ಯಾದಗಿರಿ : ಕೊಟ್ಟ ಮಾತಿನಂತೆ ಬಾಲಿವುಡ್ ಖ್ಯಾತ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಜಿಲ್ಲೆಯ ರಾಮಸಮುದ್ರ ಗ್ರಾಮದ ಬಡ ದಂಪತಿಯ ಕುಟುಂಬಕ್ಕೆ ನೆರವು ನೀಡಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ರಾಮಸಮುದ್ರ ಗ್ರಾಮದ ನಾಗರಾಜ್ ಮತ್ತು ಪದ್ಮ ದಂಪತಿಗೆ ಮುದ್ದಾದ ತ್ರಿವಳಿ ಗಂಡು ಮಕ್ಕಳು ಜನಸಿದ್ದವು. ಆದರೆ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜ್ ದಂಪತಿಗೆ ಚಿಕಿತ್ಸೆಗೆ ಮತ್ತು ಮೂವರು ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದು ಸೇರಿದಂತೆ ಜೀವನ ನಿರ್ವಹಣೆ ಹೇಗೆ ಮಾಡೋದು ಎಂಬ ಚಿಂತೆ ಕಾಡತೊಡಗಿತ್ತು. ಇದನ್ನ ಗಮನಿಸಿದ ಸ್ಥಳೀಯ ಪತ್ರಕರ್ತ ಮಲ್ಲಿಕಾರ್ಜುನ ಹತ್ತಿಕೂಣಿ ಎಂಬುವರು, ಬಾಲಿವುಡ್ ನಟ ಸೋನು ಸೂದ್ ಗಮನಕ್ಕೆ ತಂದು ಸಹಾಯ ಮಾಡಿ ಅಂತಾ ವಾಟ್ಸಪ್ ಮೂಲಕ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಸ್ಪಂದಿಸಿದ್ದ ಸೋನು ಸೂದ್, ಕುಟುಂಬಕ್ಕೆ ನೆರವು ನೀಡುವುದಾಗಿ ಮತ್ತು ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಆಮೇಜಾನ್ ಕೋರಿಯರ್ ಮೂಲಕ ನಾಗರಾಜ್ ಕುಟುಂಬಕ್ಕೆ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಸಾಬೂನು, ಕಂದಮ್ಮಗಳಿಗೆ ಬೇಕಾಗುವ ಸಾಮಗ್ರಿಗಳು ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳನ್ನು ಕೊರಿಯರ್ ಮೂಲಕ ರವಾನಿಸಿದ್ದು, ಸೋನು ಸೂದ್ ಸಹಾಯಕ್ಕೆ ನಾಗರಾಜ್ ಕುಟುಂಬ ಧನ್ಯವಾದಗಳನ್ನ ಹೇಳಿದೆ. ಅಲ್ಲದೇ ಕೊರೊನಾ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರಿಗೆ ತಮ್ಮ ತಮ್ಮ ಊರುಗಳಿಗೆ ತೆರಳಲು ಅನುವು ಮಾಡಿಕೊಟ್ಟಿದ್ದ ಸೋನು ಸೂದ್, ಇದೀಗ ಬಡ ಕುಟುಂಬವೊಂದಕ್ಕೆ ಸಹಾಯ ಮಾಡುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.
ಯಾದಗಿರಿ ದಂಪತಿಗೆ ನೆರವಾದ ಬಾಲಿವುಡ್ ನಟ ಸೋನು ಸೂದ್..!
– ಅನಿಲ್ಸ್ವಾಮಿ