ಆನೇಕಲ್: ರಾಷ್ಟ್ರೀಯ ಹೆದ್ದಾರಿ 7 ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಂಡು ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತಲೇ ಇದೆ. ಅದೇ ರೀತಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ನೆರಳೂರು ಸಮೀಪದಲ್ಲಿ ಇದೀಗ ಜಿಂಕೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಬೆಂಗಳೂರು ಹಾಗೂ ಚೆನೈ ರಾಷ್ಟ್ರೀಯ ಹೆದ್ದಾರಿ 7 ರಲ್ಲಿನ ನೆರಳೂರು ಸಮೀಪ ಸುಮಾರು ನಾಲ್ಕು ವರ್ಷದ ಗಂಡು ಜಿಂಕೆಯು ಕಾಣಿಸಿಕೊಂಡಿದ್ದು, ಜಿಂಕೆಯನ್ನ ಕಂಡ ಜನರು ಅದನ್ನು ಹಿಡಿಯಲು ಹಾಗೂ ಪೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಗಾಬರಿಗೊಂಡ ಜಿಂಕೆಯು ಶೆಡ್ ಒಳಗೆ ಸೇರಿಕೊಂಡು ಹೊರ ಬಾರದೆ ಕೆಲ ಸಮಯ ಅಲ್ಲಿಯೇ ಅವಿತು ಕುಳಿತಿತ್ತು.
ಇನ್ನೂ ಈ ಬಗ್ಗೆ ವಿಷಯ ತಿಳಿದ ಕೂಡಲೆ ಅತ್ತಿಬೆಲೆ ಪೋಲೀಸರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಶೆಡ್ ಒಳಗೆ ಸೇರಿಕೊಂಡಿದ್ದ ಜಿಂಕೆಯನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಸಹ ಅದೇ ಹತ್ತಿರದಲ್ಲಿ ಎರಡು ಕಾಡೆಮ್ಮೆಗಳು ಸಹ ಕಾಣಿಸಿಕೊಂಡಿತ್ತು. ಇದೀಗ ಜಿಂಕೆ ಸಹ ಕಾಣಿಸಿಕೊಂಡಿದ್ದು, ಅರಣ್ಯ ಪ್ರದೇಶ ಜಿಂಕೆ ಕಾಣಿಸಿಕೊಂಡ ಸ್ಥಳದಿಂದ ಸುಮರು 2೦ ಕಿಮೀ ದೂರದಲ್ಲಿದೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಕಾಡು ಪ್ರಾಣಿಗಳ ಅಕ್ರಮ ಸಾಕಾಣಿಕೆ ಚಟುವಟಿಕೆ ನಡೆಯುತ್ತಿರುವ ಲಕ್ಷಣಗಳು ಕಾಣುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ತನಿಕೆ ಕೈಗೊಂಡು ಪ್ರಾಣಿಗಳ ಪ್ರತ್ಯಕ್ಷದ ಹಿಂದಿನ ರಹಸ್ಯ ಬಯಲು ಮಾಡಬೇಕಿದೆ.