ಶಿವಮೊಗ್ಗ : ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಆಯುರ್ವೇದಿಕ್ ಚಿಕಿತ್ಸೆ ಪಡೆದ ಸ್ವಾಮೀಜಿಯೊಬ್ಬರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೊರೊನಾಗೆ ಅಲೋಪತಿ ಜೊತೆಗೆ ಆಯುರ್ವೇದ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಬಹಳ ಖುಷಿಯಿಂದಲೇ ಆಸ್ಪತ್ರೆಯಿಂದ ಆಶ್ರಮಕ್ಕೆ ತೆರಳಿದ್ದಾರೆ. ಇನ್ನೂ 14 ದಿನಗಳ ಕಾಲ ಆಶ್ರಮದಲ್ಲಿ, ಕ್ವಾರಂಟೈನ್ ಲಿ ಇರಲಿದ್ದಾರೆ. ಯಾವುದೇ ಪ್ರವಾಸದ ಹಿಸ್ಟರಿ ಇಲ್ಲದೇ ಇದ್ದ ಸ್ವಾಮೀಜಿ ಗುಣಮುಖರಾಗಿದ್ದು, ಆಯುಷ್ ಇಲಾಖೆ ಅಧಿಕಾರಿಗಳು ಕೂಡ ಸಂತಸಗೊಂಡಿದ್ದಾರೆ. ಯಾವುದೇ ಪ್ರವಾಸದ ಹಿಸ್ಟರಿ ಇಲ್ಲದೇ, ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಾಯನಂದ ಸರಸ್ವತಿ ಸ್ವಾಮೀಜಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಭಕ್ತರ ಮೂಲಕ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಶಂಕೆ ವ್ಯಕ್ತವಾಗಿತ್ತು. ಈಗಾಗಲೇ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆಯುರ್ವೇದಿಕ್ ಔಷಧಿ ಪಡೆದು, ಸಂಪೂರ್ಣವಾಗಿ ಗುಣಮುಖರಾಗಿದ್ದು, ಇದು ಅವರ ಭಕ್ತರಲ್ಲಿ ಸಂತಸ ಮನೆ ಮಾಡಿದೆ. ಗುಣಮುಖರಾದ ಹಿನ್ನೆಲೆಯಲ್ಲಿ, ಇಂದು ರಾತ್ರಿ ಸ್ವಾಮೀಜಿಯವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಅಂದಹಾಗೆ, ಕೊರೋನಾ ಪಾಸಿಟಿವ್ ಬಂದವರಿಗೆ, ಚಿಕಿತ್ಸೆ ನೀಡುವಂತೆ, ಸ್ವಾಮೀಜಿಗೂ ಅಲೋಪಥಿ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸ್ವಾಮೀಜಿ ಆಯುರ್ವೇದ ಚಿಕಿತ್ಸೆ ಬಗ್ಗೆ ಅಪೇಕ್ಷೆ ಪಟ್ಟಿದ್ದರು. ನನಗೆ ಆಯುರ್ವೇದ ಚಿಕಿತ್ಸೆ ನೀಡಿ ಎಂದು ಅವರು ಪತ್ರ ಸಹ ಬರೆದಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ತಮಗೆ ಆಧುನಿಕ ವೈದ್ಯ ಪದ್ಧತಿಗೆ ಅನುಗುಣವಾಗಿ ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಅದರೆ ನಾನು ಬಾಲ್ಯದಿಂದಲೂ ಯಾವುದೇ ಖಾಯಿಲೆ ಬಂದರೂ, ಆಯುರ್ವೇದ ಚಿಕಿತ್ಸೆ ತೆಗೆದು ಕೊಳ್ಳುತ್ತಿದ್ದೇನೆ. ಹೀಗಾಗಿ ನನಗೆ ಆಯುರ್ವೇದ ಚಿಕಿತ್ಸೆ ಕೊಡುವಂತೆ ಮನವಿ ಮಾಡಿಕೊಂಡಿದ್ದರು. ಸನಾತನ ಪರಂಪರೆಯ ಆಯುರ್ವೇದ ಔಷಧೀಯ ಪದ್ಧತಿಯಲ್ಲಿ ನನಗೆ ಹೆಚ್ಚು ನಂಬಿಕೆ ಇದೆ. ಸಂರಕ್ಷಣೆಯ ವಿಷಯದಲ್ಲಿ ಆಯುರ್ವೇದ ಪದ್ಧತಿಗೆ ಮೊದಲ ಆದ್ಯತೆ ನೀಡುತ್ತೇನೆ. ಹೀಗಾಗಿ, ಕೋವಿಡ್-19 ಗೆ ಸೂಕ್ತ ಆಯುರ್ವೇದ ತಜ್ಞರಿಂದ ಚಿಕಿತ್ಸೆ ಕೊಡಿಸುವ ಏರ್ಪಾಡು ಮಾಡಬೇಕು ಎಂದು ಪತ್ರ ಬರೆದಿದ್ದರು. ಆಯುರ್ವೇದ ಚಿಕಿತ್ಸೆ ಪಡೆಯುವ ಸ್ವಾತಂತ್ರ್ಯ ನನಗೆ ಇದ್ದು ಅದನ್ನು ಮೊಟಕುಗೊಳಿಸದಂತೆ ಕೋರುತ್ತೇನೆ. ಚಿಕಿತ್ಸೆ ಪಡೆಯುವಾಗ ಏನಾದರೂ ನನಗೆ ಹಾನಿ ಅದರೆ ನಾನು ಮಾತ್ರ ಕಾರಣನಾಗಿರುತ್ತೇನೆ. ಅನ್ಯರ ಹೊಣೆಗಾರಿಕೆ ಏನೂ ಇರುವುದಿಲ್ಲ ಎಂದು ಪತ್ರದ ಮೂಲಕ ನಿವೇದಿಸಿಕೊಂಡಿದ್ದರು. ಹೀಗಾಗಿ ಸ್ವಾಮೀಜಿಯವರಿಗೆ ಜಿಲ್ಲಾಡಳಿತ, ಕಳೆದ ಮೂರು ದಿನಗಳಿಂದ ಆಯುರ್ವೇದಿಕ್ ಔಷಧಿ ನೀಡಿದ್ದು, ಇದೀಗ ಸ್ವಾಮೀಜಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೇ, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಮತ್ತು ಒಳ್ಳೆಯ ಸೌಕರ್ಯ ನೀಡಿದ್ದಕ್ಕೆ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ರು.
ಆಯುಷ್ ವೈದ್ಯಾಧಿಕಾರಿಗಳು ಮತ್ತು ಸಿಬ್ಭಂಧಿಗಳ ನಿರಂತರ ಚಿಕಿತ್ಸೆಯಿಂದಾಗಿ, ಇದೀಗ ಸ್ವಾಮೀಜಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಏನೇ ಆಗ್ಲೀ, ಒಂದುಕಡೆ, ಭಾರತ ದೇಶದ ಪರಂಪರೆಯಿಂದ ಬಂದಿರುವ ಆಯುರ್ವೇದದಲ್ಲಿ ಕೊರೋನಾಗೆ ಚಿಕಿತ್ಸೆ ಕೊಡುವುದಕ್ಕೆ ಅನುವು ಮಾಡಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದರೆ, ಮತ್ತೊಂದು ಕಡೆ, ಆಯುರ್ವೇದ ಚಿಕಿತ್ಸೆ ಪಡೆದ ಬಳಿಕ ಸ್ವಾಮೀಜಿ ಬಹಳಷ್ಟು ಬೇಗ ಚೇತರಿಕೆ ಕಂಡು ಬಂದಿರುವುದು ಆಶಾದಾಯಕವಾಗಿದೆ.