಧ್ಯವಾಗಿಲ್ಲ. ಕೆಲವೊಮ್ಮೆ ಅಪರೂಪದ ಸಾಗರ ಜೀವಿಗಳು ಪತ್ತೆಯಾದ್ರೆ ವಿಜ್ಞಾನಿಗಳು ಅವುಗಳ ಬಗ್ಗೆ ಅಧ್ಯಯನ ನಡೆಸೋದಕ್ಕೆ ಮುಂದಾಗ್ತಾರೆ. ಆದ್ರೆ ಇದೇ ಅಪರೂಪದ ಸಾಗರ ಜೀವಿಗಳು ಜನಸಾಮಾನ್ಯರನ್ನ ಕೆಲವೊಮ್ಮೆ ಬೆಚ್ಚಿ ಬೀಳಿಸೋದು ಕೂಡ ಉಂಟು. ಇದೀಗ ಇಂತಹದ್ದೆ ಒಂದು ಘಟನೆ ಸ್ಯಾನ್​ ಡಿಯಾಗೊದ ಸಮುದ್ರ ದಡದಲ್ಲಿ ನಡೆದಿದೆ.. ಏನದು ವಿಚಿತ್ರ ಘಟನೆ? ಯಾವ ಜೀವಿ ಪತ್ತೆಯಾಗಿದೆ?

ಈ ಭೂಮಿ ಅದೆಷ್ಟೋ ಕೋಟಿ ರಾಶಿ ಜೀವಿಗಳಿಗೆ ಅವಾಸ ಸ್ಥಾನವಾಗಿದೆ. ನಮ್ಮ ಭೂಮಿ ಸಾಕಷ್ಟು ವರ್ಷಗಳಿಂದ ವಿಕಾಸ ಹೊಂದಿ ಸಾಕಷ್ಟು ಅಚ್ಚರಿಯ ಬದಲಾವಣೆಗಳನ್ನ ಪಡೆದುಕೊಂಡು ಬಂದಿದೆ. ಈ ಪೃಥ್ವಿಯ ಜೊತೆಗೆ ಮಾನವನ ವಿಕಾಸವು ಕೂಡ ಬಹು ವೇಗವಾಗಿ ನಡೆದುಕೊಂಡು ಬಂದಿದೆ. ಇಂದು ಜಗತ್ತಿನಲ್ಲಿರುವ ಜೀವ ರಾಶಿಗಳಲ್ಲಿ ಮಾನವ ಬುದ್ಧಿ ಜೀವಿಯಾಗಿ ಬೆಳೆದು ನಿಲ್ಲೋದ್ರ ಜೊತೆಗೆ ಜಗತ್ತನ್ನ ಆಳ್ತಾ ಇದ್ದಾನೆ. ಇನ್ನು ಈ ಪ್ರಕೃತಿ ಕೂಡ ಅಷ್ಟೇ, ಮಾನವನ ಬೆಳವಣಿಗೆಗೆ ಎಲ್ಲಾ ರೀತಿಯಾದ ಸಹಕಾರವನ್ನ ನೀಡ್ಕೊಂಡು ಬಂದಿದೆ. ಅದೇ ರೀತಿ ಇದೇ ಭೂಮಿ ಮಾನವನಿಂದ ಅದೆಷ್ಟೋ ವಿಚಾರಗಳನ್ನ ಹಾಗು ಅದೆಷ್ಟೋ ಜೀವರಾಶಿಗಳನ್ನ ನಿಗೂಢವಾಗಿ ಇಟ್ಟಿದೆ.

