Tuesday, January 18, 2022
Powertv Logo
Homeರಾಜ್ಯನವರಸಪುರ ಉತ್ಸವ ಮಾಡುವಂತೆ ಜಿಲ್ಲೆಯ ಜನತೆಯ ಒತ್ತಾಯ

ನವರಸಪುರ ಉತ್ಸವ ಮಾಡುವಂತೆ ಜಿಲ್ಲೆಯ ಜನತೆಯ ಒತ್ತಾಯ

ವಿಜಯಪುರ : ನಾಡಿನ ಭವ್ಯ ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ಬಾರಿಯೂ ಸಹ ಆಯಾ ಜಿಲ್ಲಾ ಮಟ್ಟಗಳಲ್ಲಿ ಉತ್ಸವಗಳನ್ನು ಮಾಡಲಾಗುತ್ತದೆ. ಅದರಂತೆ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲೂ ಸಹ ನವರಸಪುರ ಉತ್ಸವ ಆಚರಿಸಲಾಗುತ್ತಿತ್ತು. ಆದ್ರೆ ಇತ್ತೀಚಿನ ಐದು ವರ್ಷಗಳಲ್ಲಿ ಪ್ರತಿ ವರ್ಷವೂ ಒಂದಿಲ್ಲೊಂದು ನೆಪವೊಡ್ಡಿ ನವರಸಪುರ ಉತ್ಸವವನ್ನೇ ಆಚರಿಸುವುದನ್ನು ಕೈ ಬಿಡಲಾಗಿದೆ. ಇದರಿಂದ ಜಿಲ್ಲೆಯ ಜನರು ನವರಸಪುರ ಉತ್ಸವ ಯಾವಾಗ ಎನ್ನುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ಆಗಿಯೇ ಇಲ್ಲ ನವರಸಪುರ ಉತ್ಸವ, ಇಷ್ಟು ದಿನ ಬರಗಾಲ, ಪ್ರವಾಹದ ನೆಪ, ಹೌದು ಮೊದಲಿನಿಂದಲೂ ಆಚರಿಸಿಕೊಂಡು ಬರುತ್ತಿದ್ದ ಪ್ರತಿಷ್ಠಿತ ಉತ್ಸವವಾದ ನವರಸಪುರ ಉತ್ಸವವನ್ನು ಕಳೆದ ಐದು ವರ್ಷಗಳಿಂದ ಕೈ ಬಿಡಲಾಗಿದೆ. ಕಳೆದ ಮೂರು ವರ್ಷಗಳು ಬರಗಾಲವಿದೆ, ಬಳಿಕ ಕೋವಿಡ್ ಬಂತು ಎಂದು ನೆಪವೊಡ್ಡಿದ್ರೆ ಈ ಬಾರಿ ಮತ್ತೆ ಉತ್ಸವ ಆಚರಿಸುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿ ವರ್ಷವೂ ಸಹ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಉತ್ಸವಕ್ಕೆ ಬರುವ ಹಣ ಬಂದು ಡಿಸಿ ಖಾತೆಯಲ್ಲಿ ಕೊಳೆಯುತ್ತ ಬಿದ್ದಿದೆ. ಆದ್ರೂ ಸಹ ಯಾರಿಗೂ ಉತ್ಸವ ಆಚರಿಸುವ ಆಸಕ್ತಿಯೇ ಇಲ್ಲ. ಇದರಿಂದ ಆಕ್ರೋಶಗೊಂಡ ವಿಜಯಪುರದ ಜನತೆ ನವರಸಪುರ ಉತ್ಸವ ಯಾವಾಗ ಮಾಡ್ತಿರಿ ಸ್ವಾಮಿ ಎಂದು ಕೇಳುತ್ತಿದ್ದಾರೆ.

