Monday, May 23, 2022
Powertv Logo
Homeತಂತ್ರಜ್ಞಾನಭೂಮಿಯ ಭವಿಷ್ಯಕ್ಕಾಗಿ ನಾಸಾದ ಹೊಸ ಪ್ರಯೋಗ

ಭೂಮಿಯ ಭವಿಷ್ಯಕ್ಕಾಗಿ ನಾಸಾದ ಹೊಸ ಪ್ರಯೋಗ

ಕಳೆದ 50 ವರ್ಷಗಳ ಹಿಂದೆ ಚಂದ್ರನ ಮೇಲೆ ಮಾನವ ಕಾಲಿಡೋ ಹಾಗೆ ಮಾಡಿದ್ದ ನಾಸಾ, ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಯಶಸ್ಸನ್ನ ಸಾಧಿಸಿದೆ. ಆ ಮೂಲಕ ಮುಂದೆ ಈ ಭೂಮಿಗೆ ಎದುರಾಗಲಿರುವ ಆಪತ್ತನ್ನ ತಡೆಯೋ ಕೆಲಸಕ್ಕೆ ಮುನ್ನುಡಿ ಬರೆದಿದೆ. ಅರೆ ಭೂಮಿಗೆ ಹೊಸ ಆಪತ್ತು ಎದುರಾಯ್ತಾ? ಇದನ್ನ ನಾಸಾ ಹೇಗೆ ತಡೆಯುತ್ತೆ ಅಂತ ಯೋಚ್ನೆ ಮಾಡ್ತಾ ಇದ್ದೀರಾ?

ಬಾಹ್ಯಾಕಾಶ ಅಂದ್ರೆನೇ ಹಾಗೆ ಅಲ್ಲಿ ಏನಾಗುತ್ತೆ ಅನ್ನೋದನ್ನ ಯಾರಿಂದಲೂ ಊಹಿಸೋದಕ್ಕೆ ಸಾಧ್ಯವಾಗಲ್ಲ.. ಯಾಕಂದ್ರೆ ಬಾಹ್ಯಾಕಾಶದಲ್ಲಿ ಸದಾ ಏನಾದ್ರೂ ಒಂದು ಭಿನ್ನ-ವಿಭಿನ್ನವಾದ ಬೆಳವಣಿಗೆಗೆಳು ನಡೀತಾನೆ ಇರುತ್ತೆ. ಇದೇ ಕಾರಣಕ್ಕೆ ಹಲವು ದೇಶಗಳ ವಿಜ್ಞಾನಿಗಳು ಹಗಲು-ರಾತ್ರಿ ಅಂತಾನೂ ನೋಡದೇ ಬಾಹ್ಯಾಕಾಶದಲ್ಲಿನ ಕ್ಷಣ-ಕ್ಷಣದ ಬೆಳವಣಿಗೆಗಳ ಮೇಲೆ ತೀವ್ರವಾದ ನಿಗಾ ವಹಿಸಿರ್ತಾರೆ.. ಇದರ ಪರಿಣಾಮವಾಗಿ ಇಂದಿಗೆ ವಿಜ್ಞಾನಿಗಳು ಹಲವು ಗ್ರಹಗಳ ಚಲನೆ ಹೇಗಿರುತ್ತೆ, ಭೂಮಿಯ ಅಕ್ಕ-ಪಕ್ಕದ ಗ್ರಹಗಳಲ್ಲಿ ಮಾನವ ವಾಸಿಸೋದಕ್ಕೆ ಸಾಧ್ಯವಾಗುತ್ತಾ, ಚಂದ್ರನಲ್ಲಿ ನೀರಿದ್ಯಾ, ಇಲ್ವಾ ಅನ್ನೋ ಬಗ್ಗೆ ಹಲವು ವರ್ಷಗಳಿಂದ ಅಧ್ಯಯನ ನಡೆಸಿದ್ದಾರೆ. ಇದ್ರ ಜೊತೆ ಜೊತೆಗೆ ಭೂಮಿಗೆ ಅಪಾಯವಿರುವ ಹಲವು ಕ್ಷುದ್ರಗ್ರಹಗಳ ಬಗ್ಗೆ ಕೂಡ ನಿಖರವಾದ ಮಾಹಿತಿಯನ್ನ ಕಲೆಹಾಕಿದ್ದಾರೆ. ಅವುಗಳಿಂದ ಅಪಾಯ ಇದ್ಯಾ ಇಲ್ವಾ ಅನ್ನೋ ಬಗ್ಗೆ ಮಾಹಿತಿ ಪಡೆದುಕೊಳ್ಳೋದ್ರ ಜೊತೆಗೆ ಅವುಗಳನ್ನ ಬಾಹ್ಯಾಕಾಶದಲ್ಲಿ ತಡೆಯೋದಕ್ಕೆ ಹಲವು ಮಾರ್ಗವನ್ನ ಕೂಡ ವಿಜ್ಞಾನಿಗಳು ಕಂಡುಹಿಡಿಯುತ್ತಿದ್ದಾರೆ.