ಹೌದು ಇಂದು ಮಾನವನಿಂದ ಈ ಪ್ರಕೃತಿ ರಹಸ್ಯವಾಗಿಟ್ಟಿರುವ ಅಂಶಗಳಲ್ಲಿ ಸಾಗರ ಹಾಗು ಸಾಗರದಲ್ಲಿನ ಜೀವಿಗಳು ಕೂಡ ಒಂದು. ಇಂದು ಈ ಜಗತ್ತು ಶೆ.25ರಷ್ಟು ಭೂ ಪ್ರದೇಶದಿಂದ ಆವರಿಸಿದ್ರೆ ಶೇ.75 ರಷ್ಟು ಸಾಗರದಿಂದ ಆವೃತ್ತವಾಗಿದೆ. ಅದರಲ್ಲಿ ಮಾನವ ಮಾತ್ರ ಸಾಗರವನ್ನ ಅಧ್ಯಯನ ಮಾಡಿ, ಸಾಗರದಲ್ಲಿನ ಕೆಲವೇ ಕೆಲವು ಜೀವಿಗಳನ್ನ ಪತ್ತೆ ಹಚ್ಚಿದ್ದಾನೆ. ಇನ್ನು ವಿಜ್ಞಾನಿಗಳ ಪ್ರಕಾರ ಇಂದಿಗೆ ಮಾನವ ನಿಖರವಾಗಿ ಪತ್ತೆ ಹಚ್ಚಿರೋದು ಕೇವಲ 2,28,450 ಜೀವಿಗಳು ಅಂತ ಹೇಳಲಾಗಿದೆ. ಸರಿಯಾದ ರೀತಿಯ ಸಂಶೋಧನೆ ನಡೆಸೋದಕ್ಕೆ ಸಾಧ್ಯವಾದ್ರೆ ಸುಮಾರು 20 ಲಕ್ಷ ಸಾಗರದ ಜೀವಗಳನ್ನ ಮಾನವ ಪತ್ತೆ ಹಚ್ಚೋದಕ್ಕೆ ಸಾಧ್ಯವಾಗುತ್ತೆ ಅಂತ ಹೇಳ್ತಾ ಇದ್ದಾರೆ. ಆದ್ರೆ ಸಂಪೂರ್ಣವಾದ ಸಾಗರವನ್ನ ಅಧ್ಯಯನ ನಡೆಸೋದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಯಾಕಂದ್ರೆ ಸಂಪೂರ್ಣವಾದ ಸಾಗರವನ್ನ ಅಧ್ಯಯನ ಮಾಡೋದಕ್ಕೆ ಮಾನವನ ಬಳಿ ಬಲಿಷ್ಠವಾದ ಟೆಕ್ನಾಲಜಿ ಇಲ್ಲ ಅನ್ನೋದು ಜಗಜ್ಜಾಹೀರಾದ ಸತ್ಯವಾಗಿದೆ.

ಇದೀಗ ಸದ್ಯಕ್ಕೆ ಮಾನವ ತನ್ನ ಬಳಿ ಇರುವ ಟೆಕ್ನಾಲಜಿಯನ್ನ ಬಳಸಿ ಹಲವು ಅಪರೂಪದ ಹಾಗು ವಿಶೇಷವೆನಿಸುವ ಕೆಲವು ಸಾಗರ ಜೀವಿಗಳನ್ನ ಪತ್ತೆ ಹಚ್ಚಿದ್ದಾನೆ. ಆದ್ರೂ ಅವುಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸೋದಕ್ಕೆ ಸಾಧ್ಯವಾಗಿಲ್ಲ. ಯಾಕಂದ್ರೆ, ಸಮುದ್ರದ ಮೇಲ್ಮೈನಿಂದ ತಳದವರೆಗೆ ಬೇರೆ ಬೇರೆ ವಾತಾವರಣ ಇರೋದ್ರಿಂದ ಮಾನವನಿಗೆ ಇದರ ಅಧ್ಯಯನ ಸಾಕಷ್ಟು ಕಷ್ಟವಾಗಿದೆ. ಇನ್ನು ಇಂತಹದ್ದೆ ಒಂದು ಸಮಸ್ಯೆ ವಿಜ್ಞಾನಿಗಳಿಗೆ ಕಾಡಿದ್ದು ಫುಟ್​ಬಾಲ್​ ಫಿಶ್​ಗಳ ಬಗೆಗಿನ ಸಂಶೋಧನೆಯಲ್ಲಿ.. ಹೌದು 1837ರಲ್ಲಿ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕ ಜೋಹಾನ್ ರೆನ್ಹಾರ್ಡ್ ಗುರುತಿಸಿದ್ದ ಈ ಫುಟ್​ಬಾಲ್​ ಫಿಶ್ ಇಂದಿಗೂ ಕೂಡ ವಿಜ್ಞಾನಿಗಳಿಗೆ ಸಾಕಷ್ಟು ಕುತೂಹಲವನ್ನ ಮೂಡಿಸಿದೆ..

