ಹುಬ್ಬಳ್ಳಿ : ಅದು ಸುಂದರ ಸಂಜೆ..ಅಲ್ಲಿ ಸಾವಿರಾರು ಮಂದಿ ಕಲಾಪ್ರೇಮಿಗಳು ನೆರೆದಿದ್ದರು. ಬಿಡುವಿಲ್ಲದ ಕೆಲಸಗಳಿಂದ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ಬಯಸಿ ಸೇರಿದ್ದ ಅವರಿಗೆಲ್ಲಾ ಕಲಾವಿದರು ನೃತ್ಯ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ಉಣಬಡಿಸಿದರು. ಒಂದೇ ಮಾತಲ್ಲಿ ಹೇಳ್ಬೇಕಂದ್ರೆ ಆ ಮುಸ್ಸಂಜೆಯನ್ನು ಸಾಂಸ್ಕೃತಿಕ ವೈಭವ ರಂಗೇರಿಸಿತ್ತು.
ಹೌದು ಇದು ಭಾನುವಾರ ಹುಬ್ಬಳ್ಳಿಯ ಮಹಾವೀರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ನಡೆದ ಸಾಂಸ್ಕೃತಿಕ ಸಂಜೆಯ ಝಲಕ್. ಪ್ರಸಿದ್ಧ ಜೈನ ಮಂಡಳಗಳಲ್ಲಿ ಒಂದಾದ ಶಾಂತಿನಾಥ ಮಹಿಳಾ ಮಂಡಳದ 56ನೇ ವಾರ್ಷಿಕೋತ್ಸವದ ಪ್ರಯುಕ್ತ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಾಂಸ್ಕೃತಿಕ ಹಬ್ಬದಲ್ಲಿ ಬೆಡಗಿಯರ ನೃತ್ಯಕ್ಕೆ ವೇದಿಕೆಯೇ ನಾಚಿ ನೀರಾಯಿತೆಂದ್ರೆ ಅತಿಶಯೋಕ್ತಿಯಲ್ಲ.
ಸಿನಿಮಾ ನೃತ್ಯಗಳು, ಸ್ವಚ್ಛಭಾರತ ಅಭಿಯಾನ ನಾಟಕ, ಕವ್ವಾಲಿ ಮತ್ತು ನೀಲಂ ಜೈನ್ರವರ ಸೋಲೋ ಡ್ಯಾನ್ಸ್ ಪ್ರೇಕ್ಷಕರಿಗೆ ಬಹಳ ಖುಷಿಕೊಟ್ಟವು.
ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಸರೋಜ ಭೈರಿ, ”ಆರೋಗ್ಯಕ್ಕಿಂತ ದೊಡ್ಡ ಸಂಪತ್ತಿಲ್ಲ. ಜಂಕ್ಫುಡ್ಗಳನ್ನು ತಿಂದು ಆರೋಗ್ಯ ಹಾಳುಮಾಡಿಕೊಳ್ಳಬೇಡಿ” ಎಂದು ಕಿವಿಮಾತು ಹೇಳಿದ್ರು. ಅಲ್ಲದೆ ಒತ್ತಡಗಳನ್ನು ನಿಭಾಯಿಸುವ ಬಗ್ಗೆ ವಿವರಿಸಿದ್ರು.
ಶಾಂತಿನಾಥ ಮಹಿಳಾ ಮಂಡಳದ ಅಧ್ಯಕ್ಷೆ ಸುಜಾತಾ ಗೌಡ, ಮಾಜಿ ಅಧ್ಯಕ್ಷೆ ಸುನಂದಾ ಗೊಡಟಕಿ, ಉಪಾಧ್ಯಕ್ಷೆ ಸುಧಾ ಶಿರಗುಪ್ಪಿ ಪ್ರಮುಖರಾದ ಸರೋಜ ಗುಗ್ಗರಿ, ನಯನಾ ಗೊಡಟಕಿ, ಮೀನಾ ಭಾಗಿ, ಪದ್ಮಜಾ ಗರಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.