ಬೆಂಗಳೂರು: ದೇಶಾದ್ಯಂತ ಕೊರೋನಾ ರೂಪಾಂತರ ಆತಂಕ ಸೃಷ್ಟಿಸಿದ್ದು, ಕೊರೋನಾ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಿನ್ನೆ ಸಭೆ ಮೇಲೆ ಸಭೆ ನಡೆಸಿದ ನಾಯಕರು, ಇಂದಿನಿಂದ ನೈಟ್ಕರ್ಫ್ಯೂ ಜಾರಿ ಮಾಡಲಾಗಿದೆ.
ಕೊರೋನಾ ಹೊಸ ರೂಪದಲ್ಲಿ ಜನ್ಮ ತಾಳಿದೆ. ಇದರ ಭಯಕ್ಕೆ ಇಡೀ ವಿಶ್ವವೇ ನಡುಗುತ್ತಿದ್ದು, ಇದರಿಂದ ಕರ್ನಾಟಕವೇನೂ ಹೊರತಲ್ಲ. ಹೊಸ ವೈರಸ್ ತಡೆಗಟ್ಟಲು ಇದೀಗ ರಾಜ್ಯವು ಸಹ ಮುಂದಾಗಿದ್ದು, ಅನೇಕ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರ ಮೊದಲ ಭಾಗವಾಗಿ ಇದೀಗ ನೈಟ್ ಕರ್ಫ್ಯೂ ಜಾರಿ ಮಾಡುವ ಮೂಲಕ ವೈರಸ್ ತಡೆಗೆ ಮುನ್ನುಡಿ ಬರೆದಿದೆ. ನೈಟ್ ಕರ್ಫ್ಯೂ ಜಾರಿಗೊಳಿಸಲು ಮುಂದಾಗಿದೆ. ಆದರೆ ನೈಟ್ ಕರ್ಫ್ಯೂ ಜಾರಿ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಯಿತು. ನಿನ್ನೆ ನೈಟ್ ಕರ್ಫ್ಯೂ ಅಗತ್ಯವಿಲ್ಲ ಅಂತ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಇಂದು ಬೆಳಗ್ಗೆ ಕೊವೀಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆಯ ನಂತರ ಮುಖ್ಯಮಂತ್ರಿ ಇಂದಿನಿಂದಲೇ ನೈಟ್ ಕರ್ಫ್ಯೂ ಅಂತ ಘೋಷಣೆ ಮಾಡಿದರು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಹೇರಲಾಗುತ್ತೆ ಅಂತ ಹೇಳಿದ್ದರು. ಸರ್ಕಾರದ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತ ಸಿಎಂ ಇಂದಿನಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.
ಡಾ.ಎಂ.ಕೆ. ಸುದರ್ಶನ್ ನೇತೃತ್ವದ ಕೊವೀಡ್ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಗೆ ನೂತನ ವೈರಸ್ ತಡೆಗಟ್ಟುವ ಬಗ್ಗೆ ಅನೇಕ ಮಾಹಿತಿ ನೀಡಿತ್ತು. ಮೊದಲು ತಾಂತ್ರಿಕ ಸಲಹಾ ಸಮಿತಿ ಜೊತೆಗೆ ಸಮಗ್ರ ಚರ್ಚೆ ನಡೆಸಿದ ಸುಧಾಕರ್ ನಂತರ ಸಿಎಂ ಕಚೇರಿಗೆ ತೆರಳಿ ಸಲಹಾ ಸಮಿತಿಯ ವರದಿಯ ಬಗ್ಗೆ ಚರ್ಚಿಸಿದರು. ಕ್ರಿಸ್ ಮಸ್ ಹಾಗೂ ಹೊಸವರ್ಷಾಚರಣೆಯ ಸಂದರ್ಭದಲ್ಲಿ ಸಾಕಷ್ಟು ಜನ ಸೇರುವುದರಿಂದ ವೈರಸ್ ಹರಡುವ ಸಾಧ್ಯತೆ ಇದೆ. ಹೀಗಾಗಿ ಹೊಸವರ್ಷಾಚರಣೆ ಮುಗಿಯುವವರೆಗೂ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವರದಿಯಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಸಿಎಂ ಗಮನಕ್ಕೆ ತಂದು ಸುಧಾಕರ್ ಚರ್ಚಿಸಿದರು.
ಹೊರಗಿನಿಂದ ಬಂದವರಿಗೆ ಕೊವಿಡ್ ಟೆಸ್ಟ್ ಸರ್ಟಿಫಿಕೇಟ್ ಕಡ್ಡಾಯ..!
ನೂತನ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಹೊರಗಿನಿಂದ ಬಂದವರಿಗೆ ಟೆಸ್ಟ್ ಸರ್ಟಿಫಿಕೇಟ್ ಕಡ್ಡಾಯವಾಗಲಿದ್ದು, 72 ಗಂಟೆಯೊಳಗೆ ಟೆಸ್ಟ್ ಮಾಡಿಸಿರೋ ರಿಪೋರ್ಟ್ ಇದ್ದರೆ ಮಾತ್ರ ಅನುಮತಿ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಜೊತೆಗೆ ಏರ್ ಪೋರ್ಟ್ ಗಳಲ್ಲೂ ಇದನ್ನ ಕಡ್ಡಾಯ ಮಾಡಿಸಲು ಸೂಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, ತಾಂತ್ರಿಕ ಸಮಿತಿ ವರದಿಯ ಆಧಾರದ ಮೇಲೆ ಈ ಕ್ರಮಕೈಗೊಂಡಿದ್ದೇವೆ. ನೂತನ ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದು, ವಿದೇಶದಿಂದ ಬಂದವರ ಮೇಲೆ ತೀವ್ರ ನಿಗಾ ಇಡಾಲಾಗುವುದು ಎಂದರು.