Sunday, October 2, 2022
Powertv Logo
HomePower Specialಅವಮಾನವಾಗಿದ್ದು ಸಿಬಿಐಗೆ ಮಾತ್ರವಲ್ಲ ಇಡೀ ನ್ಯಾಯಾಂಗ ವ್ಯವಸ್ಥೆಗೆ, ಪ್ರಜಾಪ್ರಭುತ್ವಕ್ಕೆ…!

ಅವಮಾನವಾಗಿದ್ದು ಸಿಬಿಐಗೆ ಮಾತ್ರವಲ್ಲ ಇಡೀ ನ್ಯಾಯಾಂಗ ವ್ಯವಸ್ಥೆಗೆ, ಪ್ರಜಾಪ್ರಭುತ್ವಕ್ಕೆ…!

ಪಶ್ಚಿಮ ಬಂಗಾಳದಲ್ಲಿ ಚಿಟ್​ಫಂಡ್​ ಹಗರಣದ ಸಂಬಂಧ ತನಿಖೆಗೆ ಬಂದ ಸಿಬಿಐ ಅಧಿಕಾರಿಗಳನ್ನು ಪೊಲೀಸರು ತಡೆದಿರುವ ಘಟನೆ ರಾಜಕೀಯ ರೂಪ ಪಡೆದಿದೆ. ಸಿಬಿಐ ವರ್ಸಸ್​ ಪೊಲೀಸ್ ಅಲ್ಲ, ಮಹಾಘಟಬಂಧನ್​ ವರ್ಸಸ್​​ ಬಿಜೆಪಿ ಅನ್ನಲಾಗ್ತಿದೆ. ಮಮತಾ ವರ್ಸಸ್​ ಮೋದಿ ಎನ್ನಲಾಗ್ತಿದೆ. ಹೀಗೆ ಘಟನೆ ಯಾವ್ಯಾವುದೋ ದೃಷ್ಟಿಕೋನದಲ್ಲಿ ಚರ್ಚಿಸಲ್ಪಡ್ತಿದೆ. ಅದೇನೇ ಇರಲಿ. ಇವೆಲ್ಲವನ್ನು ಮೀರಿ, ರಾಜಕೀಯ ಸ್ವರೂಪಗಳನ್ನು ಘಟನೆಗೆ ಹೋಲಿಸದೇ ಜನಸಮಾನ್ಯನಾಗಿ ನೋಡಿದರೆ ಈ ಘಟನೆ ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅವಮಾನ, ಇಡೀ ನ್ಯಾಯಾಂಗ ವ್ಯವಸ್ಥೆಯನ್ನೇ ಧಿಕ್ಕರಿಸಿರುವುದು ವಾಸ್ತವ ಸತ್ಯ.

ಸಿಬಿಐ ಎಂದ ಕೂಡಲೇ ವಿಶೇಷ ಗೌರವ ಮೂಡುತ್ತದೆ. ಯಾಕಂದ್ರೆ ಕೇಂದ್ರ ತನಿಖಾ ದಳಕ್ಕಿರುವ ಘನತೆಯೇ ಅಂತಹದ್ದು. ಖಡಕ್ ಅಧಿಕಾರಿಗಳು, ಸ್ಥಾನ, ವ್ಯಕ್ತಿ, ಜಾತಿ, ಧರ್ಮ ನೋಡದೇ ತಪ್ಪಿನ ತನಿಖೆ ನಡೆಸಿ ಅಪರಾಧಿಯನ್ನು ನ್ಯಾಯಾಂಗದ ಮುಂದೆ ನಿಲ್ಲಿಸುವ ಸಿಪಾಯಿಗಳು. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಮಾತ್ರ ಸಿಬಿಐ ಘನತೆಗೇ ಅವಮಾನ ಮಾಡಿದಂತಿದೆ. ರಾಜಕೀಯ ಒಳಜಗಳಕ್ಕೆ ಸಿಬಿಐ ಅಧಿಕಾರಿಗಳನ್ನೇ ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಇದು ಸಿಬಿಐಗೆ ಮಾತ್ರ ಆಗಿರುವ ಅವಮಾನವಲ್ಲ, ಬದಲಾಗಿ ದೇಶದ ಜನರೆಲ್ಲ ನಂಬಿರುವ, ಗೌರವಿಸುವ ನ್ಯಾಯಾಂಗ ವ್ಯವಸ್ಥೆಗಾಗಿರುವ ಅವಮಾನ, ನಾವು ನೀವೆಲ್ಲರೂ ಭಾಗವಾಗಿರುವ ಭಾರತದ ಭವ್ಯ ಪ್ರಜಾಪ್ರಭುತ್ವಕ್ಕಾಗಿರುವ ಅವಮಾನ.

