ಬೆಂಗಳೂರು : ನಭೋಮಂಡಲದ ಕೌತುಕ, ವರ್ಷದ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವೂ ಕೆಟ್ಟ ಪರಿಣಾಮ ಬೀರುತ್ತದೆ ಅಂತಾರೆ. ಸೂರ್ಯಗ್ರಹಣದ ದಿನವೇ, ಶನಿ ಅಮಾವಾಸ್ಯೆ ಕೂಡ ಬಂದಿರೋದು ಇನ್ನೊಂದು ಕಾಕತಾಳೀಯ.
ನಾಳೆ ನಭೋಮಂಡಲದಲ್ಲಿ ಸೂರ್ಯನ ಮೇಲೆ ಗ್ರಹಣದ ಕಾರ್ಮೋಡ ಇರಲಿದೆ. ಆದ್ರೆ ಭಾರತದಲ್ಲಿ ನಭೋಮಂಡಲದ ಈ ವಿಸ್ಮಯ ಗೋಚರಿಸಲ್ಲ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ. ಸೂರ್ಯನಿಗೆ ಅಥವಾ ಚಂದ್ರನಿಗೆ ಗ್ರಹಣ ಬಂದ್ರೆ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಮಾತ್ರವಲ್ಲದೇ ಭೂಮಿಯ ಮೇಲೆ ಗ್ರಹಣದ ಕರಿಛಾಯೆ ಬೀಳಲಿದೆ ಎನ್ನುವ ಪ್ರತೀತಿ ಇದೆ.
ಭಾರತದ ಸಮಯದ ಪ್ರಕಾರ, ಸೂರ್ಯಗ್ರಹಣವು ಏಪ್ರಿಲ್ 30 ರಂದು ಮಧ್ಯಾಹ್ನ 12:15 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಿಗ್ಗೆ 4:07 ರವರೆಗೆ ಇರುತ್ತದೆ. ಇದು ಅಮೇರಿಕಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಇನ್ನು ಅದೇ ದಿನ ಶನಿ ಅಮಾವಾಸ್ಯೆಯೂ ಇದೆ. ಹೀಗಾಗಿ ಈ ಬಾರಿಯ ಸೂರ್ಯಗ್ರಹಣ ಹೆಚ್ಚು ಪ್ರಭಾವಶಾಲಿ ಅನ್ನೋದು ಜ್ಯೋತಿಷ್ಯ ಶಾಸ್ತ್ರದ ಅಂದಾಜು.