ಉಕ್ರೇನ್ ಮೇಲೆ ಯುದ್ಧ ಸಾರುವುದರ ಜತೆಗೆ ಅನೇಕ ಯುದ್ಧಾಪರಾಧಗಳನ್ನು ಮಾಡಿರುವ ರಷ್ಯಾವನ್ನು ಉಗ್ರವಾದಕ್ಕೆ ಪ್ರಾಯೋಜಕತ್ವ ನೀಡುವ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟಬೇಕು ಎಂದು ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕವನ್ನು ಆಗ್ರಹಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ ಯುದ್ಧ 52ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಶನಿವಾರದಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ರವರಿಗೆ ಕರೆ ಮಾಡಿದ ಝೆಲೆನ್ಸ್ಕಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ರಷ್ಯಾಕ್ಕೆ ಉಗ್ರವಾದ ಪ್ರಾಯೋಜಕತ್ವ ನೀಡುವ ದೇಶವೆಂಬ ಹಣೆಪಟ್ಟಿ ಕಟ್ಟಬೇಕು.
ವಿಶ್ವಮಟ್ಟದಲ್ಲಿ ರಷ್ಯಾವನ್ನು ಏಕಾಂಗಿಯಾಗಿಸಲು ಅದು ನೆರವಾಗಬಹುದು ಎಂದು ಆಗ್ರಹಿಸಿದ್ದಾರೆ.ಇದಲ್ಲದೆ, ಉಕ್ರೇನ್ಗೆ ಅಗತ್ಯವಿರುವ ಮತ್ತಷ್ಟು ಸೇನಾ ಸವಲತ್ತುಗಳ ಬಗ್ಗೆ ಇದೇ ವೇಳೆ ಚರ್ಚೆ ನಡೆಸಲಾಯಿತು. ಝೆಲೆನ್ಸ್ಕಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಬೈಡನ್, ಮೊದಲು ಶಸ್ತ್ರಾಸ್ತ್ರ ಪೂರೈಕೆಗೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದು, ರಷ್ಯಾಕ್ಕೆ ಹಣೆಪಟ್ಟಿ ಕಟ್ಟುವ ಬಗ್ಗೆ ಮುಂದೆ ನಿರ್ಧರಿಸುವುದಾಗಿ ಹೇಳಿದ್ದಾರೆ