ಆಫ್ರಿಕಾಗೆ ಶಾಕ್ ನೀಡುತ್ತಾ ಬಾಂಗ್ಲಾ?

0
168

ಇಂಟರ್ ನ್ಯಾಷನಲ್ ಕ್ರಿಕೆಟ್​​ನಲ್ಲಿ ತನ್ನದೇ ಆದ ಛಾಪು ಮೂಡಿಸಿರೋ ಪ್ರಬಲ ತಂಡ ದಕ್ಷಿಣ ಆಫ್ರಿಕಾ. ಘಟಾನುಘಟಿ ಕ್ರಿಕೆಟಿಗರನ್ನು ವಿಶ್ವಕ್ಕೆ ಪರಿಚಯಿಸಿರುವ ದಕ್ಷಿಣ ಆಫ್ರಿಕಾ ವರ್ಲ್ಡ್​​​​​ಕಪ್​ ಗೆಲ್ಲಬಲ್ಲ ತಾಕತ್ತು ಇರುವ ತಂಡಗಳ ಪೈಕಿ ಇವತ್ತಿಗೂ ಮುಂಚೂಣಿಯಲ್ಲಿ ನಿಲ್ಲುತ್ತೆ. ಆದ್ರೆ, ಪ್ರತಿಷ್ಠಿತ ಟೂರ್ನಿಯಲ್ಲಿ ಅಂತಿಮ ಘಟ್ಟದಲ್ಲಿ ಎಡವುತ್ತಾ, ಚೋಕರ್ಸ್ ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿದೆ.

