ಕೋಲಾರ : ಕ್ಲಾಕ್ ಟವರ್ ವಿವಾದಕ್ಕೆ ಅಂತ್ಯ ಆಡಲು ಮುಂದಾಗುತ್ತಿರುವ ಜಿಲ್ಲಾಡಳಿತ. ಎಲ್ಲೆಲ್ಲೂ ಪೊಲೀಸರ ಸರ್ಪಗಾವಲು. ಅಂದಹಾಗೆ ಇವೆಲ್ಲಾ ದೃಶ್ಯಗಳು ಇದೇ ಮಾರ್ಚ್ 19ರಂದು ಕೋಲಾರ ನಗರದ ಕ್ಲಾಕ್ ಟವರ್ ಬಳಿ ಕಂಡು ಬಂದಿದ್ದು, ಬೃಹತ್ ಗಡಿಯಾರದ ಟವರ್ ಸ್ಮಾರಕವನ್ನ ಹಾಜಿ ಮುಸ್ತಫಾ ಸೇಟ್ ಎಂಬುವವರು ನಿರ್ಮಿಸಿದ್ದರು. ಈ ಸ್ಮಾರಕವು ನಗರಸಭೆಯ ಸುಪರ್ದಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಆದ್ರೆ, ಇಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಸಂಸದ ಎಸ್.ಮುನಿಸ್ವಾಮಿ ಒತ್ತಾಸೆಯು ಅನಗತ್ಯ ವಿವಾದಕ್ಕೆ ಕಾರಣವಾಗಿದೆ.
ಕ್ಲಾಕ್ ಟವರ್ ವಿವಾದ ಎಲ್ಲಿ ಕೋಮು ಗಲಭೆ ಸೃಷ್ಟಿಸುತ್ತೋ ಅಂತ ಎಚ್ಚೆತ್ತ ಜಿಲ್ಲಾಡಳಿತ, ಮುಸ್ಲಿಂ ಸಮುದಾಯದ ಅಂಜುಮಾನ್ ಮುಖಂಡರ ಸಮ್ಮುಖದಲ್ಲಿ ತ್ರಿವರ್ಣ ಧ್ವಜ ಹಾರಿಸಿತ್ತು. ವಿವಾದಕ್ಕೆ ಅಂತ್ಯ ಹಾಡಿ, ಇನ್ನು ಶಾಂತವಾಗಿರುತ್ತೇ ಅಂತ ತಿಳ್ಕೊಂಡಿದ್ರು. ಆದ್ರೆ, ಕೆಸರು ಎರಚುವ ಕೆಲಸ ಇನ್ನೂ ನಿಂತಿಲ್ಲ. ಇತ್ತೀಚೆಗೆ ಅಂಬೇಡ್ಕರ್ ಜಯಂತಿಯಂದು ಸ್ಥಳೀಯ ಅಂಜುಮನ್ ಇಸ್ಲಾಂ ಸಂಸ್ಥೆ ಮುಖ್ಯಸ್ಥ ಜಮೀರ್ ಅಹ್ಮದ್, ಸಂಸದ ಮುನಿಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿ, ಮುನಿಸ್ವಾಮಿ ಕೋಲಾರದ ಸಂಸದರಾದ ಮೇಲೆ ಈ ರೀತಿ ಕೋಮುಗಲಭೆ ಪ್ರಯತ್ನಗಳು ನಡೆಯುತ್ತಿವೆ. 79 ವರ್ಷಗಳಿಂದ ಇಲ್ಲದಿದ್ದ ವಿವಾದ ಈಗ ಹುಟ್ಟಿಹಾಕಿದ್ದಾರೆ. ಕ್ಲಾಕ್ ಟವರ್ ಏನು ಅವನ ಅಪ್ಪಂದ ಅಂತ ಜಮೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1938ರಲ್ಲಿ ಕ್ಲಾಕ್ ಟವರ್ ನಿರ್ಮಿಸಲಾಯ್ತು. ಕೋಲಾರದ ಸಂಸದ ಮುನಿಸ್ವಾಮಿ, ಇಲ್ಲಿ ಧ್ವಜ ಹಾರಿಸಲಿಲ್ಲಾಂದ್ರೆ ಕ್ಲಾಕ್ ಟವರ್ ಮುಂಭಾಗ ಏಕಾಂಗಿಯಾಗಿ ಕುಳಿತು ಮೌನ ಪ್ರತಿಭಟನೆ ಮಾಡ್ತೇನೆ ಅಂತ ಧಮಕಿ ಹಾಕಿದ್ರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತವು ತ್ರಿವರ್ಣ ಧ್ವಜ ಹಾರಿಸಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಜಮೀರ್ ಅಹ್ಮದ್ಗೆ ತಿರುಗೇಟು ನೀಡಿರುವ ಸಂಸದ ಮುನಿಸ್ವಾಮಿ, ಕ್ಲಾಕ್ ಟವರ್ ಜಾಗ ಮಹಾರಾಜರದ್ದು, ಹಿರಿಯರು ಅಂತ ನಿಮಗೆ ಮರ್ಯಾದೆ ಕೊಟ್ಟಿದ್ದೇನೆ ಅದನ್ನು ಉಳಿಸಿಕೊಳ್ಳಿ, ಪಾಕಿಸ್ತಾನ ಏಜೆಂಟ್ ರೀತಿ ನಡೆದುಕೊಳ್ಳಬೇಡಿ, ನಿಮ್ಮ ಯೋಗ್ಯತೆ ಏನು ಅಂತ ಗೊತ್ತಿದೆ. ಇಲ್ಲಾಂದ್ರೆ ಕಾನೂನು ರೀತಿಯ ಕ್ರಮ ಎದುರಿಸಬೇಕಾಗುತ್ತೆ ಅಂತ ಗುಡುಗಿದ್ದಾರೆ.
ಒಟ್ಟಿನಲ್ಲಿ, ಅದೇನೆ ಇರಲಿ ಕೋಲಾರದಲ್ಲಿ ಹಿಂದೂ – ಮುಸ್ಲಿಮರು ಸ್ನೇಹಿತರಂತೆ ಜೀವಿಸುತ್ತಿದ್ದಾರೆ. ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನ ರಾಜಕಾರಣಿಗಳು ಮಾಡುತ್ತಿದ್ದು, ಕೋಲಾರದ ಶಾಂತಿ ಸುವ್ಯವಸ್ಥೆಯನ್ನ ಹಾಳು ಮಾಡಲು ಮುಂದಾಗಿದ್ದಾರೆ.