ಸದ್ಯದ ಮಟ್ಟಿಗೆ ಈ ಕ್ಷುದ್ರಗ್ರಹಗಳ ಬಗ್ಗೆ ಹಲವು ವರ್ಷಗಳಿಂದ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ರಿಸರ್ಚ್​ ಮಾಡ್ತಿದ್ದು, ಇದಕ್ಕಾಗಿ ಪತ್ಯೇಕವಾದ ವಿಭಾಗ ಕೂಡ ಹೊಂದಿದೆ..ಕಳೆದ ಹಲವು ದಶಕಗಳಿಂದ ಭೂಮಿಯ ಹತ್ರ ಬಂದಿದ್ದ ಕ್ಷುದ್ರಗ್ರಗಳ ಬಗ್ಗೆ ಹಾಗು ಅವುಗಳ ಕಾರ್ಯವೈಖರಿಯ ಬಗ್ಗೆ ನಾಸಾ ಮಾಹಿತಿಯನ್ನ ಕೊಡುತ್ತಾ ಬಂದಿದೆ. ಜೊತೆಗೆ, ಅವುಗಳ ಉಗಮ, ಅವುಗಳಿಂದ ಆಗಬಹುದಾದ ಉಪಯೋಗಗಳ ಬಗ್ಗೆ ಇಂದಿಗೂ ಕೂಡ ಸಂಶೋಧನೆ ನಡೆಸುತ್ತಿದೆ. ಇದನ್ನ ಕೇವಲ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯೊಂದೇ ಮಾಡ್ತಿಲ್ಲ, ಬದಲಿಗೆ ಜಗತ್ತಿನ ಎಲ್ಲಾ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳು ಕೂಡ ಈ ಬಗ್ಗೆ ಅಧ್ಯಯನ ನಡೆಸಿಕೊಂಡು ಬಂದಿವೆ. ಆದ್ರೆ ಈ ಕ್ಷುದ್ರ ಗ್ರಹಗಳಿಂದ ಮುಂದೆ ಏನಾದ್ರೂ ಅಪಾಯ ಎದುರಾದ್ರೆ ಅವುಗಳನ್ನ ತಡೆಯೋದಕ್ಕೆ ಅಮೆರಿಕ ಈಗಾಗ್ಲೆ ಎಲ್ಲಾ ರೀತಿಯಾದ ತಯಾರಿಯನ್ನ ಮಾಡಿಟ್ಟುಕೊಂಡು ಬಂದಿದೆ.. ಇದೇ ಕಾರಣಕ್ಕೆ ಇದೀಗ ಬಾಹ್ಯಾಕಾಶದಿಂದ ಎದುರಾಗಬಹುದಾದ ಆಪತ್ತನ್ನ ತಡೆಯೋದಕ್ಕೆ ಕೂಡ ಅಮೆರಿಕ ಮುಂದಾಗಿದೆ.