2003ರಲ್ಲಿ ತವರಿನಲ್ಲೇ ನಡೆದ ವಿಶ್ವಕಪ್​ನಲ್ಲೂ ದಕ್ಷಿಣ ಆಫ್ರಿಕಾ ಎಡವಿತ್ತು. 2015ರ ವಿಶ್ವಕಪ್​ ಕಿವೀಸ್​​ ಎದುರು ಡಕ್​ ವರ್ತ್​​​ ಲೂಯಿಸ್​​ ನಿಯಮದಡಿ ಸೋಲುಂಡಿತ್ತು. ಇದೀಗ 12ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೂ ಅತಿಥೇಯ ಇಂಗ್ಲೆಂಡ್ ವಿರುದ್ಧ 104ರನ್ ಗಳ ಹೀನಾಯ ಸೋಲು ಕಂಡಿದೆ. ಟೂರ್ನಿಯನ್ನೇ ಸೋಲಿನೊಂದಿಗೆ ಆರಂಭಿಸಿರುವ ಸೌತ್ ಅಫ್ರಿಕಾ ಕಿಂಗ್ಸ್​​ಟನ್​ ಓವಲ್​ನಲ್ಲಿ ನಡೆಯುಲಿರುವ ಇಂದಿನ ಪಂದ್ಯದಲ್ಲಿ ಬಾಂಗ್ಲಾ ಹುಲಿಗಳನ್ನು ಎದುರಿಸಲಿದೆ.
ಮುಶ್ರಫೆ ಮೊರ್ತಾಜ ನಾಯಕತ್ವದ ಬಾಂಗ್ಲಾಕ್ಕೆ ಪ್ರಸಕ್ತ ಟೂರ್ನಿಯಲ್ಲಿ ಇದು ಮೊದಲ ಪಂದ್ಯ. ಆದ್ರೆ ಪಾಕ್ ಮತ್ತು ಭಾರತದ ವಿರುದ್ಧ ಪ್ರಾಕ್ಟಿಸ್ ಮ್ಯಾಚ್ ಆಡಿತ್ತು. ಪಾಕ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದರೆ, ಭಾರತದ ವಿರುದ್ಧ 95ರನ್ ಗಳ ಸೋಲನುಭವಿಸಿತ್ತು. ಇನ್ನು ದಕ್ಷಿಣ ಆಫ್ರಿಕಾ ಶ್ರೀಲಂಕಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ 87ರನ್​ಗಳಿಂದ ಗೆದ್ದು ಬೀಗಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾಗಿತ್ತು.
ವಿಶ್ವಕಪ್ ಇತಿಹಾಸವನ್ನೊಮ್ಮೆ ನೋಡಿದ್ರೆ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲದೇಶ 3 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. 2 ಪಂದ್ಯಗಳಲ್ಲಿ ಸೌತ್ ಆಫ್ರಿಕಾ ಗೆದ್ದಿದ್ದು 1 ಪಂದ್ಯದಲ್ಲಿ ಬಾಂಗ್ಲಾ ಹುಲಿಗಳು ಹರಿಣಗಳಿಗೆ ಶಾಕ್ ನೀಡಿದ್ದರು. 2007ರಲ್ಲಿ ವೆಸ್ಟ್ ಇಂಡೀಸ್​​ನಲ್ಲಿ ನಡೆದ ವಿಶ್ವಕಪ್​ನಲ್ಲಿ​ ಸೂಪರ್ 8 ಘಟ್ಟದಲ್ಲಿ ಬಾಂಗ್ಲಾ, ದಕ್ಷಿಣ ಆಫ್ರಿಕಾ ವಿರುದ್ಧ 67ರನ್ ಗಳ ಗೆಲುವು ದಾಖಲಿಸಿತ್ತು.
ಬಾಂಗ್ಲಾ ತಂಡವನ್ನ ದಕ್ಷಿಣ ಆಫ್ರಿಕಾ ಲಘುವಾಗಿ ಪರಿಗಣಿಸಿಲ್ಲ. ನಾಯಕ ಫಾಫ್ ಡುಪ್ಲೆಸಿಸ್, ಕ್ವಿಂಟನ್ ಡಿಕಾಕ್, ಹಶೀಮ್ ಆಮ್ಲಾ, ಡೇವಿಡ್ ಮಿಲ್ಲರ್ ಮೊದಲಾದ ಸ್ಟಾರ್ ಬ್ಯಾಟ್ಸ್​​ಮನ್ಸ್​​​, ಜೆಪಿ ಡುಮಿನಿಯಂಥಾ ಆಲ್ರೌಂಡರ್, ಇಮ್ರಾನ್ ತಾಹಿರ್, ಕಗಿಸೊ ರಬಾಡ, ಡೇಲ್ ಸ್ಟೈನ್ ರಂಥಾ ಬೌಲಿಂಗ್ ಅಸ್ತ್ರಗಳನ್ನು ಹೊಂದಿದೆ. ಆದ್ರೆ, ಗಾಯಗೊಂಡಿರುವ ಸ್ಟೈನ್ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯೋದು ಅನುಮಾನ.
ಬಾಂಗ್ಲಾ ಎಂಥಾ ತಂಡಕ್ಕಾದರೂ ಶಾಕ್​ ನೀಡೋ ಸಾಮರ್ಥ್ಯ ಹೊಂದಿದೆ. ನಾಯಕ ಮುಶ್ರಫೆ ಮೊರ್ತಾಜ, ಉಪನಾಯಕ ಶಕಿಬ್ ಅಲ್ ಹಸನ್, ತಮಿಮ್ ಇಕ್ಬಾಲ್, ಮುಷ್ಫೀಕರ್ ರಹೀಮ್, ರುಬೆಲ್ ಹೊಸೈನ್. ಮುಸ್ತಫಿಜುರ್ ರೆಹ್ಮಾನ್, ಮೆಹದಿ ಹಸನ್ ತಂಡಕ್ಕೆ ಯಾವುದೇ ಸಂದರ್ಭದಲ್ಲೂ ನೆರವಾಗಬಲ್ಲರು.
ಆಫ್ರಿಕಾ ಮತ್ತು ಬಾಂಗ್ಲಾ ಕದನ ಕಿಚ್ಚೆಬ್ಬಿಸೋದಂತೂ ದಿಟ. ಈ ಪಂದ್ಯ ಮುಂದಿನ ಹಂತಕ್ಕೆ ಹೋಗಲು ನಿರ್ಣಾಯಕ ಆಗೋದು ಕೂಡ ಖಚಿತ. ಹೀಗಾಗಿ ಹರಿಣಗಳು ಮತ್ತು ಹುಲಿಗಳ ನಡುವಿನ ಕದನ ಕ್ರಿಕೆಟ್ ಪ್ರಿಯರಿಗೆ ರಸದೌತಣ ಉಣಪಡಿಸೋದ್ರಲ್ಲಿ ಅನುಮಾನವೇ ಇಲ್ಲ. 

LEAVE A REPLY

Please enter your comment!
Please enter your name here