ಮೊನ್ನೆ ಮೊನ್ನೆಯಷ್ಟೆ ಸ್ಯಾನ್ ಡಿಯಾಗೋ ಪ್ರದೇಶದ ಟೊರೆ ಪೈನ್ಸ್​ನಲ್ಲಿರುವ ಬ್ಲ್ಯಾಕ್ ಬೀಚ್​ನಲ್ಲಿ ಈ ಫುಟ್​​ಬಾಲ್​ ಫಿಶ್ ಪತ್ತೆಯಾಗಿದೆ. ಬೀಚ್​ನ ಬಳಿ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಭಯಂಕರವಾಗಿ ಕಾಣುವ ಮೀನು ಕಂಡಿದ್ದು, ಬಳಿಕ ಇದನ್ನ ಜೆಲ್ಲಿ ಫಿಶ್​ ಅಂತ ಭಾವಿಸಿದ್ರಂತೆ. ಆದ್ರೆ ಹತ್ತಿರ ಬಂದು ನೋಡಿದಾಗ ಅವರು ಹಿಂದೆಂದೂ ನೋಡಿರದ ವಿಚಿತ್ರ ಜೀವಿಯ ಹಾಗೆ ಈ ಫಿಶ್ ಕಂಡಿದೆ. ನಂತರ ಸ್ಕ್ರಿಪ್ಸ್ ಇನ್​ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯ ವಿಜ್ಞಾನಿಗಳಿಗೆ ಈ ಫಿಶ್​ನ ಫೋಟೊವನ್ನ ಕಳುಹಿಸಿದ್ದಾರೆ. ಬಳಿಕ ಈ ಫೋಟೋವನ್ನ ಕಂಡ ವಿಜ್ಞಾನಿಗಳು ಇದನ್ನ ಪೆಸಿಫಿಕ್ ಫುಟ್ಬಾಲ್ ಮೀನು ಅಂತ ದೃಢಿಕರಿಸಿದ್ದಾರೆ

ಇಲ್ಲಿ ವಿಚಿತ್ರ ಅಂದ್ರೆ, ಈ ಫುಟ್​ಬಾಲ್​ ಮೀನುಗಳು ಅಷ್ಟು ಸುಲಭವಾಗಿ ಮಾನವನ ಕಣ್ಣಿಗೆ ಕಾಣಿಸಿಕೊಳ್ಳೋದಿಲ್ಲ. ಯಾಕಂದ್ರೆ ಈ ಮೀನುಗಳು ಸುಮಾರು 3,000-4,000 ಅಡಿ ಆಳದ ನೀರಿನಲ್ಲಿ ವಾಸಿಸುತ್ತವೆ. ಇವುಗಳು ಸಾಧಾರಣವಾಗಿ ಇಷ್ಟೊಂದು ಆಳದಲ್ಲಿ ಇರೋದ್ರಿಂದ ಸಾಗರದ ಆಳಕ್ಕೆ ಹೋಗುವ ಸಾಗರ ತಜ್ಞರ ಕಣ್ಣಿಗೆ ಬಿಟ್ರೆ ಇನ್ಯಾರಿಗೂ ಕಾಣಿಸೋದಿಲ್ಲ. ಹಾಗಾಗಿ ಇವುಗಳು ಅಪರೂಪದ ಮೀನುಗಳು ಅಂತ ಜನರಿಂದ ಕರೆಯಿಸಿಕೊಳ್ಳುತ್ತವೆ. ಈ ಮೀನುಗಳನ್ನ ಹಿಮಾಂತೊಲೊಫೈಡೇ ಅನ್ನೋ ವೈಜ್ಞಾನಿಕ ಭಾಷೆಯಿಂದ ಕರೆಯಲಾಗುತ್ತಿದೆ. ಇವುಗಳು ಹೆಚ್ಚಾಗಿ ಅಟ್ಲಾಂಟಿಕ್, ಭಾರತೀಯ ಮತ್ತು ಪೆಸಿಫಿಕ್ ಸಾಗರಗಳ ಉಷ್ಣವಲಯದ ಮತ್ತು ಉಪೋಷ್ಣ ವಲಯದ ನೀರಿನಲ್ಲಿ ಅತಿ ಕಂಡು ಬರುತ್ತೆ ಅಂತ ಸಾಗರ ತಜ್ಞರು ಸ್ಪಷ್ಟನೆಯನ್ನ ಕೊಟ್ಟಿದ್ದಾರೆ.