ಹೌದು, ನಮ್ಮ ಸೋಲಾರ್​ ಸಿಸ್ಟಮ್​ ರಚನೆಯ ಸಂದರ್ಭದಲ್ಲಿ ಗ್ರಹಕಾಯಗಳಾಗದೇ ಉಳಿದ ಕ್ಷುದ್ರಗ್ರಹಗಳಿಂದ ಆಪತ್ತು ಖಂಡಿತ ಇದೆ. ಇದ್ರ ಜೊತೆಗೆ ಬಾಹ್ಯಾಕಾಶದ ತ್ಯಾಜ್ಯಗಳಿಂದ ಭೂಮಿಗೆ ನಿರಂತರವಾಗಿ ಹಲವು ರೀತಿಯಾದ ಬೆದರಿಕೆಗಳು ಆಗಾಗ ಕಂಡು ಬರ್ತಾ ಇದೆ. ಇನ್ನು ನಾವು ವಾಸಿಸುವ ಕ್ಷೀರಬ್ರಹ್ಮಾಂಡವು ತುಂಬಾ ದೊಡ್ಡದಾಗಿದ್ದು ಇದರ ವಿಸ್ತಾರ ಎಷ್ಟಿದೆ ಅನ್ನೋದನ್ನ ವಿಜ್ಞಾನಿಗಳಿಗೆ ಇಂದಿಗು ನಿಖರವಾಗಿ ಹೇಳೋಕಾಗಿಲ್ಲ. ಸದ್ಯದ ಮಟ್ಟಿಗೆ ನಮ್ಮ ಸೌರವ್ಯೂಹದೊಳಗೆ, ಸಾವಿರಾರು ಕ್ಷುದ್ರಗ್ರಹಗಳು ಮತ್ತು ಉಲ್ಕೆಗಳು ಬಾಹ್ಯಾಕಾಶದಲ್ಲಿದೆ. ಕೆಲವೊಮ್ಮೆ, ಈ ರಕ್ಕಸ ಬಾಹ್ಯಾಕಾಶ ಕಾಯಗಳು ಭೂಮಿಗೆ ಬಹಳ ಹತ್ತಿರ ಬರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಈ ಕ್ಷುದ್ರಗ್ರಹಗಳು ಭೂಮಿಯ ಮೇಲೆ ಕುಸಿಯುತ್ತವೆ. ಹೀಗೆ ಭೂಮಿಯ ಕಡೆ ಬರುವ ಕ್ಷುದ್ರಗ್ರಹ ಚಿಕ್ಕದಾಗಿದ್ರೆ, ಗ್ರಹದ ವಾತಾವರಣಕ್ಕೆ ಬಂದ ತಕ್ಷಣ ಸುಟ್ಟು ಕರಕಲಾಗಿ ಹೋಗುತ್ತೆ. ಆದ್ರೆ, ದೈತ್ಯ ಬಾಹ್ಯಾಕಾಶ ಕಾಯಗಳು ಸುಡೋದಿಲ್ಲ. ಬದಲಿಗೆ ಇವು ಒಂದು ಸಾವಿರ ಪರಮಾಣು ಬಾಂಬ್​ಗಳ ಸ್ಫೋಟಕ್ಕೆ ಸಮನಾಗಿದ್ದು ಭೂಮಿಗೆ ಅಪ್ಪಳಿಸಿದ ತಕ್ಷಣ ಅರ್ಧ ಭೂಮಿಯನ್ನೇ ನಾಶಮಾಡಿ ಬಿಡುತ್ತವೆ.

 

ಇದೇ ಕಾರಣಕ್ಕೆ ನಾಸಾದ ಕ್ಷುದ್ರಗ್ರಹ ಟ್ರ್ಯಾಕಿಂಗ್ ವ್ಯವಸ್ಥೆ ಈಗಾಗಲೇ ಭೂಮಿಯ ಸಮೀಪವಿರುವ ವಸ್ತುಗಳನ್ನ ಪತ್ತೆ ಹಚ್ಚಿದೆ. ಅವುಗಳಲ್ಲಿ ವರ್ಗೀಕರಿಸಬಹುದಾದ ನೂರಾರು ಕ್ಷುದ್ರಗ್ರಹಗಳನ್ನು ಪತ್ತೆ ಮಾಡಿದೆ. ಜೊತೆಗೆ ನಿಕಟ ಹಾರಾಟದ ಸಮಯವನ್ನು ಗಮನಿಸಿ, ಈ ಕ್ಷುದ್ರಗ್ರಹಗಳು ನಮ್ಮಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿವೆ ಅನ್ನೋದನ್ನ ಖಾತ್ರಿಪಡಿಸಿದೆ. ಹೀಗಾಗಿ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಕಡಿಮೆ ಅಂತ ಹೇಳಲಾಗ್ತಾ ಇದೆ. ಆದ್ರೆ ಕೆಲ ರಕ್ಕಸ ಬಾಹ್ಯಾಕಾಶ ಕಾಯಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಯನ್ನು ಹೆಚ್ಚಿಸುವ ಹಲವಾರು ಅಂಶಗಳಿದ್ದು, ಇವು ಭವಿಷ್ಯದಲ್ಲಿ ಭೂಮಿಗೆ ಅಪ್ಪಳಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಎಲ್ಲಾ ಕಾರಣಗಳಿಂದ ಭೂಮಿಗೆ ಸಮೀಪಿಸಲಿರುವ ಡಿಮೋಸ್​ ಅನ್ನೋ ಜೋಡಿ ಕ್ಷುದ್ರ ಗ್ರಹದ ಮೇಲೆ ಅಮೆರಿಕದ ನಾಸಾ ಸಂಸ್ಥೆ ಬಾಹ್ಯಾಕಾಶ ನೌಕೆಯೊಂದನ್ನ ಡಿಕ್ಕಿ ಹೊಡೆಸಲಿದೆ.. ಈ ಮೂಲಕ ಬಾಹ್ಯಾಕಾಶ ಲೋಕದಿಂದ ಭೂಮಿಗೆ ಭವಿಷ್ಯದಲ್ಲಿ ಎದುರಾಗಬಹುದಾದ ಆಪತ್ತನ್ನ ತಡೆಯೋ ಪ್ರಯೋಗಕ್ಕೆ ಅಮೆರಿಕಾ ಮುಂದಾಗಿದೆ.

