ಮಂಗಳೂರು : ಮಾಜಿ ಸಚಿವ ಯು.ಟಿ ಖಾದರ್ ಕೊರೋನಾ ಸೋಂಕಿತೆ ಶವದ ಮುಖದ ಮೇಲಿನ ಸುರಕ್ಷಾ ಹೊದಿಕೆಯನ್ನು ತೆಗೆಸಿ ನೋಡುವ ಮೂಲಕ ಕೊರೋನಾ ನಿಯಮ ಉಲ್ಲಂಘಿಸಿದ್ದಾರೆ.
ಇಲ್ಲಿನ ಮಂಗಳಾದೇವಿಯ ಮಹಿಳೆಯೊಬ್ಬರು ಕೊರೋನಾದಿಂದ ಮೃತಪಟ್ಟಿದ್ದು, ಅವರ ಮೃತದೇಹವನ್ನು ಆಸ್ಪತ್ರೆಯಿಂದ ನಗರದ ಬೋಳಾರ ರುದ್ರಭೂಮಿಗೆ ಅಂತ್ಯಕ್ರಿಯೆಗಾಗಿ ಸಾಗಿಸಲಾಗಿತ್ತು. ಅಲ್ಲಿಗೆ ಭೇಟಿ ನೀಡಿದ ಯು.ಟಿ ಖಾದರ್ ಮತ್ತು ಮಾಜಿ ಎಂಎಲ್ಸಿ ಐವನ್ ಡಿಸೋಜಾ ಅಂತಿಮ ದರ್ಶನ ಪಡೆದುಕೊಂಡರು. ಈ ಸಂದರ್ಭ ನಾಲ್ಕು ಮಂದಿ ಕಾಂಗ್ರೆಸ್ ಪದಾಧಿಕಾರಿಗಳೂ ಉಪಸ್ಥಿತರಿದ್ದು, ಯಾರೊಬ್ಬರೂ ಸುರಕ್ಷತಾ ಕಿಟ್ ಧರಿಸಿರಲಿಲ್ಲ. ಮಾತ್ರವಲ್ಲದೇ ಪಾರ್ಥಿವ ಶರೀರದ ಮುಖದ ಮೇಲೆ ಇದ್ದ ಬಟ್ಟೆಯನ್ನ ಆರೋಗ್ಯ ಕಾರ್ಯಕರ್ತರು ಸರಿಸಿ ಮುಖದರ್ಶನ ಮಾಡಿಸಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮೃತ ಮಹಿಳೆ ಕಾಂಗ್ರೆಸ್ ನಾಯಕರ ಸ್ನೇಹಿತರೊಬ್ಬರ ತಾಯಿ ಎನ್ನಲಾಗಿದೆ. ಆದರೆ ಸುರಕ್ಷತೆ ಪಾಲಿಸದೇ ಮಾಜಿ ಆರೋಗ್ಯ ಸಚಿವರೇ ಈ ರೀತಿಯಾಗಿ ನಡೆದುಕೊಂಡಿರುವುದು ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.