ಚಿಕ್ಕಬಳ್ಳಾಪುರ: ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದ ಗುಂಟಿಪಲ್ಲಿ ಶ್ರೀರಾಮರೆಡ್ಡಿ ಅಂತ್ಯಕ್ರಿಯೆಯನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಸ್ವ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬೈರಾಬಂಡ ಗ್ರಾಮದಲ್ಲಿ ನೆರವೇರಿಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಕ್ಷೇತ್ರದ, ಜಿಲ್ಲೆಯ, ರಾಜ್ಯದ ಜ್ವಲಂತ ವಿಷಯಗಳಿಗೆ ಪರಿಹಾರ ಒದಗಿಸಿದ್ದ ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಹಿರಿಯ ಕಮ್ಯೂನಿಸ್ಟ್ ನಾಯಕರಲ್ಲಿ ಒಬ್ಬರಾಗಿ ರಾಜ್ಯ ಮತ್ತು ದೇಶದಲ್ಲಿ ಕಮ್ಯೂನಿಸ್ಟ್ ಚಳವಳಿಯ ಭಾಗವಾಗಿದ್ದರು. 25 ವರ್ಷಗಳ ಹಿಂದೆಯೇ ಅವಿಭಜಿತ ಕೋಲಾರ ಜಿಲ್ಲೆಯ ಜ್ವಲಂತ ನೀರಾವರಿ ಸಮಸ್ಯೆಯ ಪರಿಹಾರಕ್ಕೆ ‘ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ’ ಸಂಸ್ಥಾಪಕ ಅಧ್ಯಕ್ಷರಾಗಿ, 2002 ರಲ್ಲಿ 20,000 ಜನರ ‘ವಿಧಾನಸೌಧ ಚಲೋ’ ಕಾಲ್ನಡಿಗೆ ಜಾಥಾ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿದೆ.
ಜಿ.ವಿ.ಶ್ರೀರಾಮರೆಡ್ಡಿಅಧಿವೇಶನದಲ್ಲಿ ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ರಾಜ್ಯದ ಬಗೆಗಿನ ಮಾಹಿತಿಗೆ ಇಡೀ ಸದನವೇ ತಲೆದೂಗುತ್ತಿತ್ತು. ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಅವರು ತನ್ನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಸಾಂಸ್ಕೃತಿಕ ರಾಜಕಾರಣವನ್ನು ರಾಜ್ಯದೆಲ್ಲೆಡೆ ಚುರುಕುಗೊಳಿಸಿದ್ದರು. ಶ್ರೀರಾಮ ರೆಡ್ಡಿಯವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಪಕ್ಷ ನಾಯಕ ಸಿದ್ದರಾಮಯ್ಯರ ಆಪ್ತರಾಗಿದ್ದರು.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜನಪರ ಹೋರಾಟಗಳಲ್ಲಿ ಭಾಗಿಯಾಗಿ ಸದಾ ಶೋಷಿತರ ಪರ ಕಾಳಜಿ ತೋರುತ್ತಿದ್ದ ಕೆಂಪುಕಿರಣ, ಬಡವರ ಪರ ಧ್ವನಿಯೊಂದು ಕಮರಿ ಹೋಗಿದ್ದು ವಿಪರ್ಯಾಸವೇ ಸರಿ.