Wednesday, May 25, 2022
Powertv Logo
Homeತಂತ್ರಜ್ಞಾನಕೋವ್ಯಾಕ್ಸಿನ್​ಗೆ ಮಾನ್ಯತೆ ಕೊಡ್ತು ಬ್ರಿಟನ್​ ದೇಶ

ಕೋವ್ಯಾಕ್ಸಿನ್​ಗೆ ಮಾನ್ಯತೆ ಕೊಡ್ತು ಬ್ರಿಟನ್​ ದೇಶ

ಭಾರತ : ಜಗತ್ತಿನಾದ್ಯಂತ ಕೊರೋನಾ ಅಲೆ ಕಡಿಮೆ ಆಯ್ತು ಅಂತ ಎಲ್ಲರೂ ನಿಟ್ಟುಸಿರು ಬಿಡುತ್ತಿರೋ ಹೊತ್ತಲ್ಲೇ ಕೊರೋನಾದ ಆತಂಕ ಹೆಚ್ಚಾಗಿದೆ. ಈ ಮಧ್ಯೆ ಹಲವು ವಿಜ್ಞಾನಿಗಳು ಭಾರತದ ಕೊವ್ಯಾಕ್ಸಿನ್​ ಹಾಗು ಕೊವಿಶೀಲ್ಡ್​​ ಪರಿಣಾಮಕಾರಿ ಅನ್ನೋದನ್ನ ಹೇಳಿದ್ದಾರೆ. ಇದೇ ವಿಚಾರಕ್ಕೆ ಪೂರಕವೆಂಬಂತೆ ಭಾರತದ ಕೊವ್ಯಾಕ್ಸಿನ್​ಗೆ ರಾಷ್ಟ್ರವೊಂದು ಮಾನ್ಯತೆ ನೀಡಿದ್ದು, ಆ ಮೂಲಕ ಭಾರತದ ಲಸಿಕೆಗೆ ಮತ್ತಷ್ಟು ಬಲ ಸಿಕ್ಕಿದೆ. ಹಾಗಾದ್ರೆ ಲಸಿಕೆಗೆ ಮಾನ್ಯತೆ ನೀಡಿದ ಆ ದೇಶ ಯಾವುದು?

ಕೊರೋನಾ ಈ ಹೆಸ್ರು ಕೇಳಿದ್ರೆ ಸಾಕು, ಒಂದು ಕ್ಷಣ ಜಗತ್ತಿನ ನಾನಾ ರಾಷ್ಟ್ರಗಳು, ಜನಸಾಮಾನ್ಯರು ಹೆದರಿಕೊಳ್ತಾರೆ. ಅದೆಷ್ಟೋ ಜನರಲ್ಲಿ ತಮ್ಮ ಸುಂದರ ಬದುಕನ್ನ, ತಮ್ಮವರನ್ನ ಕಳೆದುಕೊಂಡು ಅನಾಥ ಪ್ರಜ್ಞೆಯನ್ನ ಕಾಡಿಸಿತ್ತು ಈ ಮಹಾಮಾರಿ ಕೊರೋನಾ ವೈರಸ್. ಇನ್ನು ಈ ವೈರಸ್​ಗೆ ಇದುವರೆಗೂ ಯಾವುದೇ ಮೆಡಿಸಿನ್ ಪತ್ತೆಯಾಗದೆ ಇದ್ರೂ ಈ ವೈರಸ್ ನಿಗ್ರಹಿಸೋದಕ್ಕೆ ಹಲವು ಲಸಿಕೆಗಳನ್ನ ಭಾರತ ಸೇರಿದಂತೆ ವಿವಿಧ ದೇಶಗಳು ನೀಡೋದಕ್ಕೆ ಶುರು ಮಾಡಿವೆ. ಈ ಲಸಿಕೆಗಳಿಂದಾಗಿ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಇಳಿಮುಖವಾಗೋದು ಕಂಡು ಬಂತು. ಇದೀಗ ಮತ್ತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೊರೋನಾ ಆರ್ಭಟದ ಮಧ್ಯೆ ಬ್ರಿಟನ್​ ಸರ್ಕಾರ ಭಾರತದ ಕೊವ್ಯಾಕ್ಸಿನ್​ ಲಸಿಕೆಗೆ ಮಾನ್ಯತೆ ನೀಡಿದೆ. ಈ ಮೂಲಕ ಕೊವ್ಯಾಕ್ಸಿನ್​ ಕೊರೋನಾ ವೈರಸ್​ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಅನ್ನೋದನ್ನ ಬ್ರಿಟನ್​ ಒಪ್ಪಿಕೊಂಡಿದೆ.

ಭಾರತದಲ್ಲಿ ಕೊವಿಡ್ ಸೋಂಕಿನ ವಿರುದ್ಧ ಹೋರಾಟಕ್ಕೆ ಅಸ್ತ್ರವನ್ನಾಗಿ ಬಳಸಲಾಗ್ತಿರುವ ಹಾಗು ದೇಶೀಯವಾಗಿ ತಯಾರಿಸಿರುವ ಕೋವ್ಯಾಕ್ಸಿನ್ ಲಸಿಕೆಗೆ ಬ್ರಿಟನ್ ಸರ್ಕಾರ ಮನ್ನಣೆ ನೀಡಿದೆ. ಜೊತೆಗೆ ಕೊವಿಡ್ ನಿರೋಧಕ ಲಸಿಕೆಗಳ ಪಟ್ಟಿಯಲ್ಲಿ ಸೋಮವಾರದಿಂದ ಕೋವ್ಯಾಕ್ಸಿನ್​ಗೆ ಸ್ಥಾನ ನೀಡಿದೆ. ಬ್ರಿಟನ್​ ಸರ್ಕಾರದ ಈ ನಡೆಯಿಂದ ಪೂರ್ಣ ಪ್ರಮಾಣದಲ್ಲಿ ಕೋವಿಡ್ ವಿರುದ್ಧ ಲಸಿಕೆ ಪಡೆದ ಭಾರತೀಯರು ಬ್ರಿಟನ್​ಗೆ ಪ್ರಯಾಣ ಮಾಡಲು ಇದ್ದ ಅಡೆತಡೆಗಳು ದೂರ ಆಗಿದೆ. ಭಾರತದಿಂದ ನಿರ್ಗಮನಕ್ಕೂ ಮುನ್ನ ಪಿಸಿಆರ್ ಪರೀಕ್ಷೆ ಮತ್ತು ಪ್ರಯಾಣಿಕರ ಲೊಕೇಷನ್ ಅರ್ಜಿಗಳಲ್ಲಿ ತಿಳಿಸಿದ ಸ್ಥಳ ತಲುಪಿದ ಬಳಿಕ ಅಲ್ಲಿ ಸ್ವಯಂ-ಐಸೋಲೇಷನ್ ಆಗಬೇಕಾದ ಅನಿವಾರ್ಯತೆ ಇತ್ತು. ಆದ್ರೆ ಇನ್ನು ಮುಂದೆ ಕೋವ್ಯಾಕ್ಸಿನ್ ಪಡೆದ ಜನರು ಐಸೋಲೇಷನ್​ ಆಗ ಬೇಕೆಂದಿಲ್ಲ ಅಂತ ಬ್ರಿಟನ್​ ಸರ್ಕಾರ ಹೇಳಿದ್ದು, ಕೆಲ ನಿಯಮಗಳನ್ನ ಸಡಿಲಗೊಳಿಸಿದೆ.

ಕಳೆದ ಕೆಲ ದಿನಗಳ ಹಿಂದಷ್ಟೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿದ್ದ ಭಾರತದ ಲಸಿಕೆ ಈಗ ಬ್ರಿಟನ್​ ಸರ್ಕಾರದ ಮಾನ್ಯತೆಯನ್ನ ಪಡೆದಿದೆ. ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರಲಿಲ್ಲ ಅನ್ನೋ ಕಾರಣಕ್ಕೆ ಭಾರತದ ಲಸಿಕೆಯನ್ನ ಹಲವು ದೇಶಗಳಿಗೆ ರಪ್ತು ಮಾಡೋದಕ್ಕೆ ಸಾಧ್ಯವಾಗಿರ್ಲಿಲ್ಲ. ಭಾರತದ ಪ್ರಯಾಣಿಕರು ಬೇರೆ ಯಾವುದೇ ದೇಶಗಳಿಗೆ ಪ್ರಯಾಣ ಬೆಳೆಸೋ ಹಾಗೆ ಇರ್ಲಿಲ್ಲ. ಇದೇ ಕಾರಣಕ್ಕೆ ಭಾರತ ಲಸಿಕೆ ರಪ್ತಿನ ವಿಚಾರದಲ್ಲಿ ಹಾಗು ಪ್ರಯಾಣಿಕರ ವಿಚಾರದಲ್ಲಿ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿತ್ತು. ಆದ್ರೆ ಈಗ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯ ನಂತರ ಬ್ರಿಟನ್​ ಮಾನ್ಯತೆ ನೀಡಿರೋದು ಜಾಗತಿಕವಾಗಿ ಭಾರತದ ಲಸಿಕೆಗೆ ಮಾನ್ಯತೆ ದೊರಕಿದಂತಾಗಿದೆ.