ಕ್ಯಾಲಿಫೋರ್ನಿಯಾದ ವಾಂಡೆನ್​ ಬರ್ಗ್​ ಬಾಹ್ಯಾಕಾಶ ನೆಲೆಯಿಂದ, ಸ್ಪೇಸ್ಎಕ್ಸ್ ಫಾಲ್ಕನ್ 9 ರಾಕೆಟ್​ನಲ್ಲಿ DART ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಲಾಗಿದೆ. ಈ ನೌಕೆ ಗಂಟೆಗೆ 24,000 ಕಿ.ಮೀ ವೇಗದಲ್ಲಿ ಡಿಡಿಮೋಸ್ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಯಲಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಡಿಡಿಮೋಸ್ ಜೋಡಿ ಕ್ಷುದ್ರಗ್ರಹಗಳಲ್ಲಿ ಎರಡು ಕ್ಷುದ್ರಗ್ರಹಗಳಿವೆ. ಇವುಗಳಲ್ಲಿ ಒಂದು 163 ಮೀಟರ್ ಸುತ್ತಳತೆಯ ಚಿಕ್ಕ ಕ್ಷುದ್ರಗ್ರಹವಾಗಿದ್ದು, 780 ಮೀಟರ್ ಸುತ್ತಳತೆಯ ದೊಡ್ಡ ಕ್ಷುದ್ರಗ್ರಹವನ್ನು ಸುತ್ತುತ್ತಾ ಇದೆ. ಈ ಜೋಡಿ ಕ್ಷುದ್ರಗ್ರಹ ನಿಯರ್ ಅರ್ಥ್ ಆಬ್ಜೆಕ್ಟ್ ಪಟ್ಟಿಯಲ್ಲಿದ್ದು, ಇದಕ್ಕೆ DART ನೌಕೆಯನ್ನು ಡಿಕ್ಕಿ ಹೊಡೆಸಿ ಈ ಜೋಡಿ ಕ್ಷುದ್ರಗ್ರಹದ ಪಥ ಬದಲಿಸುವ ಪ್ರಯತ್ನಕ್ಕೆ ನಾಸಾ ಕೈ ಹಾಕಿದೆ. 1,210 ಪೌಂಡ್​ಗಳಷ್ಟು ತೂಕವಿರುವ DART ಬಾಹ್ಯಾಕಾಶ ನೌಕೆ, ಡಿಡಿಮೋಸ್ ಕ್ಷುದ್ರಗ್ರಹವನ್ನು ನಾಶಗೊಳಿಸಲ್ಲ. ಬದಲಿಗೆ ಅದರ ಪಥವನ್ನು ಬದಲಿಸಲಿದೆ ಅಂತ ನಾಸಾ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಈ ಪ್ರಯೋಗ ಯಶಸ್ವಿಯಾದ್ರೆ ಬಾಹ್ಯಾಕಾಶ ಕ್ಷೇತ್ರಕ್ಕೆ ಇದು ಮಹತ್ವದ ಮೈಲಿಗಲ್ಲಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದ ಒಂದು ವೇಳೆ ಮುಂದೆ ಯಾವತ್ತಾದ್ರೂ ಭೂಮಿಗೆ ಬಾಹ್ಯಾಕಾಶ ನೌಕೆ ಅಪ್ಪಳಿಸುವ ಸಾಧ್ಯತೆ ಇದ್ರೆ, ಅವುಗಳನ್ನ ಹೊಡೆದುರುಳಿಸುವ ಯೋಜನೆಗಳಿಗೆ ಈ ಪ್ರಯೋಗ ಉಪಯುಕ್ತವಾಗಲಿದೆ ಅನ್ನೋದು ಸಂಶೋಧಕರ ನಂಬಿಕೆ. ಹಾಗಾಗಿ ಈ ಪ್ರಯೋಗ ಯಶಸ್ವಿಯಾಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.

16 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments