ಅಯೋಧ್ಯೆ ಮಹಾ ತೀರ್ಪು ಪ್ರಕಟ : ವಿವಾದಿತ ಜಾಗ ರಾಮ್​ಲಲ್ಲಾಗೆ- ಇಲ್ಲಿದೆ ತೀರ್ಪಿನ ಮುಖ್ಯಾಂಶಗಳು

0
706

ನವದೆಹಲಿ : ಇಡೀ ದೇಶ ಬಹುಕಾಲದಿಂದ ಕಾಯುತ್ತಿದ್ದ ಅಯೋಧ್ಯಾ ತೀರ್ಪು ಹೊರಬಿದ್ದಿದ್ದು, ಶತಮಾನದ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್​ ನೇತೃತ್ವದ ಸುಪ್ರೀಂಕೋರ್ಟ್​ನ ಪಂಚ ಸದಸ್ಯ ಪೀಠ ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ನೀಡಿ ತೀರ್ಪು ಪ್ರಕಟಿಸಿದೆ. ಸುನ್ನಿ ವಕ್ಫ್​ಬೋರ್ಡಿಗೆ ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಜಾಗ ನೀಡುವಂತೆಯೂ ಪೀಠ ತಿಳಿಸಿದೆ.
ಸಿಜೆಐ ರಂಜನ್ ಗೊಗೊಯ್, ನ್ಯಾ ಎಸ್​​ ಎ ಬೊಬ್ಡೆ, ನ್ಯಾ ಡಿ ವೈ ಚಂದ್ರಚೂಡ್, ನ್ಯಾ ಅಶೋಕ್ ಭೂಷಣ್, ನ್ಯಾ. ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ ಮಂದಿರ ನಿರ್ಮಾಣದ ಹೊಣೆಯನ್ನು ಸರ್ಕಾರಕ್ಕೆ ನೀಡಿದ್ದು, ನಿರ್ವಹಣೆ ಜವಬ್ದಾರಿಯನ್ನು ಟ್ರಸ್ಟಿಗೆ ವಹಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.
ತೀರ್ಪಿನ ಮುಖ್ಯಾಂಶಗಳು
* ನಿರ್ಮೋಹಿ ಅಖಾಡದ ಅರ್ಜಿ ವಜಾ
* ಬಾಬ್ರಿ ಮಸೀದಿಯನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿಲ್ಲ. ವಿವಾದಿತ ಕಟ್ಟಡ ಇಸ್ಲಾಮಿಕ್ ಸಂರಚನೆ ಹೊಂದಿಲ್ಲ.
* ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಳ ಅಂತ ನಂಬಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಧಾರ್ಮಿಕ ಭಾವನೆಗಳಿವೆ. ಮುಸ್ಲೀಮರು ಆ ಜಾಗ ಬಾಬ್ರಿ ಮಸೀದಿಯದ್ದು ಅಂತಾರೆ. ಆದರೆ, ರಾಮ ಅಲ್ಲಿ ಜನಿಸಿದ್ದ ಎಂಬ ಹಿಂದುಗಳ ನಂಬಿಕೆ ವಿವಾದರಹಿತ.
* ಮಸೀದಿಗೆ ಹಾನಿ ಮಾಡಿ ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ.
* ವಿವಾದಿತ ಜಾಗ ರಾಮಲಲ್ಲಾಗೆ ಸೇರಿದ್ದು, ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಿ ಎಂದ ಕೋರ್ಟ್
* ಸುನ್ನಿ ವಕ್ಫ್​ಬೋರ್ಡಿಗೆ ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಜಾಗ ನೀಡುವಂತೆ ಆದೇಶ
* ಮಂದಿರ ನಿರ್ಮಾಣದ ಹೊಣೆಯನ್ನು ಸರ್ಕಾರಕ್ಕೆ ನೀಡಿದ್ದು, ನಿರ್ವಹಣೆ ಜವಬ್ದಾರಿ ಟ್ರಸ್ಟ್​​ಗೆ

ಕಳೆದ ಅಕ್ಟೋಬರ್ 16ರಂದು 40 ದಿನಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್​ ನವೆಂಬರ್ 17ರಂದು ನಿವೃತ್ತಿ ಹೊಂದುವ ಮುನ್ನ ಯಾವುದೇ ದಿನ ಬೇಕಾದರೂ ತೀರ್ಪು ಹೊರಬೀಳುವ ನಿರೀಕ್ಷೆಯಲ್ಲಿ ಅಯೋಧ್ಯೆ ಸೇರಿದಂತೆ ಇಡೀ ದೇಶದಲ್ಲಿ ಕಳೆದ ಕೆಲದಿನಗಳಿಂದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಇಂದು ತೀರ್ಪು ಹೊರ ಬೀಳಲಿದೆ ಎಂಬುದು ಖಚಿತವಾಗುತ್ತಿದ್ದಂತೆ ನಿನ್ನೆಯಿಂದ ಹೈ ಅಲರ್ಟ್​ ವಹಿಸಲಾಗಿತ್ತು.

ಶತಮಾನದ ವಿವಾದದ ಇತ್ತೀಚಿಗಿನ ಪ್ರಮುಖ ಘಟ್ಟಗಳು
* 2010 : ಅಲಹಬಾದ್​​​ ಹೈಕೋರ್ಟ್​​​ ವಿವಾದಿತ 2.77 ಎಕರೆ ಭೂಮಿಯನ್ನು ಮೂರು ಪಾಲು ಮಾಡಿ ಹಂಚಿತ್ತು. (ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ, ರಾಮ್ ಲಲ್ಲಾಗೆ ಸಮನಾಗಿ ಹಂಚಲಾಗಿತ್ತು)
* 2011 : ಅಲಹಬಾದ್​ ಹೈಕೋರ್ಟ್​ನ ತೀರ್ಪಿಗೆ ಸುಪ್ರೀಂಕೋರ್ಟಿಂದ ತಡೆ
* 2019 ಮಾರ್ಚ್​ 8 : ರಾಜಿ ಇತ್ಯರ್ಥಕ್ಕಾಗಿ ಸಂಧಾನ ಸಮಿತಿ ರಚನೆ
* 2019 ಆಗಸ್ಟ್​ 2 : ಸಂಧಾನ ವಿಫಲವಾದ ಬಗ್ಗೆ ಸಮಿತಿ ವರದಿ
* 2019 ಆಗಸ್ಟ್​ 6 : ಸಿಜೆಐ ರಂಜನ್ ಗೊಗೊಯ್ ನೇತೃತ್ವದಲ್ಲಿ 40 ದಿನಗಳ ವಿಚಾರಣೆ ಆರಂಭ
* 2019 ಅಕ್ಟೋಬರ್ 16 : ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​ ಪಂಚ ಸದಸ್ಯ ಪೀಠ

LEAVE A REPLY

Please enter your comment!
Please enter your name here