ಮಂಡ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ ಆಗಿದೆ.
ಜೊತೆಯಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದವರಿಂದ ಸರ್ಕಾರ ಪತನವಾಗಿ ಹಾಗೂ ಕುಮಾರಸ್ವಾಮಿ ಸಿಎಂಗಾದಿಯಿಂದ ಕೆಳಗಿಳಿಯುವಂತಾಯಿತು.
ಈ ಘಟನೆಯಿಂದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಅವರನ್ನ ನಂಬಿ, ಆರಾಧಿಸುತ್ತಿದ್ದ ಅಸಂಖ್ಯಾತ ಅಭಿಮಾನಿಗಳು, ಬೆಂಬಲಿಗರು ಆ ಕಹಿ ಘಟನೆಯಿಂದ ತುಂಬಾ ನೊಂದಿದ್ದರು.
ಇಂದಿಗೂ ಆ ನೋವಿನಿಂದ ಹೆಚ್ಡಿಕೆ ಆಗಲಿ, ಅವರ ಬೆಂಬಲಿಗರಾಗಲಿ ಹೊರ ಬಂದಿಲ್ಲ.
ಇಂದಿಗೆ ಆ ಘಟನೆ ನಡೆದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಕುಮಾರಸ್ವಾಮಿ ಅವರ ಅಭಿಮಾನಿಗಳು ವಿನೂತನ ಅಭಿಯಾನವೊಂದನ್ನ ಶುರು ಮಾಡಿದ್ದಾರೆ.
Sorry ಕುಮಾರಣ್ಣ ಅಭಿಯಾನ:
“Sorry ಕುಮಾರಣ್ಣ, ಕ್ಷಮಿಸಿ ಬಿಡಿ ಕುಮಾರಣ್ಣ, ಕುಮಾರಣ್ಣ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು” ಹೆಸರಿನ ಅಭಿಯಾನವನ್ನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರು ಮಾಡಿದ್ದಾರೆ.
ಅಧಿಕಾರದಲ್ಲಿ ಇಲ್ಲದ ನಿಮ್ಮನ್ನ ನೋಡೋಕೆ ನಮ್ಮಿಂದ ಸಾಧ್ಯವಿಲ್ಲ. ನಂಬಿಕೆ ದ್ರೋಹಿಗಳು ಮಾಡಿದ ತಪ್ಪಿಗೆ ನಾವು ಕ್ಷಮೆ ಕೋರುತ್ತೇವೆ. ಅತಿಯಾಗಿ ನಂಬಿ, ನೀವೇ ಸಾಕಿ, ಬೆಳೆಸಿದವರು, ಗೆಲ್ಲಿಸಿದವರೇ ಇಂದು ನಿಮ್ಮ ಈ ಸ್ಥಿತಿಗೆ ಕಾರಣರಾಗಿದ್ದಾರೆ. ನಾವೆಂದೂ ಅವರನ್ನ ಕ್ಷಮಿಸೋದಿಲ್ಲ ಅಂತಾ ಕಿಡಿಕಾರಿದ್ದಾರೆ.
ಹೆಚ್ಡಿಕೆ ಸಾಧನೆ, ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ:
ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಮಾಡಿದ ಸಾಲಮನ್ನಾ, ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ, ಕೃಷಿ, ರೈತರು, ನೀರಾವರಿ, ಬಡವರು, ಹಿಂದುಳಿದವರು, ದಲಿತರು, ಉತ್ತರ ಕರ್ನಾಟಕ ಅಭಿವೃದ್ದಿ ಕೈಗೊಂಡಿದ್ದ ಯೋಜನೆಗಳ ಪಟ್ಟಿಗಳನ್ನ ಬಿಡುಗಡೆ ಮಾಡುವ ಮೂಲಕ ಕುಮಾರಸ್ವಾಮಿ ಅವರ ಕೊಡುಗೆ, ಸಾಧನೆಯನ್ನ ಜನರಿಗೆ ತಲುಪಿಸುವ ಪ್ರಯತ್ನ ಮಾಡ್ತಿದ್ದಾರೆ.
ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು:
ಜನಪರ, ರೈತರ ಪರ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂಬ ಘೋಷಣೆಯುಳ್ಳ ಪೋಸ್ಟ್ ಗಳನ್ನ ತಮ್ಮ ತಮ್ಮ ವಾಟ್ಸಾಪ್ ಮತ್ತು ಫೇಸ್ಬುಕ್ ಪೇಜ್ ನಲ್ಲಿ ಹಾಕುವ ಮೂಲಕ ಮತ್ತೊಮ್ಮೆ ಕುಮಾರಣ್ಣನ ಮುಖ್ಯಮಂತ್ರಿ ಮಾಡುವ ಸಂಕಲ್ಪ ಮಾಡುತ್ತಿದ್ದಾರೆ.
–ಡಿ.ಶಶಿಕುಮಾರ್, ಮಂಡ್ಯ