ಚಿಟ್​ಫಂಡ್​ ಹಗರಣದ ಸಂಬಂಧ ಕೊಲ್ಕತ್ತಾ ಪೊಲೀಸ್ ಕಮಿಷನರ್​ ರಾಜೀವ್​ ಕುಮಾರ್​ ಅವರಿಗೆ ತನಿಖೆಗೆ ಹಾಜರಾಗುವಂತೆ ಸಿಬಿಐ ನೋಟೀಸ್ ಕಳುಹಿಸಿತ್ತು. ಆದರೆ ರಾಜೀವ್​ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ವಿಚಾರಣೆಗೂ ಹಾಜರಾಗಿರಲಿಲ್ಲ. ಸಿಬಿಐ ಅಧಿಕಾರಿಗಳ ತಂಡ ಫೆಬ್ರವರಿ 3ರಂದು ರಾಜೀವ್ ಕುಮಾರ್​ ಮನೆಗೆ ವಿಚಾರಣೆಗಾಗಿ ಬಂದಿದೆ. ಅದೂ ಸುಪ್ರೀಂ ಕೋರ್ಟ್​ ಅನುಮತಿಯೊಂದಿಗೆ. ಆದರೆ ಕೊಲ್ಕತ್ತಾದ ರಾಜೀವ್​​ ಮನೆಯ ಆವರಣದಲ್ಲಿ ವಿಚಾರಣೆ ಬಿಟ್ಟು ಬೇರೆಲ್ಲ ನಡೆಯಿತು. ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂಬಂತಹ ಪೊಲಿಟಿಕಲ್​ ಹೈಡ್ರಾಮಕ್ಕೆ ದೇಶದ ಜನ ಸಾಕ್ಷಿಯಾದರು. ರಾಜೀವ್​ ಅವರ ವಿಚಾರಣೆಗೆ ಬಂದ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುವುದಿರಲಿ, ರಾಜೀವ್​ ಮನೆ ಆವರಣ ಪ್ರವೇಶಿಸುವುದಕ್ಕೂ ಸಾಧ್ಯವಾಗಲಿಲ್ಲ. ಅದಕ್ಕೂ ಮುನ್ನ ಸ್ಥಳೀಯ ಪೊಲೀಸರು ಸಿಬಿಐ ಅಧಿಕಾರಿಗಳನ್ನೇ ತಡೆದು ನಿಲ್ಲಿಸಿದರು. ಅಷ್ಟೊತ್ತಿಗಾಗಲೇ ಸಿಎಂ ಮಮತಾ ಬ್ಯಾನರ್ಜಿ ಸ್ಥಳಕ್ಕೂ ತಲುಪಿದ್ದರು. ಪೊಲೀಸ್​ ಕಮಿಷನರ್​ ಒಬ್ಬರ ರಕ್ಷಣೆಗೆ ಸ್ವತಃ ಸಿಎಂ ಓಡೋಡಿ ಬಂದಿದ್ದು ಅಲ್ಲದೆ ಸಿಬಿಐ ಅಧಿಕಾರಿಗಳನ್ನು ತಡೆಯಲು ಸಾಥ್​ ಕೊಟ್ಟಿದ್ದು ಅತಿರೇಕವಲ್ಲದೆ ಮತ್ತಿನ್ನೇನು?

ಏನಿದು ಚಿಟ್​ಫಂಡ್​ ಹಗರಣ: ಉತ್ತಮ ರಿಟನ್ಸ್​ನ ಭರವಸೆ ನೀಡಿ ಸ್ಕೀಮ್​ ಮೂಲಕ ಲಕ್ಷಾಂತರ ಜನರ ಹಣವನ್ನು ಸಂಗ್ರಹಿಸಿ ವಂಚಿಸಿದ ಪ್ರಕರಣವೇ ಶಾರದಾ ಚಿಟ್​​ಫಂಡ್​ ಹಗರಣ. ಸುಮಾರು 1,200 ಕೋಟಿಯಷ್ಟು ಹಣ ಸಂಗ್ರಹಿಸಿದ್ದಲ್ಲದೆ ಸುಮಾರು 4,000 ಕೋಟಿ ರೂಪಾಯಿ ವಂಚನೆಯಾಗಿರುವುದು ಬಯಲಿಗೆ ಬಂದಿತ್ತು. 2013ರ ಎಪ್ರಿಲ್​ನಲ್ಲಿ ಕಂಪನಿ ಮುಚ್ಚಲ್ಪಟ್ಟಿತ್ತು.

ಘಟನೆ ಬೆಳಕಿಗೆ ಬಂದಾಗ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಪಕ್ಷ ಚಿಟ್​ಫಂಡ್​ ಕಂಪನಿಯ ಮುಖ್ಯಸ್ಥ ಸುದಿಪ್ತಾ ಸೆನ್ ಜೊತೆ ಆತ್ಮೀಯ ಸಂಬಂಧ ಹೊಂದಿದೆ ಅಂತ ವಿರೋಧ ಪಕ್ಷಗಳು ಆರೋಪಿಸಿದ್ದವು. ತೃಣಮೂಲ ರಾಜ್ಯಸಭಾ ಸಂಸದನಾಗಿದ್ದ ಕುನಾಲ್​ ಘೋಶ್ ಶಾರದಾ ಗ್ರೂಪ್ ಮೀಡಿಯಾ ವಿಭಾಗದ ನೇತೃತ್ವ ವಹಿಸಿರುವುದರ ಬಗ್ಗೆ, ಇಪಕ್ಷದ ಇನ್ನೊಬ್ಬ ಸಂಸದ ಶತಾಬ್​ದಿ ರಾಯ್​ ಹೆಸರು ಶಾರಾದಾ ಗ್ರೂಪ್​ನ ಪ್ರಮೋಷನಲ್​ ದಾಖಲೆಗಳಲ್ಲಿ ಕಂಡುಬಂದಿತ್ತು. ಇವೆಲ್ಲವನ್ನೂ ಆಧರಿಸಿ ಮಮತಾ ಸರ್ಕಾರವನ್ನು ವಿರೋಧ ಪಕ್ಷಗಳು ವಿರೋಧಿಸಿದ್ದವು.

ಹಲವು ಟಿಎಂಸಿ ನಾಯಕರಿಗೆ ಆರ್ಥಿಕ ನೆರವು ನೀಡ್ತಿದ್ದ ಶಾರದಾ ಗ್ರೂಪ್​ ನಯವಾಗಿಯೇ ಜನರನ್ನು ವಂಚಿಸಿಕೊಂಡುಬಂದಿತ್ತು. ಈ ಹಗರಣದಿಂದ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ, ಝರ್​ಕಂಡ್, ತ್ರಿಪುರಾದ ಜನ ಮೋಸಕ್ಕೊಳಗಾದರು. ಹಗರಣ ಬಯಲಿಗೆ ಬರುತ್ತಿದ್ದಂತೆ ಕಂಪನಿ ಮುಖ್ಯಸ್ಥ ಸುದಿಪ್ತಾ ಸೆನ್​ ಕಾಣೆಯಾಗಿದ್ದರು. ಹಲವು ದಿನಗಳ ನಂತರ ಸುದಿಪ್ತಾ ಹಾಗೂ ಆತನ ಮಹಿಳಾ ಸಹಾಯಕಿ ಜಮ್ಮು ಕಾಶ್ಮೀರದಲ್ಲಿ ಸಿಕ್ಕಿಬಿದ್ದಿದ್ದರು. ಸುಪ್ರೀಂ ಕೋರ್ಟ್​ ಆದೇಶದ ಮೇರೆಗೆ 2014ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಅದಕ್ಕೂ ಮುನ್ನ ತನಿಖೆಯ ನೇತೃತ್ವ ವಹಿಸಿದ್ದ ರಾಜೀವ್​ ಕುಮಾರ್​ ಸಾಕ್ಷ್ಯಾಧಾರಗಳನ್ನು ನಾಶ ಮಾಡಿದ್ದಾರೆ ಅಂತ ಸಿಬಿಐ ಆರೋಪಿಸಿ ಅವರನ್ನು ಅಮಾನತುಗೊಳಿಸಲಾಗಿತ್ತು.

