ಬೆಂಗಳೂರು: ಈಗಾಗಲೇ ನಡೆಯಬೇಕಿದ್ದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯದೇ ಮುಂದೆ ಹೋಗುತ್ತಲೇ ಇದೆ.ಈ ವೇಳೆಗೆ ಪರೀಕ್ಷೆಗಳು ಮುಗಿದು ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ತಯಾರಿಗಳು ನಡೆಯಬೇಕಿತ್ತು. ಆದರೆ ಕೊರೋನಾದಿಂದ ಈ ಬಾರಿ ಶೈಕ್ಷಣಿಕ ವರ್ಷಕ್ಕೂ ಹೊಡೆತ ಬಿದ್ದಿದ್ದು, ತರಗತಿಗಳು ತಡವಾಗಿ ಪ್ರಾರಂಭವಾಗುತ್ತಿದೆ.
ಹೌದು. ಜೂನ್ನಲ್ಲಿ ಪ್ರಾರಂಭವಾಗಬೇಕಾಗಿದ್ದ ಶೈಕ್ಷಣಿಕ ವರ್ಷವು ಇನ್ನಷ್ಟು ವಿಳಂಭವಾಗುವ ಸಾಧ್ಯತೆಯಿದೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದ ಪಾಠಗಳು ಯಾವಾಗ ಮುಗಿಯಲಿವೆ? ವಾರ್ಷಿಕ ಪರೀಕ್ಷೆಗಳು ಯಾವಾಗ ಮುಗಿಯಲಿವೆ? ಎಂಬುದರ ಬಗ್ಗೆ ಚಿಂತಿಸುವಂತಾಗಿದೆ. ಆದರೆ ಇದರ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಮುಂದಿನ ಶೈಕ್ಷಣಿಕ ಅವಧಿ ಯಾವಾಗ ಪ್ರಾರಂಭವಾಗಲಿದೆಯೋ ಅದಕ್ಕೆ ತಕ್ಕಂತೆ ಪಠ್ಯಗಳನ್ನು ರಚಿಸಲಾಗುತ್ತದೆ. 1 ರಿಂದ 10 ನೇ ತರಗತಿ ಹಾಗೂ ಪದವಿ ಪೂರ್ವ ಶಿಕ್ಷಣದ ಪಠ್ಯಕ್ರಮದಲ್ಲಿ ಹೆಚ್ಚುವರಿಯಾಗಿರುವ ಪಠ್ಯವನ್ನು ಗುರುತಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.