ನವರಸಪುರ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ, ರಾಜ್ಯ ಹಾಗೂ ದೇಶಿ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಸಾವಿರಾರು ಕಲಾವಿದರ ಕುಟುಂಬಗಳು ಬದುಕಲು ಸಾಧ್ಯವಾಗುತ್ತಿತ್ತು. ಜೊತೆಗೆ ಗುಮ್ಮಟ ನಗರಿಯ ಜನರು ವಿಜಯಪುರದಲ್ಲೇ ದೇಶದ ನಾನಾ ಭಾಗಗಳಲ್ಲಿನ ವಿಭಿನ್ನ ಆಚರಣೆ, ಸಂಸ್ಕ್ರತಿ, ಸಂಭ್ರಮ, ನಾನಾ ರೀತಿಯ ಜನರ ಬದುಕು, ಬವಣೆ ಹಾಗೂ ಜೀವನ ಶೈಲಿಗಳನ್ನು ವೇದಿಕೆ ಮೇಲೆ ನೋಡಲು ಸಿಗುತ್ತಿತ್ತು. ಸಾಂಸ್ಕ್ರತಿಕ ಕಲೆ, ವೈಭವಗಳು ವೇದಿಕೆಯ ಮೇಲೆ ಅನಾವರಣಗೊಳ್ಳುತ್ತಿದ್ದವು. ಹೀಗಿದ್ದು ಸಹ ಒಂದಿಲ್ಲೊಂದು ಕಾರಣಗಳ ನೆಪವೊಡ್ಡಿ ಕಳೆದ ಐದು ವರ್ಷಗಳಿಂದ ವಿವಿಧ ಕಾರಣವೊಡ್ಡಿ ಭವ್ಯ ಉತ್ಸವಕ್ಕೆ ಫುಲ್ ಸ್ಟಾಪ್ ಇಡಲಾಗಿದೆ. ಇದರಿಂದಾಗಿ ಪ್ರಗತಿ ಪರರ ಸಂಘಟನೆಯವರು, ಕಲಾವಿದರು ಆಕ್ರೋಶ ಹೊರಹಾಕುವಂತಾಗಿದೆ.

ಈ ಮೊದಲು 2015 ಫೆಬ್ರುವರಿಯಲ್ಲಿ ವಿಜಯಪುರದ ಗೋಳಗುಮ್ಮಟ ಆವರಣ, ಬಾರಾಕಮಾನ ಆವರಣ, ತೊರವಿ ಭಾಗ, ಹಾಗೂ ಲಲಿತ್ ಮಹಲ್ ಗಾರ್ಡನ್ ಆವರಣದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ನಿತ್ಯ ಸಂಜೆ ವಿಜೃಂಭಣೆಯ ಉತ್ಸವ ಆಚರಿಸಲಾಗಿತ್ತು. ಇದೀಗ ಅದೇ ಕೊನೆ ಉತ್ಸವ ಎಂಬಂತಾಗಿದೆ. ಇಷ್ಟುದಿನ ಬರಗಾಲ ಆವರಿಸಿತ್ತು, ಕೊರೋನಾ ಹಾವಳಿಯಿಂದ ಜನರು ಸಂಕಷ್ಟದಲ್ಲಿದ್ದರು, ಹಾಗಾಗಿ ಉತ್ಸವ ಬೇಡ ಎಂದು ಕೈ ಬಿಡಲಾಗಿತ್ತು. ಒಟ್ಟಿನಲ್ಲಿ ಐದು ವರ್ಷಗಳಿಂದ ಉತ್ಸವ ನೋಡಬೇಕು, ಸಾಂಸ್ಕ್ರತಿಕ ವೈಭವವನ್ನು ಕಣ್ತುಂಬಿಕೊಳ್ಳಬೇಕು ಎಂದು ಜನತೆ ಕಾಯುತ್ತಿದ್ದಾರೆ. ಈಗಿನ ಬಿಜೆಪಿ ಸರಕಾರ ಮತ್ತು ಜಿಲ್ಲಾಡಳಿತ ಈ ಭಾರಿಯಾದರೂ ನವರಸಪುರ ಉತ್ಸವ ಆಚರಣೆ ಮಾಡುತ್ತಾರೋ ಇಲ್ಲವೇ ಮತ್ತೇ ಕುಂಟು‌ ನೆಪ ಹೇಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

5 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments