ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ತನ್ನ ಕದಂಬ ಬಾಹುವನ್ನು ಚಾಚುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 6,535 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ ಒಟ್ಟು 1,45,380 ಜನರು ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 146 ಜನರು ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು 4,167 ಸೋಂಕಿತರು ಸಾವನ್ನಪ್ಪಿದ್ದಾರೆ. ಇವೆಲ್ಲದರ ನಡುವೆ 60,491 ಜನ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ದೇಶದ ಸೋಂಕಿತರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 52,667 ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 2ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೂ ಮಹಾರಾಷ್ಟ್ರದಲ್ಲಿ ಸೋಂಕಿನಿಂದ 1,695 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇನ್ನು ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಕಳೆದ 24 ಗಂಟೆಯಲ್ಲಿ 805 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 17,082 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಸೋಂಕಿನಿಂದ 7 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆಯೂ 118 ಕ್ಕೆ ಏರಿಕೆಯಾಗಿದೆ.
ಗುಜರಾತ್ನಲ್ಲಿ ಸೋಂಕಿತರ ಸಂಖ್ಯೆ 14,460ಕ್ಕೆ ಏರಿಕೆಯಾಗಿದ್ದು, ನಿನ್ನೆಯಿಂದ ಇಂದಿಗೆ 404 ಜನ ಸೋಂಕಿಗೆ ತುತ್ತಾಗಿದ್ದಾರೆ. ಈವರೆಗೆ ಸೋಂಕಿನನಿಂದ ಮೃತಪಟ್ಟವರ ಸಂಖ್ಯೆಯೂ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 30 ಜನ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 888 ಕ್ಕೆ ಏರಿಕೆಯಾಗಿದೆ.
ದೆಹಲಿಯಲ್ಲಿ 635 ಜನ ಸೋಂಕಿಗೆ ತುತ್ತಾಗಿ ಸೋಂಕಿತರ ಸಂಖ್ಯೆ 14,053 ಕ್ಕೆ ಏರಿಕೆಯಾಗಿದೆ. ಇನ್ನು ಈವರೆಗೆ ಸೋಂಕಿನಿಂದ 276 ಜನ ಸಾವನ್ನಪ್ಪಿದ್ದಾರೆ. ಇವೆಲ್ಲದರ ನಡುವೆ ಸೋಂಕಿನಿಂದ ಒಟ್ಟು 6,771 ರಷ್ಟು ಜನ ಗುಣಮುಖರಾಗಿದ್ದಾರೆ.