ತನಿಖೆಗೆ ಬರುವ ಸಿಬಿಐ ಅಧಿಕಾರಿಗಳನ್ನು ಯಾರೂ ತಡೆಯುವಂತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸುವ ಪೂರ್ವಾನುಮತಿ, ದಾಖಲೆಯೊಂದಿಗೇ ಅವರು ಬಂದಿರುತ್ತಾರೆ. ಇದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಪಶ್ಚಿಮ ಬಂಗಾಳದ ಮಮತಾ ಸರ್ಕಾರ ಮಾತ್ರ ಇದೇನು ಅರಿಯದಂತೆ ನಡೆದುಕೊಂಡಿದೆ. ಕೊಲ್ಕತ್ತಾ ಪೊಲೀಸರು ಸಿಬಿಐ ಅಧಿಕಾರಿಗಳನ್ನು ತಡೆದಿದ್ದಾರೆ. ತಡೆದಿದ್ದೂ ಅಲ್ಲದೆ ವಶಕ್ಕೆ ಪಡೆದಿದ್ದಾರೆ. ಕಮಿಷನರ್​ ಪರವಾಗಿ, ಕೇಂದ್ರ ಸರ್ಕಾರವನ್ನು ವಿರೋಧಿಸಿ ರಾಜ್ಯದ ಸಿಎಂ ಸ್ವತಃ ಆಹೋರಾತ್ರಿ ಧರಣಿ ಕುಳಿತಿದ್ದಾರೆ. ಮಮತಾ ಬ್ಯಾನರ್ಜಿ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಸಿಬಿಐಯನ್ನು ದುರ್ಬಳಕೆ ಮಾಡ್ತಿದೆ ಅಂತ ಆರೋಪಿಸಲಾಗ್ತಿದೆ. ಕೇಂದ್ರ ಸರ್ಕಾರ ಮಹಾಘಟಬಂಧನ್​ ಎದುರಾಗಿ ನಿಲ್ಲಲು ಸಾಧ್ಯವಾಗದೆ ಈ ರೀತಿ ಸಿಬಿಐಯನ್ನು ಬಳಸಿಕೊಳ್ತಿದೆ ಅಂತ ಮಮತಾ ಆರೋಪಿಸಿದ್ದಾರೆ.

ಸದ್ಯ ಸಿಬಿಐ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ರಾಜೀವ್ ಕುಮಾರ್​ನ್ನು ಬಂಧಿಸಬಾರದು. ಆದರೆ ರಾಜೀವ್​ ಕುಮಾರ್​ ಶಿಲಾಂಗ್​ನಲ್ಲಿ ಸಿಬಿಐ ಮುಂದೆ ಹಾಜರಾಗಬೇಕು. ಹಾಗೇ ಚಿಟ್​ಫಂಡ್ ಹಗರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷ್ಯಾಧಾರಗಳನ್ನು ಒಪ್ಪಿಸಬೇಕು. ತನಿಖೆಗೆ ಸಿಬಿಐ ಜೊತೆಗೆ ಸಹಕರಿಸಬೇಕು ಅಂತ ನಿರ್ದೇಶಿಸಿದೆ. ಮೂರು ದಿನಗಳಿಂದ ಧರಣಿ ಕುಳಿತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್​ ತೀರ್ಪುನ್ನು ಸ್ವಾಗತಿಸಿದ್ದು, ‘ಇದು ಪ್ರಜಾಪ್ರಭುತ್ವದ ಗೆಲುವು’ ಅಂತ ಹೇಳಿದ್ದಾರೆ.