ಇನ್ನು ವಿಶ್ವಸಂಸ್ಥೆಯ EUL ಪಟ್ಟಿಯಲ್ಲಿ ಲಸಿಕೆಯನ್ನ ಸೇರಿಸಬೇಕಾದಲ್ಲಿ ಸಂಬಂಧಪಟ್ಟ ಲಸಿಕೆಯ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಶೀಲತೆಯಂಥ ಮಾನದಂಡಗಳ ಆಧಾರದ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಪರೀಕ್ಷೆ ಮಾಡ್ತಾರೆ. ಈ ಹಿಂದೆ ಭಾರತದ ಲಸಿಕೆ ಪಡೆದ ಪ್ರಯಾಣಿಕರಿಗೆ ಮನ್ನಣೆ ನೀಡೋದಕ್ಕೂ ಮೊದ್ಲು ಅಮೆರಿಕ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್ ಹಾಗೂ ಐಸ್ಲೆಂಡ್​ಗಳಲ್ಲಿ ಬೇರೆ ದೇಶಗಳ ಲಸಿಕೆ ಪಡೆದವರಿಗೆ ಮನ್ನಣೆ ನೀಡಲಾಗ್ತಿತ್ತು, ಆದ್ರೆ ಈಗ ಬ್ರಿಟನ್​ನ ನಿರ್ಧಾರದಿಂದ ಮತ್ತೆ ಭಾರತದ ಪ್ರವಾಸಿಗರಿಗೆ ಇತರೆ ದೇಶಗಳ ಪ್ರಯಾಣಕ್ಕೂ ಅವಕಾಶ ದೊರೆಯುವ ಸಾಧ್ಯತೆಯನ್ನ ತಳ್ಳಿ ಹಾಕೋ ಹಾಗಿಲ್ಲ.. ಇದೇ ವೇಳೆ, 18 ವರ್ಷಕ್ಕಿಂತ ಕೆಳಗಿನ ಪ್ರಯಾಣಿಕರಿಗೂ ಸಹ ಪ್ರಯಾಣದ ನಿಯಮಗಳನ್ನು ಸರಳೀಕರಿಸುತ್ತಿರುವುದಾಗಿ ಬ್ರಿಟನ್ ಸರ್ಕಾರ ತಿಳಿಸಿದೆ. ಕೆಂಪು-ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುತ್ತಿರುವ ಮಕ್ಕಳನ್ನು ಸಂಪೂರ್ಣ ಪ್ರಮಾಣದ ಲಸಿಕೆ ಪಡೆದವರ ಪಟ್ಟಿಗೆ ಸೇರಿಸಲಾಗುತ್ತೆ ಅಂತ ಬ್ರಿಟನ್ ಸರ್ಕಾರ ತಿಳಿಸಿದೆ. ಇದರರ್ಥ ಈ ವಯೋಮಿತಿಯ ಮಂದಿಗೆ ಆಗಮನದ ಬಳಿಕ ಸೆಲ್ಫ್​​-ಐಸೋಲೇಷನ್ ಅಗತ್ಯ ಇರೋದಿಲ್ಲ. ಜೊತೆಗೆ ಆಗಮನದ ನಂತರ ಲ್ಯಾಟರಲ್ ಫ್ಲೋ ಪರೀಕ್ಷೆ ಮತ್ತು ಪಿಸಿಆರ್ ಖಾತ್ರಿಯ ಉಚಿತ ಪರೀಕ್ಷೆಯಲ್ಲಿ ಭಾಗಿಯಾಗಬೇಕಾಗುತ್ತೆ ಅನ್ನೋದನ್ನ ತಿಳಿಸಿದೆ.

ಒಟ್ಟಾರೆಯಾಗಿ ಭಾರತದ ಲಸಿಕೆಗೆ ಬ್ರಿಟನ್​ ಮಾನ್ಯತೆ ನೀಡಿರೋದು ಭಾರತದ ಪ್ರಯಾಣಿಕರಿಗೆ ನಿಟ್ಟುಸಿರು ಬಿಟ್ಟ ಹಾಗೆ ಆಗಿದೆ. ಇದ್ರ ಜೊತೆಗೆ ಭಾರತ ಇತರ ದೇಶಗಳಿಗೆ ಲಸಿಕೆ ಪೂರೈಸೋದಕ್ಕೆ ಆನೆ ಬಲ ಬಂದಂತಾಗಿರೋದು ಸುಳ್ಳಲ್ಲ.. ಹಾಗಾಗಿ ಮುಂದಿನ ದಿನಗಳಲ್ಲಿ ಭಾರತದ ಲಸಿಕೆಗೆ ಯಾವ ರೀತಿಯಾದ ಬೇಡಿಕೆ ಇರಲಿದೆ ಅನ್ನೋದು ಕುತೂಹಲ ಕೆರಳಿಸಿದೆ.

17 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments