ರಾಮನಗರ: ಮನೆಯಲ್ಲಿದ್ದ ಚಿನ್ನವನ್ನೆಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಿರವಿ ಇಟ್ಟಿದ್ರು. ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದ ಮ್ಯಾನೇಜರ್, ಲಾಕರ್ನಿಂದ ಕದ್ದು, ಖಾಸಗಿ ಫೈನಾನ್ಸ್ನಲ್ಲಿ ಅಡವಿಟ್ಟು ಕೋಟಿ ಕೋಟಿ ಸಾಲ ಪಡೆದಿದ್ದ. ಕೊನೆಗೂ ಖತರ್ನಾಕ್ ಬ್ಯಾಂಕ್ ಮ್ಯಾನೇಜರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಕೃಷಿ ಪತ್ತಿನ ವ್ಯವಸಾಯ ಸಹಕಾರ ಸಂಘದಲ್ಲಿ ರೈತರು ಅಡವಿಟ್ಟಿದ್ದ ಚಿನ್ನವನ್ನ ಎಗರಿಸಿದ್ದ ಮ್ಯಾನೇಜರ್ ಕೊನೆಗೂ ಪೊಲೀಸರ ಬೆಲೆಗೆ ಬಿದ್ದಿದ್ದಾನೆ.
ಗೋವಿಂದಪ್ಪ ತನ್ನ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ರೈತರ ಒಡವೆಗಳನ್ನ ಲಾಕರ್ನಿಂದ ಸುಮಾರು 8 ಕೆ.ಜಿ. 530 ಗ್ರಾಂ ಒಡವೆಗಳನ್ನ ಕಳ್ಳತನ ಮಾಡಿ ಇತರೆ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಗಿರವಿ ಇಟ್ಟಿದ್ದ. ಈ ಸಂಬಂಧ ಕನಕಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಮಾಡಿ ಖತರ್ನಾಕ್ ಆರೋಪಿ ಗೋವಿಂದಪ್ಪನ್ನ ಬಂಧಿಸಿ, ಚಿನ್ನಾಭರಣಗಳನ್ನ ಜಪ್ತಿ ಮಾಡಿದ್ದಾರೆ.
ಅಂದಹಾಗೆ ಮ್ಯಾನೇಜರ್ ಗೋವಿಂದಪ್ಪ, ಚಿನ್ನಾಭರಣಗಳನ್ನ ಅಡ ಇಟ್ಟು ಬಂದ ಹಣದಿಂದ ರೈಸ್ ಪುಲ್ಲಿಂಗ್ನಲ್ಲಿ ತೊಡಗಿ ಕೋಟಿ ಕೋಟಿ ಹಣ ಕಳೆದುಕೊಂಡಿದ್ದ. ಇದೀಗ ಪೊಲೀಸರು ಕನಕಪುರ ಟೌನಿನಲ್ಲಿರುವ ಮಣಪ್ಪುರಂ , ಮುತ್ತೂಟ್ ಫೈನಾನ್ಸ್, ಮುತ್ತೂಟ್ ಫಿನ್ಕಾರ್ಫ್, ಐಐಎಫ್ಎಲ್, ಕೋಸಮಟ್ಟಂ ಫೈನಾನ್ಸ್ ಗಳಲ್ಲಿ ಹಾಗೂ ರಾಮದೇವ್ ಬ್ಯಾಂಕರ್ಸ್ನಲ್ಲಿ ಅಡಮಾನವಿಟ್ಟಿದ್ದ 3 ಕೋಟಿ 37 ಲಕ್ಷದ 86 ಸಾವಿರ ರೂ. ಬೆಲೆಬಾಳುವ 7 ಕೆಜಿ 113 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ.
ಒಟ್ಟಾರೆ ಸಹಕಾರ ಸಂಘದಲ್ಲಿ ಕಳ್ಳತನವಾಗಿದ್ದ ಒಡವೆಗಳೂ ವಾಪಸ್ ಸಂಘದ ಖಜಾನೆ ಸೇರಿವೆ. ಚಿನ್ನಾಭರಣ ಕಳೆದುಕೊಂಡಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.