ಹುಬ್ಬಳ್ಳಿ : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಲ್ಕ ಸಂಗ್ರಹ ಹೆಚ್ಚಳ ವಿರೋಧಿಸಿ ಇಂದು ರಾಜ್ಯಾದ್ಯಂತ ಎಪಿಎಂಸಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ಎಪಿಎಂಸಿ ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿ ಜಗಜ್ಯೋತಿ ಬಸವೇಶ್ವರ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಸ್ಥಗಿತಗೊಂಡಿತ್ತು.
ರಾಜ್ಯದಾದ್ಯಂತ ಇಂದು ಸಾಂಕೇತಿಕವಾಗಿ ಎಪಿಎಂಸಿ ಬಂದ್ ಕರೆ ನೀಡಲಾಗಿತ್ತು. ಶೇ 0.35 ಇದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು ಸರ್ಕಾರ ಏಕಾಏಕಿ ಶೇ 1ಕ್ಕೆ ಹೆಚ್ಚಳ ಮಾಡಿದಕ್ಕೆ ವರ್ತಕರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯದಾದ್ಯಂತ ಎಪಿಎಂಸಿ ಬಂದ್ ಕರೆ ನೀಡಿದ್ದರು ಇದಕ್ಕೆ,ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಡಿ. 23ರಂದು ಬೆಂಗಳೂರಿನಲ್ಲಿ ಎಫ್ಕೆಸಿಸಿಐ ಹಾಗೂ ಕೆಸಿಸಿಐ ನೇತೃತ್ವದಲ್ಲಿ ರಾಜ್ಯದ ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಯಲಿದ್ದು, ಶುಲ್ಕ ಹೆಚ್ಚಳ ಹಿಂಪಡೆಯಲು ವಿನಂತಿಸಿ ಸಚಿವರಿಗೆ ಮನವಿ ಸಲ್ಲಿಕೆ ಮಾಡಲಾಗುತ್ತದೆ. ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಎಪಿಎಂಸಿ ಬಂದ್ ಮಾಡಲು ನಿರ್ಣಯ ಕೈಗೊಳ್ಳಲು ನಿರ್ಧಾರ ಕೈಗೊಳ್ಳಲಾಗುವುದೆಂದು ವರ್ತಕರು ತಿಳಿಸಿದ್ದಾರೆ.