ಇನ್ನು ಈ ವರ್ಷದಲ್ಲಿ ಈ ಫುಟ್ಬಾಲ್​ ಮೀನುಗಳು ಎರಡನೇ ಬಾರಿಗೆ ಕಾಣಿಸಿಕೊಂಡು ಸಾಕಷ್ಟು ಅಚ್ಚರಿಯನ್ನ ಮೂಡಿಸ್ತಾ ಇವೆ. ಯಾಕಂದ್ರೆ ಸಾಧರಣವಾಗಿ ಈ ಮೀನುಗಳನ್ನು ಸಮುದ್ರ ಬಿಟ್ಟು ಬೇರೆಲ್ಲೂ ಕೂಡ ಪತ್ತೆ ಹಚ್ಚೋದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇದು ಪದೆ ಪದೇ ಸಮುದ್ರದ ದಡದಲ್ಲಿ ಕಂಡು ಬರ್ತಾ ಇರೋದ್ರಿಂದ ಮುಂದೆ ಏನಾದ್ರು ಅಪಾಯ ಬರಬಹುದು ಅನ್ನೋ ಗಾಳಿ ಸುದ್ಧಿ ಕೂಡ ಹಬ್ಬೋದಕ್ಕೆ ಶುರುವಾಗಿದೆ. ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಜ್ಞಾನಿಗಳು ಈ ಫುಟ್ಬಾಲ್​ ಮೀನು ಸಮುದ್ರದ ಮೇಲ್ಮಟ್ಟದಲ್ಲಿ ಬಂದಾಗ ಅಲೆಯ ಹೊಡೆತದಿಂದ ದಡಕ್ಕೆ ಬಂದು ಸಾವನ್ನಪ್ಪಿರಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮೀನಿನ ಬಗ್ಗೆ ಸಾಗರ ತಜ್ಞರು ಅಧ್ಯಯನ ನಡೆಸ್ತಾ ಇದ್ದಾರೆ.

ಒಟ್ಟಾರೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಮೀನು, ಇದೀಗ 2ನೇ ಬಾರಿಗೆ ಪತ್ತೆಯಾಗಿದೆ. 3ರಿಂದ 4 ಸಾವಿರ ಅಡಿಗಳಲ್ಲಿ ಈ ಅಪರೂಪದ ಜೀವಿಗಳು ಹೇಗೆ ಬದುಕುತ್ತವೆ ಅನ್ನೋದನ್ನ ಅಧ್ಯಯನ ನಡೆಸೋದಕ್ಕೆ ಸಹಕಾರಿಯಾಗಲಿದೆ. ಇದ್ರ ಜೊತೆಗೆ ಮುಂದಿನ ದಿನಗಳಲ್ಲಿ ಸಾಗರದ ಅಧ್ಯಯನಕ್ಕೆ ಕೂಡ ಇದು ನೆರವಾಗಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

Recent Comments