ವಿಚಾರಣೆ ನಡೆಸದಂತೆ ತಮ್ಮನ್ನು ಕೊಲ್ಕತ್ತಾ ಪೊಲೀಸ್​ ವಶಕ್ಕೆ ಪಡೆದ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸಿಬಿಐ” ವಿಶೇಷ ತನಿಖಾ ತಂಡವು ಪ್ರಕರಣದ ಎಲ್ಲ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ನೀಡಿಲ್ಲ. ಹಸ್ತಾಂತರಿಸಲಾಗಿರುವ ದಾಖಲೆಗಳಲ್ಲಿ ಅಪೂರ್ಣ ಮಾಹಿತಿ ಇದೆ ಅಂತ ಹೇಳಿತ್ತು. ಫೆಬ್ರವರಿ 20ರಂದು ಮೇಘಾಲಯದ ಶಿಲಾಂಗ್​ನಲ್ಲಿ ರಾಜೀವ್ ಕುಮಾರ್ ಸಿಬಿಐ ಮುಂದೆ ಹಾಜರಾಗಬೇಕಿದೆ. ವಿಚಾರಣೆಗೆ ಸಹಕರಿಸಬೇಕು ಅಂತ ಕೋರ್ಟ್​ ನೀಡಿರುವ ತೀರ್ಪು ನೈತಿಕತೆಗೆ ಸಿಕ್ಕಿದ ಗೆಲುವು ಅಂತ ಕೇಂದ್ರ ಹೇಳಿದೆ.

ಜಗಳಗಳೇನೇ ಇರಲಿ ಸಿಬಿಐ ತನಿಖೆಗೆ ಬಂದಾಗ ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿರುವುದು ಕರ್ತವ್ಯ. ಪೊಲೀಸ್​ ಕಮಿಷನರ್ ರಾಜೀವ್​ ಕುಮಾರ್​ ನೋಟೀಸ್ ನೋಡಿ ತಾವೇ ತನಿಖೆಗೆ ಹಾಜರಾಗಬೇಕಿತ್ತು. ಕನಿಷ್ಠ ತನಿಖೆಗೆ ಬಂದ ಅಧಿಕಾರಿಗಳೊಂದಿಗೆ ಸಹಕರಿಸಬೇಕಿತ್ತು. ಇನ್ನು ಪೊಲೀಸರು ಸಿಬಿಐ ಸಾಥ್​ ನೀಡಬೇಕಾಗಿದ್ದವರು, ಅಧಿಕಾರಿಗಳನ್ನೇ ವಶಕ್ಕೆ ಪಡೆದಿದ್ದಾರೆ. ಸಿಎಂ ಸ್ಥಾನದಲ್ಲಿರುವ ಮಮತಾ ಬ್ಯಾನರ್ಜಿ ಆ ಗೊಂದಲದ ಪರಿಸ್ಥಿತಿಯನ್ನು ನಿಭಾಯಿಸಬೇಕಿತ್ತು. ಆದರೆ ಅವರು ಸ್ವತಃ ಧರಣಿ ಆರಂಭಿಸಿ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಸಂಪೂರ್ಣ ಘಟನೆಗೆ ರಾಜಕೀಯ ಬಣ್ಣ ಹಚ್ಚುವ ಪ್ರಯತ್ನ ಮಾಡ್ತಿದ್ದಾರೆ. ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಮಾಡುತ್ತಿರುವುದು ಹಾಗಿರಲಿ. ಆದರೆ ಪಕ್ಷಗಳ ಒಳಜಗಳದ ನಡುವೆ ಸಿಬಿಐ ಬಡವಾಗಿದ್ದು ಮಾತ್ರ ಅನ್ಯಾಯ.

-ದಿವ್ಯಾ ಪೆರ್ಲ

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments