ಶಿವಮೊಗ್ಗ : ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳಲ್ಲಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಕ್ಕೆ, ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ, 45 ನೇ ಸ್ಥಾನ ದೊರೆತಿದೆ. ಶಿವಮೊಗ್ಗದ ಬಿ.ಆರ್.ಪಿ.ಯ ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಗೆ, ಈ ಸ್ಥಾನ ಲಭಿಸಿರುವುದು ಇದೀಗ ಶಿವಮೊಗ್ಗಕ್ಕೆ ಹೆಮ್ಮೆಯ ವಿಚಾರವಾಗಿದೆ. ಜಾಗತಿಕ ರ್ಯಾಂಕಿಂಗ್ ಅನ್ನು ನಿರ್ಧರಿಸುವ ಪ್ರತಿಷ್ಠಿತ ಸೈಮ್ಯಾಗೋ ಪಟ್ಟಿ ಬಿಡುಗಡೆಗೊಂಡಿದ್ದು, ರಾಜ್ಯದ ಇತರೆ ವಿಶ್ವ ವಿದ್ಯಾಲಯಗಳನ್ನು ಹಿಂದಿಕ್ಕಿರುವ ಕುವೆಂಪು ವಿಶ್ವವಿದ್ಯಾಲಯ 45 ನೇ ಸ್ಥಾನ ಪಡೆದುಕೊಂಡಿದೆ.
ಜಗತ್ತಿನಾದ್ಯಂತ ವಿಜ್ಞಾನ ಸಂಶೋಧನಾ ಪ್ರಕಟಣೆಗಳ ಶ್ರೇಷ್ಠತೆಯನ್ನು ಅಳೆಯುವ ಸ್ಕೋಪಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸಮೀಕ್ಷೆ ಕೈಗೊಳ್ಳುವ ಸೈಮ್ಯಾಗೋ ಸಂಸ್ಥೆಯು, ಜಾಗತಿಕ ಮಟ್ಟದಲ್ಲಿ, ಸರ್ಕಾರಿ, ಖಾಸಗಿ, ಆರೋಗ್ಯ, ಉನ್ನತ ಶಿಕ್ಷಣ ಮತ್ತು ಇತರೆ ಕ್ಷೇತ್ರಗಳ ವಿಭಾಗಗಳಲ್ಲಿ, 5,637 ಸಂಸ್ಥೆಗಳನ್ನೊಳಗೊಂಡ, 2018 ರ ಸಾಲಿನ ಸಮಗ್ರ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಈ ಪಟ್ಟಿಯಲ್ಲಿ ಕುವೆಂಪು ವಿವಿ ಸ್ಥಾನ ಪಡೆದುಕೊಂಡಿದೆ. ಸಂಶೋಧನಾ ಚಟುವಟಿಕೆ, ಆವಿಷ್ಕಾರಗಳು, ಹಾಗೂ ಅವುಗಳ ಸಾಮಾಜಿಕ ಪ್ರಭಾವವನ್ನು ರ್ಯಾಂಕಿಂಗ್ ಮಾನದಂಡಗಳಾಗಿ ಪರಿಗಣಿಸಲಾಗಿದ್ದು, ಇದು ಜಾಗತಿಕವಾಗಿ, ಅತ್ಯಂತ ವಿಶ್ವಾಸಾರ್ಹತೆಯನ್ನು ಹೊಂದಿದೆ.
ಅದರಂತೆ, ಸಾಂಪ್ರಾದಾಯಿಕ ಶೈಕ್ಷಣಿಕ ಕೋರ್ಸ್ ಗಳನ್ನು ನಡೆಸುವ ಜೊತೆ ಜೊತೆಯಲ್ಲಿಯೇ, ಸಂಶೋಧನೆಯಲ್ಲಿಯೂ ಗಮನಾರ್ಹ ಸಾಧನೆ ತೋರುತ್ತಿರುವ ಕುವೆಂಪು ವಿವಿ 5 ವಿಭಾಗಗಳನ್ನೊಳಗೊಂಡ ಸಮಗ್ರ ರ್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿವಿ 620 ನೇ ಸ್ಥಾನ ಗಳಿಸಿದೆ. ಇನ್ನು ಏಷ್ಯಾ ವಲಯದಲ್ಲಿ, 1,561 ಸಂಸ್ಥೆಗಳ ಪಟ್ಟಿಯಲ್ಲಿ, 289 ನೇ ಸ್ಥಾನ ಗಳಿಸಿದ್ದು, ಭಾರತ ದೇಶದ ಟಾಪ್ 50 ಸಂಸ್ಥೆಗಳ ಪಟ್ಟಿಯೊಳಗೆ ಕುವೆಂಪು ವಿವಿ ಈ ಸ್ಥಾನ ಗಿಟ್ಟಿಸಿದೆ. ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳ ಪೈಕಿ ಭಾರತೀಯ ವಿಜ್ಱಆನ ಸಂಸ್ಥೆ 7 ನೇ ಸ್ಥಾನದಲ್ಲಿದ್ದರೆ, ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ, 16 ನೇ ಸ್ಥಾನ ಪಡೆದಿದೆ. ರಾಜ್ಯದ ಸಾಂಪ್ರದಾಯಿಕ ವಿವಿ ಗಳ ಪೈಕಿ, ಕುವೆಂಪು ವಿವಿಯು ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ, ಈ ರ್ಯಾಂಕಿಂಗ್ ಪಡೆದಿದೆ.