ಬೆಂಗಳೂರು : ರಾಜ್ಯ ಸರ್ಕಾರ 7 ನೇ ತರಗತಿಯಲ್ಲಿದ್ದ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ತೆಗೆದು ಹಾಕಿದೆ. ಕೊವಿಡ್ ನೆಪದಲ್ಲಿ ಟಿಪ್ಪು ಪಠ್ಯಕ್ಕೆ ಶಿಕ್ಷಣ ಇಲಾಖೆ ಕತ್ತರಿ ಹಾಕಿದೆ.
ಕೊರೋನಾ ಹಿನ್ನೆಲೆಯಲ್ಲಿ ಶೇ 30ರಷ್ಟು ಪಠ್ಯವನ್ನು ಕೈ ಬಿಡಲಾಗುತ್ತಿದೆ. ಶೈಕ್ಷಣಿಕ ಅವಧಿ 120 ದಿನಕ್ಕೆ ಲೆಕ್ಕಹಾಕಿ ಸರ್ಕಾರ ಪಠ್ಯಗಳನ್ನು ಕಡಿತಗೊಳಿಸಿದೆ. ಪ್ರಾಥಮಿಕ ಶಿಕ್ಷಣದಲ್ಲಿ 6 ಮತ್ತು 7ನೇ ತರಗತಿ ಎರಡಲ್ಲೂ ಟಿಪ್ಪು ಪಠ್ಯ ಇತ್ತು. ಇದೀಗ 7ನೇ ತರಗತಿಯಲ್ಲಿದ್ದ ಟಿಪ್ಪು ಪಠ್ಯ ತೆಗೆದು ಹಾಕಲಾಗಿದ್ದು, 6 ನೇ ತರಗತಿ ಮತ್ತು ಪ್ರೌಢಶಾಲೆಯಲ್ಲಿ 10ನೇ ತರಗತಿಗೆ ಟಿಪ್ಪು ಕುರಿತ ಪಠ್ಯ ಮುಂದುವರಿಯಲಿದೆ.
ಈ ಹಿಂದೆ ಟಿಪ್ಪು ಪಠ್ಯ ತೆಗೆಯಲು ಸರ್ಕಾರ ತೀರ್ಮಾನ ಮಾಡಿತ್ತು. ಬಳಿಕ ಸಮಿತಿ ರಚನೆ ಮಾಡಿ ಈ ಬಗ್ಗೆ ಸರ್ಕಾರ ವರದಿ ಪಡೆದಿತ್ತು.
ತಜ್ಞರ ಸಮಿತಿ ಟಿಪ್ಪು ಪಠ್ಯ ಉಳಿಸಿಕೊಳ್ಳೋದು ಸೂಕ್ತ ಎಂದು ಹೇಳಿತ್ತು. ನಂತರ ಪಠ್ಯ ಕೈಬಿಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿತ್ತು. ಈಗ ಕೊವಿಡ್ ಕಾರಣದಿಂದ 7ನೇ ತರಗತಿ ಟಿಪ್ಪು ಪಠ್ಯ ತೆಗೆಯಲಾಗಿದೆ.